ದ್ವೇಷ ಬಿತ್ತುವ ಮಾಧ್ಯಮಗಳ ವಿರುದ್ಧ ಕಾನೂನು ಕ್ರಮ ಅಗತ್ಯ: ಇಲ್ಯಾಸ್ ಮುಹಮ್ಮದ್ ತುಂಬೆ
ಬೆಂಗಳೂರು, ಡಿ.31: ಕರ್ನಾಟಕದ ಕೆಲವು ಸುದ್ದಿ ವಾನಿಗಳು ಮತ್ತು ಕೆಲವು ಪತ್ರಿಕೆಗಳು ಹಿಂದೂ ಮುಸ್ಲಿಮರ ಮಧ್ಯೆ ದ್ವೇಷ ಹರಡುವ ಯತ್ನ ನಡೆಸುತ್ತಿವೆ. ಹೀಗಾಗಿ ರಾಜ್ಯ ಸರಕಾರ ಇಂತಹ ಮಾಧ್ಯಮಗಳನ್ನು ಗುರುತಿಸಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ವುುಹಮ್ಮದ್ ತುಂಬೆ ಒತ್ತಾಯಿಸಿದ್ದಾರೆ.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ನಗರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಾಧ್ಯಮಗಳು ರಾಜ್ಯದಲ್ಲಿ ಶಾಂತಿ ಸೌಹಾರ್ದ ಪರಂಪರೆ ಎತ್ತಿ ಹಿಡಿಯುವುದನ್ನು ಬಿಟ್ಟು ದ್ವೇಷ ಹರಡುತ್ತಿದೆ. ಕಳೆದ 5 ವರ್ಷಗಳಿಂದ ಇದು ಹೆಚ್ಚಾಗಿ ನಡೆಯಿತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹುಬ್ಬಳ್ಳಿ-ಅಂಕೋಲ ರೈಲು ಯೋಜನೆ ರದ್ದು ಬೇಡ: ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗ ಸಂಪರ್ಕಿಸುವ ಹುಬ್ಬಳ್ಳಿ ಅಂಕೋಲ ರೈಲು ಯೋಜನೆ ರದ್ದು ಪಡಿಸುವ ಕೇಂದ್ರ ಸರಕಾರದ ನಿರ್ಧಾರವು ಖಂಡನೀಯವಾಗಿದೆ. ಈ ಭಾಗದ ವಾಣಿಜ್ಯ ಚಟುವಟಿಕೆ ಮತ್ತು ಜನ ಸಂಚಾರಕ್ಕೆ ಈ ಮಾರ್ಗದ ರೈಲು ಅನಿವಾರ್ಯವಾಗಿದೆ.
ಪರಿಸರ ನಾಶವೆಂಬ ಕುಂಟು ನೆಪವೊಡ್ಡಿ ಅಭಿವೃದ್ಧಿ ಕಾರ್ಯಕ್ಕೆ ತೊಡಕಾಗುವುದು ಸರಿಯಲ್ಲ. ಸರ್ವ ಕನ್ನಡಿಗರೂ ರಾಜ್ಯದ ಸಂಸದರುಗಳಿಗೆ ಒತ್ತಡವನ್ನು ಹಾಕಿ ಕರ್ನಾಟಕದ ಬಗ್ಗೆ ಕೇಂದ್ರ ಸರಕಾರದ ತಾರತಮ್ಯ ನೀತಿ ನಿಲ್ಲಿಸುವಂತೆ ಎಚ್ಚರಿಸಬೇಕಾಗಿದೆ ಎಂದು ಅವರು ಅಭಿಪ್ರಾಯಿಸಿದರು.
ಮಧುಕರ ಶೆಟ್ಟಿ ಸಾವು ತನಿಖೆಯಾಗಲಿ: ದೇಶದಲ್ಲೇ ಪ್ರಾಮಾಣಿಕತೆ ಮತ್ತು ದಕ್ಷತೆಗೆ ಹೆಸರುವಾಸಿಯಾದ ಐಪಿಎಸ್ ಪೊಲೀಸ್ ಅಧಿಕಾರಿ ಮಧುಕರ ಶೆಟ್ಟಿ ನಿಧನದ ಹಿಂದೆ ಸಂಶಯದ ಆರೋಪಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಸಮರ್ಪಕ ತನಿಖೆ ನಡೆಸಬೆಕೇಂಬುದು ಅವರು ಆಗ್ರಹಿಸಿದರು.
ಕರ್ನಾಟಕ ರಾಜ್ಯದ ವಕ್ಫ್ ಬೋರ್ಡಿಗೆ ಕಳೆದ 20 ತಿಂಗಳುಗಳಿಂದ ಪದಾಧಿಕಾರಿಗಳ ಚುನಾವಣೆ ನಡೆಯದೆ ನಿಷ್ಕ್ರಿಯವಾಗಿದೆ. ಕ್ಷುಲ್ಲಕ ಕಾರಣಗಳನ್ನು ನೀಡಿ ರಾಜ್ಯ ಸರಕಾರವು ಚುನಾವಣೆಯನ್ನು ಮುಂದೂಡುತ್ತಿದೆ. ರಾಜ್ಯ ಸರಕಾರ ವಕ್ಫ್ ಬೋರ್ಡಿನಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಚುನಾವಣೆಯನ್ನು ಕೂಡಲೇ ನಡೆಸಬೇಕೆಂದು ಅವರು ಆಗ್ರಹಿಸಿದರು.
ಚಾಮರಾಜನಗರ ಜಿಲ್ಲೆಯ ಸುಳ್ವಾಡಿಯ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದಕ್ಕೆ ವಿಷ ಹಾಕಿದ ಪ್ರಕರಣವು ಅತ್ಯಂತ ಘೋರವಾಗಿದ್ದು, ಇದರಲ್ಲಿ 16 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು, ನೂರಾರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪಾತಕದ ಹಿಂದಿನ ದುಷ್ಕರ್ಮಿಗಳು ಎಷ್ಟೇ ಪ್ರಭಾವಶಾಲಿ ಗಳಾಗಿದ್ದರೂ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಜೀವತೆತ್ತ ಕುಟುಂಬಗಳಿಗೆ ಹಾಗೂ ಆಸ್ಪತ್ರೆ ದಾಖಲಾಗಿರುವವರಿಗೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಎಸ್‌ಡಿಪಿಐ ರಾಜ್ಯ ಸರಕಾರವನ್ನು ಆಗ್ರಹಿಸಿದೆ.