ಬೆಳಗ್ಗಿನ ಉಪಾಹಾರವನ್ನು ನೀವು ಸೇವಿಸುತ್ತಿಲ್ಲವೇ?: ಹಾಗಿದ್ದರೆ ಈ ಗಂಭೀರ ಅಪಾಯದ ಬಗ್ಗೆ ತಿಳಿದುಕೊಳ್ಳಿ

Update: 2018-12-31 14:53 GMT

ಬ್ರೇಕ್‌ಫಾಸ್ಟ್ ಅಥವಾ ಬೆಳಗಿನ ಉಪಾಹಾರವನ್ನು ದಿನದ ಅತ್ಯಂತ ಮುಖ್ಯವಾದ ಆಹಾರ ಎಂದು ಬಣ್ಣಿಸಲಾಗಿದೆ. ಇದನ್ನು ಸೇವಿಸುವುದನ್ನು ತಪ್ಪಿಸಿದರೆ ವ್ಯಕ್ತಿಯು ಮಧುಮೇಹಕ್ಕೆ ಗುರಿಯಾಗುವ ಸಾಧ್ಯತೆಯು ಶೇ.33 ರಷ್ಟು ಹೆಚ್ಚುತ್ತದೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ.

ಸಂಶೋಧಕರು ಸುಮಾರು ಒಂದು ಲಕ್ಷ ಜನರ ದತ್ತಾಂಶಗಳನ್ನು ವಿಶ್ಲೇಷಿಸಿದ್ದು,ಬೆಳಗಿನ ಉಪಾಹಾರವನ್ನು ತಪ್ಪಿಸುವವರಲ್ಲಿ ಟೈಪ್-2 ಮಧುಮೇಹಕ್ಕೆ ತುತ್ತಾಗುವ ಅಪಾಯ ಶೇ.33ರಷ್ಟು ಹೆಚ್ಚಿರುತ್ತದೆ ಎನ್ನುವುದನ್ನು ಕಂಡುಕೊಂಡಿದ್ದಾರೆ.

ಅಲ್ಲದೆ ಪ್ರತಿದಿನ ಬೆಳಿಗ್ಗೆ ಉಪಾಹಾರ ಸೇವಿಸುವವರಿಗೆ ಹೋಲಿಸಿದರೆ ವಾರಕ್ಕೆ ಕನಿಷ್ಠ ನಾಲ್ಕು ಸಲ ಬ್ರೇಕ್‌ಫಾಸ್ಟ್ ತಪ್ಪಿಸುವವರಲ್ಲಿ ಮಧುಮೇಹವುಂಟಾಗುವ ಅಪಾಯ ಶೇ.55ರಷ್ಟು ಹೆಚ್ಚಿರುತ್ತದೆ. ಬೆಳಗಿನ ಉಪಾಹಾರವನ್ನು ಸೇವಿಸದವರು ದಿನದಲ್ಲಿ ನಂತರ ತಿನಿಸುಗಳನ್ನು ತಿನ್ನುವುದು ಹೆಚ್ಚು ಎನ್ನುವುದು ಇದಕ್ಕೆ ಕಾರಣ ಎನ್ನುತ್ತಾರೆ ತಜ್ಞರು.

ವಿಶ್ವಾದ್ಯಂತ ಶೇ.30ರಷ್ಟು ಜನರು ಬೆಳಗಿನ ಉಪಾಹಾರವನ್ನು ಸೇವಿಸುವುದಿಲ್ಲ ಎನ್ನುವುದನ್ನೂ ಸಂಶೋಧನೆಯು ಬಹಿರಂಗಗೊಳಿಸಿದೆ. ವ್ಯಂಗ್ಯವೆಂದರೆ ಅತಿಯಾದ ತೂಕವನ್ನು ಹೊಂದಿದ ವ್ಯಕ್ತಿಗಳು ಬೆಳಗಿನ ಆಹಾರವನ್ನು ತಪ್ಪಿಸುವುದರಿಂದ ತಮ್ಮ ಒಟ್ಟಾರೆ ಕ್ಯಾಲರಿಗಳ ಸೇವನೆಯನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬ ತಪ್ಪುನಂಬಿಕೆಯನ್ನು ಹೊಂದಿರುವುದರಿಂದ ಅಂತಹವರು ಈ ಮಹತ್ವದ ಆಹಾರವನ್ನು ತಪ್ಪಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು.

ಈ ಅಂಶವು ತಮ್ಮ ಸಮೀಕ್ಷೆಯ ಫಲಿತಾಂಶವನ್ನು ತಿರುಚಿರಬಹುದು ಎಂದು ಸಂಶೋಧಕರು ಮೊದಲು ಆತಂಕಗೊಂಡಿದ್ದರು. ಬೊಜ್ಜುದೇಹಿಗಳು ಟೈಪ್ 2 ಮಧುಮೇಹಕ್ಕೆ ಗುರಿಯಾಗಿರುವ ಸಾಧ್ಯತೆಗಳು ಹೆಚ್ಚು ಎನ್ನುವುದು ಇದಕ್ಕೆ ಕಾರಣವಾಗಿತ್ತು. ಆದರೆ ಶರೀರದ ತೂಕ ಏನೇ ಇರಲಿ,ಬೆಳಗಿನ ಆಹಾರ ತಪ್ಪಿಸಿಕೊಂಡರೆ ಆಗಲೂ ಮಧುಮೇಹಕ್ಕೆ ಗುರಿಯಾಗುವ ಸಾಧ್ಯತೆ ಕನಿಷ್ಠ ಶೇ.22ರಷ್ಟು ಹೆಚ್ಚಿರುತ್ತದೆ ಎನ್ನುವುದನ್ನು ಇನ್ನಷ್ಟು ಸಂಶೋಧನೆಗಳು ತೋರಿಸಿವೆ.

