×
Ad

ಸಂಪರ್ಕಕ್ಕೆ ಸಿಗದ ರಮೇಶ್ ಜಾರಕಿಹೊಳಿ: ಮೈತ್ರಿ ಮುಖಂಡರಲ್ಲಿ ಮನೆ ಮಾಡಿದ ಆತಂಕ

Update: 2018-12-31 20:05 IST

ಬೆಂಗಳೂರು, ಡಿ. 31: ಸಚಿವ ಸ್ಥಾನದಿಂದ ಪದಚ್ಯುತಿಗೊಂಡಿರುವ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಪಕ್ಷೇತರ ಶಾಸಕ ಆರ್.ಶಂಕರ್ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಮುಖಂಡರಲ್ಲಿ ಆತಂಕ ಮನೆಮಾಡಿದೆ.

ಕಳೆದ ಹತ್ತು ದಿನಗಳಿಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಪಕ್ಷೇತರ ಶಾಸಕ ಆರ್.ಶಂಕರ್ ಮೊಬೈಲ್‌ಫೋನ್ ಯಾರೊಬ್ಬರ ಸಂಪರ್ಕಕ್ಕೂ ಸಿಗುತ್ತಿಲ್ಲ. ಈ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯ, ‘ಬಿಜೆಪಿ ಕುದುರೆ ವ್ಯಾಪಾರಕ್ಕೆ ಮುಂದಾಗಿದೆ’ ಎಂದು ಟ್ವಿಟ್ ಮಾಡುವ ಮೂಲಕ ಆಪರೇಷನ್ ಕಮಲದ ಮುನ್ಸೂಚನೆ ನೀಡಿದ್ದಾರೆ.

ಮೈತ್ರಿ ಸರಕಾರದಲ್ಲಿ ಅಸಮಾಧಾನ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಲಾಭಕ್ಕಾಗಿ ಬಿಜೆಪಿ ಆಪರೇಷನ್ ಕಮಲದ ಮೂಲಕ ಅತೃಪ್ತರನ್ನು ಸೆಳೆಯುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಅಸ್ಥಿರಕ್ಕೆ ತೆರೆ ಮರೆಯಲ್ಲೆ ಕಸರತ್ತು ಆರಂಭಿಸಿರುವುದು ಗುಟ್ಟಾಗೇನು ಉಳಿದಿಲ್ಲ.

ದೊಸ್ತಿ ಪಕ್ಷದ ಮುಖಂಡರಲ್ಲಿ ಆತ್ಮವಿಶ್ವಾಸವಿದ್ದರೂ, ಒಳಗೊಳಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ರಮೇಶ್ ಜಾರಕಿಹೊಳಿ ಅಸಮಾಧಾನದ ಆತಂಕ ಮೂಡಿಸಿದೆ.

ಸಚಿವ ಸ್ಥಾನ ಕಳೆದುಕೊಂಡ ಬೆನ್ನಲ್ಲೇ ರಮೇಶ್ ಜಾರಕಿಹೊಳಿ, ‘ಸಚಿವ ಸ್ಥಾನವೇ ಹೋದ ಮೇಲೆ ಶಾಸಕ ಸ್ಥಾನ ಯಾರಿಗೆ ಬೇಕು’ ಎಂದು ಹೇಳುವ ಮೂಲಕ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ್ದರು. ಆ ಬಳಿಕ ಯಾರೊಬ್ಬರ ಕೈಗೂ ಸಿಗದೆ ಗೌಪ್ಯ ಸ್ಥಳಕ್ಕೆ ತೆರಳಿರುವುದು ತಲೆನೋವು ತಂದಿಟ್ಟಿದೆ.

‘ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದರೆ ಮಾಜಿ ಸಿಎಂ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಲಿದ್ದಾರೆ’ ಎಂಬ ವಿಪಕ್ಷ ನಾಯಕ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಈ ಮಧ್ಯೆ ಮೈತ್ರಿ ಸರಕಾರದಲ್ಲಿನ ‘ಅಸಮಾಧಾನದ ಬೇಗುದಿ’ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ವಿದೇಶಕ್ಕೆ ತೆರಳಿದ್ದು, ಮೈತ್ರಿ ಸರಕಾರದ ಭವಿಷ್ಯವೇನು ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News