ಜೀವ ಹಿಂಡುವ ಅಸ್ತಮಾದ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿಗಳು

Update: 2018-12-31 15:45 GMT

ಅಸ್ತಮಾ ಶ್ವಾಸಕೋಶಗಳು ಮತ್ತು ಶ್ವಾಸಮಾರ್ಗಗಳನ್ನು ಕಾಡುವ ದೀರ್ಘಕಾಲಿಕ ರೋಗವಾಗಿದ್ದು,ಉಸಿರಾಟವನ್ನು ಕಷ್ಟವಾಗಿಸುತ್ತದೆ. ಅಸ್ತಮಾ ದಾಳಿಗೆ ವಿವಿಧ ಕಾರಣಗಳಿರುವುದರಿಂದ ಒಂದು ವಿಧದ ಚಿಕಿತ್ಸೆ ಎಲ್ಲ ರೋಗಿಗಳಿಗೂ ಪರಿಣಾಮಕಾರಿಯಾಗುವುದಿಲ್ಲ. ರೋಗಿಯ ಜೀವವನ್ನು ಹಿಂಡುವ ಈ ರೋಗವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ನೆರವಾಗುವ ಕೆಲವು ಮಾಹಿತಿಗಳಿಲ್ಲಿವೆ......

ನಿಖರವಾದ ಕಾರಣ ತಿಳಿದಿಲ್ಲ

ಅಸ್ತಮಾಕ್ಕೆ ನಿಜವಾದ ಕಾರಣವೇನು ಎನ್ನುವುದನ್ನು ವೈದ್ಯಕೀಯ ವಿಜ್ಞಾನವು ಇನ್ನೂ ಕಂಡುಕೊಳ್ಳಬೇಕಿದೆ. ಅದು ಅಸ್ತಮಾದ ಲಕ್ಷಣಗಳನ್ನಷ್ಟೇ ಗುರುತಿಸಿದೆ. ಅಲರ್ಜಿ ಹಾಗೂ ಅಸ್ತಮಾದ ಕುಟುಂಬ ಇತಿಹಾಸ ಹೊಂದಿದವರಿಗೆ ಈ ರೋಗವು ಹೆಚ್ಚಾಗಿ ಕಾಡುತ್ತದೆ.

ಅದು ಆನುವಂಶಿಕವಾಗಿ ಬರಬಹುದು

ವ್ಯಕ್ತಿಯ ಹೆತ್ತವರ ಪೈಕಿ ಓರ್ವರಿಗೆ ಅಸ್ತಮಾ ಇದ್ದರೆ ಆತ ಈ ರೋಗಕ್ಕೆ ಗುರಿಯಾಗುವ ಸಾಧ್ಯತೆ ಶೇ.30ರಷ್ಟಿರುತ್ತದೆ, ಆದರೆ ಹೆತ್ತವರ ಪೈಕಿ ಇಬ್ಬರಿಗೂ ಅಸ್ತಮಾ ಇದ್ದರೆ ಈ ಸಾಧ್ಯತೆಯು ಶೇ.70ರಷ್ಟಿರುತ್ತದೆ.

ಸಾಮಾನ್ಯ ಕಾರಣಗಳು

ಧೂಳು,ವಾಯು ಮಾಲಿನ್ಯ,ಕಟ್ಟಿಗೆ ಒಲೆಯ ಹೊಗೆ,ಸಾಕುಪ್ರಾಣಿಗಳು ಮತ್ತು ಹವಾಮಾನ ವೈಪರೀತ್ಯ ಇತ್ಯಾದಿಗಳು ಅಸ್ತಮಾವನ್ನುಂಟು ಮಾಡುವ ಸಾಮಾನ್ಯ ಕಾರಣಗಳಾಗಿವೆ. ತಂಬಾಕಿನ ಹೊಗೆ,ವ್ಯಾಯಾಮ,ಕೆಲವು ಔಷಧಿಗಳು,ಉಸಿರಾಟದ ಸೋಂಕುಗಳು ಮತ್ತು ಭಾವನಾತ್ಮಕ ಉದ್ವೇಗಗಳಂತಹ ಅಲರ್ಜಿಕಾರಕಗಳಲ್ಲದ ಅಂಶಗಳೂ ಅಸ್ತಮಾವನ್ನು ಉಂಟು ಮಾಡಬಲ್ಲವು.

ಅಸ್ತಮಾದಿಂದ ಬಳಲುತ್ತಿರುವ ಮಕ್ಕಳಲ್ಲಿ ಶೇ.8ರಷ್ಟು ಮತ್ತು ವಯಸ್ಕರಲ್ಲಿ ಶೇ.50ರಷ್ಟು ಜನರು ಅಲರ್ಜಿಗಳಿಂದಲೂ ನರಳುತ್ತಿರುತ್ತಾರೆ.