ಬೆಳಗಿನ ಆಹಾರವನ್ನು ತಪ್ಪಿಸಿಕೊಳ್ಳುವವರು ದಿನದ ಉಳಿದ ಸಮಯದಲ್ಲಿ ಹೆಚ್ಚಿನ ತಿನಿಸುಗಳನ್ನು ಸೇವಿಸುತ್ತಾರೆ ಮತ್ತು ಒಟ್ಟಾರೆಯಾಗಿ ಹೆಚ್ಚಿನ ಕ್ಯಾಲರಿಗಳು ಅವರ ಶರೀರವನ್ನು ಸೇರಿಕೊಳ್ಳುತ್ತವೆ. ಅಂತಹವರ ಊಟವೂ ದೊಡ್ಡ ಪ್ರಮಾಣದಲ್ಲಿರಹುದು ಮತ್ತು ಇದರ ಪರಿಣಾಮವಾಗಿ ಗ್ಲುಕೋಸ್ ಹಾಗೂ ಇನ್ಸುಲಿನ್ ಮಟ್ಟ ಹೆಚ್ಚಾಗುತ್ತದೆ. ಇದು ಚಯಾಪಚಯಕ್ಕೆ ಒಳ್ಳೆಯದಲ್ಲ ಮತ್ತು ಟೈಪ್-2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ತಮ್ಮ ವರದಿಯಲ್ಲಿ ಹೇಳಿದ್ದಾರೆ.

ಇಡಿಯ ಧಾನ್ಯಗಳು ಮತ್ತು ಏಕದಳ ಧಾನ್ಯಗಳನ್ನು ಹೆಚ್ಚಾಗಿ ಹಾಗೂ ಕೆಂಪುಮಾಂಸ ಮತ್ತು ಸಕ್ಕರೆಯನ್ನು ಕಡಿಮೆ ಪ್ರಮಾಣದಲ್ಲಿ ಒಳಗೊಂಡಿರುವ ಬೆಳಗಿನ ಆಹಾರವು ಮಧುಮೇಹದ ಅಪಾಯವನ್ನು ದೂರ ಮಾಡುವ ಸಾಧ್ಯತೆಗಳು ಹೆಚ್ಚು.

ಮಧುಮೇಹ ಸಮಸ್ಯೆಗೆ ಬೊಜ್ಜು ಪ್ರಮುಖ ಕಾರಣವಾಗಿದೆ. ಮಧುಮೇಹಿಗಳ ಪೈಕಿ ಶೇ.90ರಷ್ಟು ಜನರು ಟೈಪ್ 2 ಮಧುಮೇಹದಿಂದ ಬಳಲುತ್ತಿದ್ದು,ಇದು ಜೀವನಶೈಲಿ ಮತ್ತು ಆಹಾರ ಕ್ರಮದೊಂದಿಗೆ ತಳುಕು ಹಾಕಿಕೊಂಡಿದೆ.

ಬ್ರೇಕ್‌ಫಾಸ್ಟ್ ತಪ್ಪಿಸುವುದು ಮತ್ತು ಟೈಪ್ 2 ಮಧುಮೇಹದ ನಂಟಿನ ಹಿಂದಿರಬಹುದಾದ ಇತರ ಕಾರಣಗಳ ಬಗ್ಗೆ ಇನ್ನಷ್ಟು ಸಂಶೋಧನೆಗಳು ಅಗತ್ಯವಾಗಿವೆ ಎನ್ನುವುದು ತಜ್ಞರ ಅಭಿಪ್ರಾಯ.

ಬೆಳಗಿನ ಉಪಾಹಾರವನ್ನು ತಪ್ಪಿಸಿಕೊಳ್ಳುವದರಿಂದ ಹೆಚ್ಚಿನ ಕ್ಯಾಲರಿಗಳನ್ನು ಸೇವಿಸುವುದರಿಂದ ಪಾರಾಗಬಹುದು ಎಂಬ ತಪ್ಪುಗ್ರಹಿಕೆಯಿದೆ. ಈ ಮೊದಲು ಬೆಳಗಿನ ಉಪಾಹಾರ ತಪ್ಪಿಸುವುದಕ್ಕೂ ಬೊಜ್ಜಿಗೂ ನಂಟು ಕಲ್ಪಿಸಲಾಗಿತ್ತು. ಈಗ ಹೊಸ ಸಂಶೋಧನೆಯಂತೆ ಬೆಳಗಿನ ಉಪಾಹಾರ ತಪ್ಪಿಸುವುದು ಟೈಪ್ 2 ಮಧುಮೇಹದೊಂದಿಗೂ ಗುರುತಿಸಿಕೊಂಡಿದೆ ಎನ್ನುತ್ತಾರೆ ಲಂಡನ್ನಿನ ಬ್ರಿಟಿಷ್ ಹಾರ್ಟ್ ಫೌಂಡೇಷನ್‌ನ ಹಿರಿಯ ಡಯಟಿಷಿಯನ್ ವಿಕ್ಟೋರಿಯಾ ಟೇಲರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News