×
Ad

ಗರುಡಾಚಾರ್ ಪಾಳ್ಯ: ಮ್ಯಾನೇಜರ್ ಮೇಲೆ ಸಹದ್ಯೋಗಿಗಳಿಂದ ಹಲ್ಲೆ

Update: 2018-12-31 20:00 IST

ಬೆಂಗಳೂರು, ಡಿ.31: ಕಂಪನಿಯಲ್ಲಿ ನಡೆಯುತ್ತಿರುವ ಮೋಸವನ್ನು ಹೊರಗೆಳೆದ ಮ್ಯಾನೇಜರ್ ಮೇಲೆ ಅದೇ ಕಂಪನಿಯ ಸಹೋದ್ಯೋಗಿಗಳು ಸೇರಿ ಹಲ್ಲೆ ನಡೆಸಿರುವ ಘಟನೆ ಗರುಡಾಚಾರ್ ಪಾಳ್ಯದಲ್ಲಿ ಕಳೆದ ಮೂರು ದಿನಗಳ ಹಿಂದೆ ನಡೆದಿರುವುದು ಬೆಳಕಿಗೆ ಬಂದಿದೆ.

ಇಲ್ಲಿನ ರಾಜ್‌ಮನೆ ಇಂಡಸ್ಟ್ರಿಸ್‌ನಲ್ಲಿ ಪರ್ಚೇಸಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಅಶ್ವಿನ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಂಪನಿಯಲ್ಲಿ ಕೆಲವರಿಂದ ಆಗುತ್ತಿದ್ದ ಮೋಸವನ್ನು ಪತ್ತೆ ಮಾಡಿ ಆಡಳಿತ ಮಂಡಳಿಯ ಗಮನಕ್ಕೆ ತರಲು ಮುಂದಾಗಿದ್ದರು ಎನ್ನಲಾಗಿದ್ದು, ಇದನ್ನು ಹೀಗೆ ಬಿಟ್ಟರೆ ತಮಗೆ ಮುಂದೆ ತೊಂದರೆಯಾಗುತ್ತದೆ ಎಂದು ಭಾವಿಸಿದ್ದ ಕೆಲವು ಸಹೋದ್ಯೋಗಿಗಳು ಅಶ್ವಿನ್‌ಗೆ ಬುದ್ಧಿ ಕಲಿಸಲು ಸಂಚು ಹೂಡಿದ್ದರು.

ಈ ಹಿನ್ನೆಲೆಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬೈಕ್‌ನಲ್ಲಿ ಹೋಗುತ್ತಿದ್ದ ಅಶ್ವಿನ್‌ನನ್ನು ಹಿಂಬಾಲಿಸಿ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಬೈಕ್ ನಿಲ್ಲಿಸದೇ ಹೋದದ್ದರಿಂದ ಅಶ್ವಿನ್ ಬಚಾವಾಗಿದ್ದರು. ಬಳಿಕ ಈ ಕುರಿತು ಕಂಪನಿ ಆಡಳಿತ ಮಂಡಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ ಅಶ್ವಿನ್ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂರು ದಿನಗಳ ಕಾಲ ಅಶ್ವಿನ್ ಮೇಲೆ ಹಲ್ಲೆ ನಡೆದಿದ್ದ ಸ್ಥಳದಲ್ಲಿದ್ದ ಸಿಸಿಟಿವಿಯನ್ನು ಪರಿಶೀಲನೆ ನಡೆಸಿದಾಗ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಲು ಯತ್ನಿಸಿರುವುದು ಆತನ ಸಹೋದ್ಯೋಗಿಗಳಾಗಿದ್ದ ನಾಗರಾಜು, ಶ್ರೀಕಾಂತ್, ಪ್ರಕಾಶ್ ಎನ್ನುವುದು ಪತ್ತೆಯಾಗಿದ್ದು ಪರಾರಿಯಾಗಿರುವ ಅವರ ಪತ್ತೆಗಾಗಿ ಶೋಧ ನಡೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News