ಸಮೃದ್ಧ ಕರ್ನಾಟಕದ ಸಂಕಲ್ಪದೊಂದಿಗೆ ಹೊಸ ವರ್ಷಕ್ಕೆ ಹೆಜ್ಜೆಯನ್ನಿಡೋಣ: ಸಿಎಂ ಕುಮಾರಸ್ವಾಮಿ
Update: 2018-12-31 20:14 IST
ಬೆಂಗಳೂರು, ಡಿ. 31: ‘ಇನ್ನೊಬ್ಬರ ಸೇವೆಗೆ ಮುಡುಪಾಗಿಸಿಕೊಳ್ಳುವುದೇ ನಿಮ್ಮನ್ನು ನೀವು ಅರಿತುಕೊಳ್ಳಲು ಇರುವ ಅತ್ಯುತ್ತಮ ಮಾರ್ಗ’ ಎಂದು ಮಹಾತ್ಮಾ ಗಾಂಧಿಯವರ ಧ್ಯೇಯ ಘೋಷವನ್ನು ಉಲ್ಲೇಖಿಸುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ, ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ.
ಸಮೃದ್ಧ, ಸಮಗ್ರ ಕರ್ನಾಟಕ ನಿರ್ಮಾಣದ ಸಂಕಲ್ಪದೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ. ರೈತರ ಮೊಗದಲ್ಲಿ ತೃಪ್ತಿಯ ನಗು, ನಿರುದ್ಯೋಗಿಗಳ ಕಣ್ಣಲ್ಲಿ ಭರವಸೆಯ ಬೆಳಕು, ದುರ್ಬಲ ವರ್ಗದವರ ಎದೆಯಲ್ಲಿ ಭದ್ರತೆಯ ಭಾವ, ಹಳ್ಳಿ- ಪಟ್ಟಣ-ನಗರಗಳಲ್ಲಿ ಅಭಿವೃದ್ಧಿ ಹೊಂಗನಸು ಸಾಕಾರಗೊಳಿಸುವ ನಿಶ್ಚಯದೊಂದಿಗೆ ಹೊಸ ವರ್ಷಕ್ಕೆ ಅಡಿಯಿಡುವ. ಯಶಸ್ಸು ನಮ್ಮೆಲ್ಲರದಾಗಲಿ ಎಂದು ಕುಮಾರಸ್ವಾಮಿ ಹಾರೈಸಿದ್ದಾರೆ.