ಬುದ್ಧಿಜೀವಿಗಳು, ಶಿಕ್ಷಣ ತಜ್ಞರ ಸಭೆ ನಡೆಸಿ ತೀರ್ಮಾನಿಸಲಿ: ಸಚಿವ ಎಚ್.ಡಿ.ರೇವಣ್ಣ
ಬೆಂಗಳೂರು, ಡಿ. 31: ರಾಜ್ಯದಲ್ಲಿ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆ ಆರಂಭಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ, ಬುದ್ದಿಜೀವಿಗಳು, ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸಲಹೆ ಮಾಡಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಐದು ವರ್ಷ ಸುಭದ್ರವಾಗಿರುತ್ತದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆರು ತಿಂಗಳಿಂದ ಸರಕಾರ ಬೀಳುತ್ತೇ ಅಂತ ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಪಾಠ ಕಲಿಯಬೇಕಿಲ್ಲ
ದಲಿತರಿಗೆ ಸ್ಥಾನಮಾನ ಕಲ್ಪಿಸುವ ಬಗ್ಗೆ ಜೆಡಿಎಸ್ ಸಚಿವ ಆರ್.ಬಿ.ತಿಮ್ಮಾಪುರ್ ಅವರಿಂದ ಪಾಠ ಕಲಿಯಬೇಕಿಲ್ಲ. ಮೀಸಲಾತಿ ಇಲ್ಲದಿದ್ದ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ವರ್ಗದವರಿಗೆ ನೀಡಿದ್ದು, ಮಾಜಿ ಪ್ರಧಾನಿ ದೇವೇಗೌಡರು ಎಂದು ರೇವಣ್ಣ ತಿರುಗೇಟು ನೀಡಿದರು.
ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಒದಗಿಸಿದವರು ದೇವೇಗೌಡರು, ಮುಸ್ಲಿಮರಿಗೂ ಅವರು ಶೇ.5ರಷ್ಟು ಮೀಸಲಾತಿ ನೀಡಿದ್ದರು. ಸಚಿವರಾದ ಆರ್.ಬಿ. ತಿಮ್ಮಾಪುರ ಹಾಗೂ ಆರ್.ವಿ.ದೇಶಪಾಂಡೆ ಅವರನ್ನು ಕೇಳಿ ದೇವೇಗೌಡರು ಕೆಲಸ ಮಾಡಬೇಕಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.
ದಲಿತ ಸಮುದಾಯದ ಐಎಎಸ್ ಅಧಿಕಾರಿಯಾಗಿದ್ದ ಗೋನಾಳ್ ಭೀಮಪ್ಪ ಅವರಿಗೆ ಕೆಪಿಎಸ್ಸಿ ಅಧ್ಯಕ್ಷ ಸ್ಥಾನ ನೀಡಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು. ಇದನ್ನು ಕಾಂಗ್ರೆಸ್ ಮುಖಂಡರು ನೆನಪು ಮಾಡಿಕೊಳ್ಳಬೇಕು ಎಂದು ರೇವಣ್ಣ ಸಲಹೆ ಮಾಡಿದರು.
‘ಗೃಹ ಇಲಾಖೆ ಕಾರ್ಯ-ಚಟುವಟಿಕೆಗಳಲ್ಲಿ ತಾನು ಹಸ್ತಕ್ಷೇಪ ಮಾಡಿದ್ದೇನೆಂಬುದು ಸತ್ಯಕ್ಕೆ ದೂರ. ತಾನು ಗೃಹ ಇಲಾಖೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಈ ಬಗ್ಗೆ ಇನ್ನೂ ಸಂಶಯವಿದ್ದರೆ, ಗೃಹ ಸಚಿವರೂ ಆಗಿದ್ದ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರೇ ಸ್ಪಷ್ಟಣೆ ನೀಡಲಿ’
-ಎಚ್.ಡಿ.ರೇವಣ್ಣ, ಲೋಕೋಪಯೋಗಿ ಸಚಿವ