ಮನೆಗೆ ನುಗ್ಗಿ ಸುಲಿಗೆ: ಆರೋಪಿಗಳ ಬಂಧನ
ಬೆಂಗಳೂರು, ಡಿ.31: ನಿವೃತ್ತ ಪೊಲೀಸ್ ಇನ್ಸ್‌ಸ್ಪೆಕ್ಟರ್ ಮನೆಗೆ ನುಗ್ಗಿ ಸುಲಿಗೆ ಮಾಡಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಚಂದ್ರಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಸೀನಾ, ಮೆಹಬೂಬ್, ಇಮ್ರಾನ್ ಬಂಧಿತ ಆರೋಪಿಗಳು ಎಂದು ಗುರುತಿಸಿದ್ದು, ಕಳೆದ ನ.15 ರಂದು ಮಧ್ಯಾಹ್ನ ನಿವೃತ್ತ ಪೊಲೀಸ್ ಇನ್ಸ್‌ಸ್ಪೆಕ್ಟರ್ ಶಾಂತ ಅವರ ಮನೆಗೆ ನುಗ್ಗಿದ್ದ ಆರೋಪಿಗಳು ಕಾಲಿಂಗ್ ಬೆಲ್, ಸಿಲಿಂಗ್ ಫ್ಯಾನ್ ಹಾಗೂ ವಾಷಿಂಗ್ ಮಷಿನ್ ರಿಪೇರಿ ಮಾಡಿಕೊಡುವುದಾಗಿ ಅವರನ್ನು ವಂಚಿಸಿದ್ದರು.
ಮನೆಯೊಳಗೆ ನುಗ್ಗಿದ 3 ಜನ ಆರೋಪಿಗಳು ಶಾಂತ ಅವರ ಬಾಯಿ ಮುಚ್ಚಿ, ಕೆಳಗೆ ಬೀಳಿಸಿ ಮೈಮೇಲಿದ್ದ ಚಿನ್ನಾಭರಣ ದೋಚಿದ್ದರು. ಪ್ರಕರಣದ ನಂತರ ಅವರು ಚಂದ್ರಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅವರು ಆರೋಪಿಗಳನ್ನ ಪತ್ತೆ ಮಾಡಿ ಅವರಿಂದ ನಗದು, ಚಿನ್ನಾಭರಣಗಳನ್ನ ವಶಪಡಿಸಿಕೊಂಡಿದ್ದಾರೆ.
ಆರೋಪಿತರಲ್ಲಿ ಹಸೀನಾ ಎಂಬಾಕೆ ಆರ್‌ಪಿಸಿ ಲೇಔಟ್‌ನ ಎಸ್‌ಬಿಐ ಬ್ಯಾಂಕ್ ಎದುರು ಪೆಟ್ಟಿಗೆ ಅಂಗಡಿ ಇಟ್ಟುಕೊಂಡಿದ್ದು, ಅದರ ಪಕ್ಕದಲ್ಲಿಯೇ ಇನ್ಸ್‌ಸ್ಪೆಕ್ಟರ್ ಮನೆಯಿದೆ. ಶಾಂತರ ಕತ್ತಿನಲ್ಲಿದ್ದ ಚಿನ್ನಾಭರಣ ಗಮನಿಸಿದ್ದ ಹಸೀನಾ ತನ್ನ ಅಕ್ಕನ ಮಗನೊಂದಿಗೆ ಸೇರಿ ಕೃತ್ಯ ನಡೆಸಿದ್ದರು ಎಂದು ತನಿಖೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.