ಅಸ್ತಮಾಕ್ಕೆ ಚಿಕಿತ್ಸೆ

 ರೋಗಿಯ ಲಕ್ಷಣಗಳ ನಿಯಂತ್ರಣ ಮತ್ತು ಜಟಿಲತೆಗಳನ್ನು ಆಧರಿಸಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಅಸ್ತಮಾವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ ಎನ್ನಲಾಗಿದೆ. ಅತ್ಯಂತ ಹೆಚ್ಚಾಗಿ ಶಿಫಾರಸು ಮಾಡಲಾಗುವ ಅಸ್ತಮಾ ಚಿಕಿತ್ಸೆಯು ಮಾತ್ರೆಗಳು ಅಥವಾ ಚುಚ್ಚುಮದ್ದುಗಳು ಅಥವಾ ಎರಡನ್ನೂ ಒಳಗೊಂಡಿರುತ್ತದೆ. ಅಸ್ತಮಾ ರೋಗಿಗಳು ತಾವು ಚಿಕಿತ್ಸೆ ಪಡೆಯುತ್ತಿರುವ ವೈದ್ಯರನ್ನು ನಿಯಮಿತವಾಗಿ ಭೇಟಿಯಾಗುತ್ತಿರಬೇಕಾಗುತ್ತದೆ.

ಅಸ್ತಮಾದಿಂದ ತಪ್ಪಿಸಿಕೊಳ್ಳುವುದು ಹೇಗೆ?

ವೀಝಿಂಗ್(ಉಸಿರಾಡುವಾಗ ಶಿಳ್ಳೆಯ ಶಬ್ದವುಂಟಾಗುವುದು) ಅಥವಾ ಉಸಿರಾಟದ ತೊಂದರೆಯಂತಹ ಅಸ್ತಮಾ ಸಮಸ್ಯೆಗಳಿಂದ ಪಾರಾಗಲು ಅದನ್ನುಂಟು ಮಾಡುವ ಅಲರ್ಜಿಕಾರಕಗಳಿಂದ ದೂರವಿರುವುದು ಉತ್ತಮ ಮಾರ್ಗವಾಗಿದೆ.

ಅಸ್ತಮಾ ಸಾಂಕ್ರಾಮಿಕವಲ್ಲ

ಅಸ್ತಮಾ ಸಾಂಕ್ರಾಮಿಕ ರೋಗವೆಂಬ ಭಾವನೆ ಕೆಲವರಲ್ಲಿದೆ. ಆದರೆ ಇದು ನಿಜವಲ್ಲ. ಅಸ್ತಮಾ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ.

 30 ಕೋಟಿ ರೋಗಿಗಳು

 ಅಂತರರಾಷ್ಟ್ರೀಯ ವರದಿಯಂತೆ ಅಮೆರಿಕವೊಂದರಲ್ಲೇ ಸುಮಾರು 340 ಲಕ್ಷ ಜನರು ಮತ್ತು ವಿಶ್ವಾದ್ಯಂತ ಸುಮಾರು 30 ಕೋಟಿ ಜನರು ದೀರ್ಘಕಾಲಿಕ ಅಸ್ತಮಾದಿಂದ ಬಳಲುತ್ತಿದ್ದಾರೆ.

ದೈಹಿಕ ಚಟುವಟಿಕೆಗಳು ಸ್ಥಿತಿಯನ್ನು ಸುಧಾರಿಸಲು ನೆರವಾಗುತ್ತವೆ ಈ ಹಿಂದೆ ಅಸ್ತಮಾದಿಂದ ಬಳಲುತ್ತಿರುವ ಮಕ್ಕಳು ದೈಹಿಕ ಚಟುವಟಿಕೆಗಳಲ್ಲಿ ತೊಡಗುವುದು ಹಾನಿಕಾರಕ ಎಂದು ಭಾವಿಸಲಾಗಿತ್ತು. ಇಂದು ಅಸ್ತಮಾ ಸ್ಥಿತಿಯನ್ನು ಸುಧಾರಿಸಲು ಮಕ್ಕಳು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ. ದೈಹಿಕ ಚಟುವಟಿಕೆಯು ಉಸಿರಾಟದ ಸ್ನಾಯುಗಳನ್ನು ಬಲಗೊಳಿಸುತ್ತದೆ ಮತ್ತು ಶ್ವಾಸಕೋಶಗಳ ಕಾರ್ಯ ನಿರ್ವಹಣೆಯನ್ನು ಉತ್ತಮಗೊಳಿಸುತ್ತದೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ.

ಅಸ್ತಮಾದಿಂದ ಸಂಭವಿಸುವ ಹೆಚ್ಚಿನ ಸಾವುಗಳಿಗೆ ಅಸಮರ್ಪಕ ಔಷಧಿ ಸೇವನೆ ಕಾರಣವಾಗಿದೆ. ವೈದ್ಯರು ಸೂಚಿಸಿದ ಔಷಧಿಗಳನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಅಸ್ತಮಾದಿಂದ ಅಪಾಯಗಳನ್ನು ತಪ್ಪಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News