'ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಯೂ ಸಾಲಮನ್ನಾ' ಪ್ರಧಾನಿ ಮೋದಿ ವಿರುದ್ಧ ಸುದರ್ಶನ್ ವಾಗ್ದಾಳಿ
ಬೆಂಗಳೂರು, ಡಿ. 31: ರೈತರ ಸಾಲಮನ್ನಾ ಬಗ್ಗೆ ಹಗುರವಾಗಿ ಮಾತನಾಡಿರುವ ಪ್ರಧಾನಿ ಮೋದಿ ರೈತರ ಸಮಸ್ಯೆ ಕಡಿಮೆ ಮಾಡಲು ಏನು ಮಾಡಿದ್ದಾರೆ ಮತ್ತು ಯಾವ ಕಾರ್ಯಕ್ರಮಗಳನ್ನು ನೀಡಿದ್ದಾರೆಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ವಿ.ಆರ್.ಸುದರ್ಶನ್ ಆಗ್ರಹಿಸಿದ್ದಾರೆ.
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತವಿರುವ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ ಹಾಗೂ ಅಸ್ಸಾಂ ಸೇರಿ ಇನ್ನಿತರ ರಾಜ್ಯಗಳಲ್ಲಿಯೂ ರೈತರ ಸಾಲಮನ್ನಾ ಮಾಡಿದೆ ಎಂಬುದು ಪ್ರಧಾನಿ ಮೋದಿ ಮರೆತಿರುವಂತಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರಕಾರ ಈಗಾಗಲೇ ಸಹಕಾರ ಬ್ಯಾಂಕುಗಳಲ್ಲಿ ಸಾಲಮನ್ನಾ ಮಾಡಿದ್ದು, ಋಣಮುಕ್ತ ಪತ್ರ ವಿತರಣೆ ಮಾಡುತ್ತಿದೆ. ಮುಂದಿನ ಒಂದು ವರ್ಷದಲ್ಲಿ 1ಲಕ್ಷಕ್ಕೂ ಅಧಿಕ ಮಂದಿ ರೈತರ 450 ಕೋಟಿ ರೂ.ಗಳ ಸಾಲಮನ್ನಾ ಮಾಡಲಿದೆ ಎಂದು ಸುದರ್ಶನ್ ಹೇಳಿದರು.
2019ಕ್ಕೆ ಬದಲಾವಣೆ: 2019ಕ್ಕೆ ದೇಶದ ಜನ ಬದಲಾವಣೆ ಬಯಸಿದ್ದು, ಕೇಂದ್ರದ ಜನವಿರೋಧಿ ನೀತಿಗೆ ಜನ ಬೇಸರಗೊಂಡಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ಹೋರಾಟ ಮಾಡಲಿದ್ದೇವೆ ಎಂದು ಅವರು ಹೇಳಿದರು.
ಅಗಸ್ಟಾ ವೆಸ್ಟ್ ಲ್ಯಾಂಡ್ ಖರೀದಿ ಹಗರಣದ ನೆಪದಲ್ಲಿ ಸೋನಿಯಾ ಗಾಂಧಿ ಕುಟುಂಬದ ತೇಜೋವಧೆ ಸರಿಯಲ್ಲ. ಅಗಸ್ಟಾ ವೆಸ್ಟ್ ಲ್ಯಾಂಡ್ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರಸ್ತಾಪಿಸಿದ್ದು, ಈ ಹಿಂದೆಯೇ ಯುಪಿಎ ಸರಕಾರ ಬ್ಲಾಕ್ ಲಿಸ್ಟ್ಗೆ ಸೇರಿಸುವ ಕೆಲಸ ಮಾಡಿದೆ ಎಂದರು.
ಇದೀಗ ಬ್ಲಾಕ್ ಲಿಸ್ಟ್‌ಗೆ ಹಾಕಿದ್ದ ಕಂಪೆನಿಯನ್ನು ಹಿಂಪಡೆದಿರುವುದು ಪ್ರಧಾನಿ ಮೋದಿ ನೇತೃತ್ವದ ಸರಕಾರ. ಇಂತಹ ಕಂಪೆನಿಗೆ ಮೇಕ್ ಇನ್ ಇಂಡಿಯಾ ದಲ್ಲಿ ಭಾಗವಹಿಸುವ ಅವಕಾಶ ಕೊಟ್ಟಿದ್ದಾರೆ. ಹೀಗಾದರೆ ಇವರ ಪ್ರಾಮಾಣಿಕತೆ ಪ್ರಶ್ನಾತೀತವಲ್ಲವೇ ಎಂದು ಸುದರ್ಶನ್ ಪ್ರಶ್ನಿಸಿದರು.