×
Ad

'ಮಾಜಿ ಮುಖ್ಯಮಂತ್ರಿಗಳ ಟ್ವಿಟರ್ ಸಮರ' ಪರಸ್ಪರ ಕಾಲೆಳೆದುಕೊಂಡ ಸಿದ್ದರಾಮಯ್ಯ- ಡಿವಿಎಸ್‌

Update: 2018-12-31 17:39 IST

ಬೆಂಗಳೂರು, ಡಿ. 31: ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಟ್ವಿಟರ್ ಸಮರ ಆರಂಭಿಸಿದ್ದು, ಪರಸ್ಪರ ಕಾಲೆಳೆದುಕೊಂಡಿದ್ದಾರೆ.

‘ಕುದುರೆ ವ್ಯಾಪಾರಕ್ಕೆ ನಿಂತಿರುವ ಬಿಜೆಪಿ ಪ್ರತಿ ಶಾಸಕರಿಗೆ 25ರಿಂದ 30 ಕೋಟಿ ರೂ.ಹಣ ನೀಡಿ ಖರೀದಿಸಲು ಮುಂದಾಗಿದೆ. ಅವರು ಭ್ರಷ್ಟಾಚಾರಿಗಳಲ್ಲದಿದ್ದರೆ ಇಷ್ಟು ದೊಡ್ಡಮೊತ್ತದ ಹಣ ಎಲ್ಲಿಂದ ಬರುತ್ತದೆ? ಮೈತ್ರಿ ಸರಕಾರ ಬೀಳಿಸಲು ಪ್ರಯತ್ನಿಸುತ್ತಿರುವುದು ಒಂದನ್ನು ಬಿಟ್ಟು ವಿಪಕ್ಷವಾಗಿ ಬಿಜೆಪಿ ಇಷ್ಟು ದಿನ ಬೇರೆ ಏನು ಮಾಡಿದೆ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವಿಟ್ ಮಾಡಿದ್ದರು.

ಇದಕ್ಕೆ ಪ್ರಕ್ರಿಯೆ ನೀಡಿರುವ ಕೇಂದ್ರ ಸಚಿವ ಸದಾನಂದಗೌಡ, ‘ಕುದುರೆ ಏರಲಾರದವನು ಧೀರನೂ ಅಲ್ಲ ಶೂರನೂ ಅಲ್ಲ. ನಿಮ್ಮ ಪಕ್ಷದ ಹುಳುಕು ಮುಚ್ಚಿ ಹಾಕಿಕ್ಕೊಳ್ಳಲು ಇದೊಂದು ಹೊಸ ಪ್ರಹಸನ. ಮುಲಾಜಿನ ಸರಕಾರ ನಡೆಸಲು ಮುಖ್ಯಮಂತ್ರಿಗೆ ಕೈ ಜೋಡಿಸಿ, ಕನ್ನಡಿಗರು ಮುಗ್ಧರು ಮತ್ತು ಮೂರ್ಖರಲ್ಲ ನಿಮ್ಮ ಗಿಲೀಟು ಮಾತು ನಂಬಲು’ ಎಂದು ಟ್ವಿಟರ್ ಮೂಲಕ ಸಿದ್ದರಾಮಯ್ಯನವರ ಕಾಲೆಳೆದಿದ್ದಾರೆ.

ಈ ಟ್ವಿಟ್‌ಗೆ ಟ್ವಿಟರ್ ಮೂಲಕವೇ ಪ್ರತ್ಯುತ್ತರ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ‘ಸದಾನಂದಗೌಡ ಅವರೇ, ನಿಮ್ಮ ಅನುಭವವನ್ನು ಸರಿಯಾಗಿ ಹೇಳಿದ್ದೀರಿ, ಕುದುರೆ ಏರಲಾರದವನು ಶೂರನೂ ಅಲ್ಲ, ಧೀರನೂ ಅಲ್ಲ... ಎಷ್ಟೆಂದರೂ, ಹನ್ನೊಂದು ತಿಂಗಳಲ್ಲಿಯೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಓಡಿ ಹೋದವರಲ್ವೇ ನೀವು’ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಮಧ್ಯೆಯೇ ಮತ್ತೊಂದು ಟ್ವಿಟ್ ಮೂಲಕ ಪ್ರತಿಕ್ರಿಯಿಸಿರುವ ಡಿವಿಎಸ್, ‘ಸಿದ್ದರಾಮಯ್ಯನವರೇ, ನಿಮ್ಮ ರಾಜಕಾರಣದ ಬಗ್ಗೆ ಟೀಕೆ ಮಾಡಿದಾಗ ಸ್ಪರ್ದಾತ್ಮಕವಾಗಿ ತೆಗೆದುಕ್ಕೊಳ್ಳಲಾಗದಷ್ಟು ಅಸಹನೆ ನಿಮಗೆ ಶುರುವಾಗಿದ್ದು ಯಾವಾಗ. ಚಾಮುಂಡೇಶ್ವರಿ ಸೋಲಿನ ಪರಿಣಾಮವೇ ? ಅಥವಾ ಸಿಎಂ ಕುರ್ಚಿ ಕಳೆದುಕೊಂಡ ಮನೋಸ್ಥಿತಿಯೇ ?’ ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News