×
Ad

ಕಾಡುಗೋಡಿ ಕೇಳಸೇತುವೆ ಶೀಘ್ರದಲ್ಲಿ ಲೋಕಾರ್ಪಣೆ

Update: 2018-12-31 19:52 IST

ಬೆಂಗಳೂರು, ಡಿ 31: ವಾಹನ ಸವಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ನಗರದ ಕಾಡುಗೋಡಿಯಲ್ಲಿನ ರೈಲ್ವೆ ಕೆಳಸೇತುವೆಯು ಬಹುತೇಕ ಪೂರ್ಣಗೊಂಡಿದ್ದು, ಹೊಸ ವರ್ಷದ ಜನವರಿ ತಿಂಗಳಿನಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಿದ್ದ ವಾಹನ ಸವಾರರು ನಿರಾಳರಾಗುವ ಕಾಲ ಸನ್ನಿತವಾಗಿದೆ. ಬಿಬಿಎಂಪಿ ಕಾಡುಗೋಡಿ ರೈಲ್ವೆ ನಿಲ್ದಾಣದ ಬಳಿ ಕೆಳ ಸೇತುವೆ ನಿರ್ಮಾಣ ಕಾಮಗಾರಿ ಇನ್ನೊಂದು ತಿಂಗಳ ಅವಧಿಯಲ್ಲಿ ಎಲ್ಲವೂ ಪೂರ್ಣವಾಗುತ್ತದೆ. ಈ ರೈಲು ಮಾರ್ಗ ಬೆಂಗಳೂರು-ಜೋಲಾರ ಪೇಟೆಗೆ ಸಂಪರ್ಕ ಕಲ್ಪಿಸುತ್ತದೆ, ಪ್ರತಿ ದಿನ ಈ ಮಾರ್ಗದಲ್ಲಿ 80 ರೈಲುಗಳು ಸಂಚರಿಸುತ್ತವೆ. ಇದರಿಂದಾಗಿ ಗೇಟ್‌ಗಳನ್ನು ಬಂದ್ ಮಾಡಿ ವಾಹನಗಳನ್ನು ನಿಲ್ಲಿಸಲಾಗುತ್ತದೆ.

ಪ್ರತಿಯೊಂದು ರೈಲುಗಳು ಸಂಚರಿಸಲು 5 ನಿಮಿಷ ಬೇಕಾಗುತ್ತದೆ. ಒಟ್ಟಾರೆ ಪ್ರತಿ ದಿನ 400 ನಿಮಿಷಗಳು ವ್ಯಯವಾಗುತ್ತಿದ್ದವು.
ಈ ಅವಧಿಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವುದರಿಂದ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗುತ್ತಿತ್ತು. ಈ ಮಾರ್ಗ ಕಾಡುಗೋಡಿ ಮತ್ತು ದೇವನಗೊಂತಿಗೆ ಸಂಪರ್ಕ ಕಲ್ಪಿಸುವುದರಿಂದ ಹೆಚ್ಚು ವಾಹನಗಳು ಸಂಚರಿಸುತ್ತಿದ್ದು, ಕೆಲವೊಂದು ಬಾರಿ ಕಾಡುಗೋಡಿ ಮುಖ್ಯರಸ್ತೆಯವರೆಗೂ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿದ್ದವು. ವಾಹನ ಸವಾರರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ರೈಲ್ವೆ ಕೆಳ ಸೇತುವೆ ನಿರ್ಮಿಸಲು ಪಾಲಿಕೆ ಮುಂದಾಯಿತು ಎಂದು ರಸ್ತೆ ಮೂಲಭೂತ ಸೌಕರ್ಯ ಹಾಗೂ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ವಿ.ಜಯಶಂಕರ ರೆಡ್ಡಿ ತಿಳಿಸಿದ್ದಾರೆ.

ಈ ಕೆಳ ಸೇತುವೆ ನಿರ್ಮಿಸಲು ಎರಡು ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಉಳಿದ ಜಾಗಗಳು ಖಾಲಿ ಸ್ಥಳಗಳಾಗಿವೆ. ರೈಲ್ವೆ ಇಲಾಖೆಗೆ ಸೇರಿದ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. 48 ಆಸ್ತಿಪಾಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದು, ಶೇಕಡ 90 ರಷ್ಟು ಮಾಲಕರು ಟಿಡಿಆರ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಯೋಜನೆ 2015- 16ರಲ್ಲಿ ಆರಂಭವಾಗಿದ್ದು, 16.9 ಕೋಟಿ ರೂ ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ. ರೈಲ್ವೆ ಮತ್ತು ಬಿಬಿಎಂಪಿ ಜಂಟಿಯಾಗಿ ನಿರ್ಮಿಸುತ್ತಿದೆ. ಇನ್ನೊಂದು ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಂಡು ಈ ಮಾರ್ಗದಲ್ಲಿ ವಾಹನ ಸಂಚಾರ ಸುಗಮವಾಗಲಿದೆ ಎಂದು ಈ ಕಾಮಗಾರಿ ಉಸ್ತುವಾರಿ ವಹಿಸಿರುವ ಸಹಾಯ ನಿರ್ದೇಶಕ ರಾಮಕಷ್ಣ ರೆಡ್ಡಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News