2019ರಲ್ಲಿ ಭಾರತದ ಮಾರುಕಟ್ಟೆಗೆ ಬರಲಿರುವ 5 ಇಲೆಕ್ಟ್ರಿಕ್ ಕಾರುಗಳ ಬಗ್ಗೆ ತಿಳಿದುಕೊಳ್ಳಿ

Update: 2019-01-01 15:41 GMT

ವಾಯುಮಾಲಿನ್ಯವನ್ನು ತಗ್ಗಿಸುವ ಉದ್ದೇಶದೊಂದಿಗೆ 2030ರ ವೇಳೆಗೆ ಭಾರತದಲ್ಲಿ ಎಲ್ಲ ವಾಹನಗಳ ಪೈಕಿ ಕನಿಷ್ಠ ಶೇ.30ರಷ್ಟು ವಾಹನಗಳನ್ನು ಸರ್ವ ವಿದ್ಯುತ್ ಚಾಲಿತವಾಗಿಸುವ ತನ್ನ ಗುರಿಯನ್ನು ಸಾಧಿಸಲು ಸರಕಾರವು ಹೆಚ್ಚಿನ ಒತ್ತನ್ನು ನೀಡುವುದರೊಂದಿಗೆ ಮಹಿಂದ್ರಾ ಮತ್ತು ಟಾಟಾ ಮೋಟರ್ಸ್ ಸೇರಿದಂತೆ ಹಲವಾರು ಕಾರು ತಯಾರಿಕೆ ಕಂಪನಿಗಳು ಹೊಸ ವರ್ಷದಲ್ಲಿ ತಮ್ಮ ವಿದ್ಯುತ್ ಚಾಲಿತ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಜ್ಜಾಗುತ್ತಿವೆ.

ಕೆಲವು ರಾಜ್ಯಗಳಲ್ಲಿ ಈಗಾಗಲೇ ವಿದ್ಯುತ್ ಚಾಲಿತ ಸಾರಿಗೆ ಬಸ್‌ಗಳನ್ನು ಪ್ರಯೋಗಾರ್ಥವಾಗಿ ರಸ್ತೆಗಿಳಿಸಿದ್ದರೆ,ಕಾರು ತಯಾರಿಕೆ ಕ್ಷೇತ್ರವೂ ಹಿಂದೆ ಬಿದ್ದಿಲ್ಲ. 2019ರಲ್ಲಿ ಮಾರುಕಟ್ಟೆಗೆ ಬರಲಿರುವ ಐದು ಪ್ರಮುಖ ಕಂಪನಿಗಳ ವಿದ್ಯುತ್ ಚಾಲಿತ ಕಾರುಗಳ ಕುರಿತು ಮಾಹಿತಿಗಳಿಲ್ಲಿವೆ.

► ಮಹಿಂದ್ರಾ ಇಕೆಯುವಿ 100

ಕಳೆದ ಫೆಬ್ರವರಿಯಲ್ಲಿ 2018 ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶಿಸಲಾಗಿದ್ದ ಮಹಿಂದ್ರಾ ಇಕೆಯುವಿ 100 2019,ಜೂನ್ ವೇಳೆಗೆ ಭಾರತದ ಮಾರುಕಟ್ಟೆಗಳನ್ನು ಪ್ರವೇಶಿಸಲಿದೆ. ಮಹಿಂದ್ರಾ ಸದ್ಯ ಇ20 ಪ್ಲಸ್ ಮತ್ತು ಇ-ವೆರಿಟೊ ವಿದ್ಯುತ್ ಚಾಲಿತ ಕಾರುಗಳನ್ನು ಮಾರಾಟ ಮಾಡುತ್ತಿರುವ ಭಾರತದ ಏಕೈಕ ಕಾರು ತಯಾರಿಕೆ ಕಂಪನಿಯಾಗಿದೆ.

ಇಕೆಯುವಿಯ ಬಳಿಕ 2020ರಲ್ಲಿ ಕಂಪನಿಯು ಮಹಿಂದ್ರಾ ಇಕೆಯುವಿ 300 ಅನ್ನು ಬಿಡುಗಡೆಗೊಳಿಸಲಿದೆ. ಇದು ಇಕೆಯುವಿ 100ಕ್ಕೆ ಹೋಲಿಸಿದರೆ ಹೆಚ್ಚಿನ ಮೈಲೇಜ್ ವ್ಯಾಪ್ತಿ ಮತ್ತು ಇತರ ವೈಶಿಷ್ಟಗಳನ್ನು ಹೊಂದಿರುವ ನಿರೀಕ್ಷೆಯಿದೆ. ಈ ಎರಡೂ ಕಾರುಗಳು ಚಾಕನ್‌ನಲ್ಲಿರುವ ಮಹಿಂದ್ರಾದ ಫ್ಯಾಕ್ಟರಿಯಲ್ಲಿ ತಯಾರಾಗಲಿವೆ. ತನ್ನ ಚಾಕನ್ ಮತ್ತು ಬೆಂಗಳೂರು ಫ್ಯಾಕ್ಟರಿಗಳ ವಿಸ್ತರಣೆಗಾಗಿ 500 ಕೋ.ರೂ.ಗಳ ಹೂಡಿಕೆಯನ್ನು ಮಾಡಲಿರುವ ಕಂಪನಿಯು ವಿದ್ಯುತ್ ಚಾಲಿತ ಕಾರುಗಳು ಮತ್ತು ತ್ರಿಚಕ್ರ ವಾಹನಗಳು ಸೇರಿದಂತೆ ವಾರ್ಷಿಕ 70,000 ವಾಹನಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ.

► ಟಾಟಾ ಟಿಗೋರ್ ಇಲೆಕ್ಟ್ರಿಕ್

2018 ಆಟೋ ಎಕ್ಸ್‌ಪೋದಲ್ಲಿ ಟಾಟಾ ಟಿಗೋರ್ ಇಲೆಕ್ಟ್ರಿಕ್ ಮತ್ತು ಟಾಟಾ ಟಿಯಾಗೊ ಇಲೆಕ್ಟ್ರಿಕ್ ಕಾರುಗಳನ್ನೂ ಪ್ರದರ್ಶಿಸಲಾಗಿತ್ತು. ಟಾಟಾ ಮೋಟರ್ಸ್ ಕಳೆದ ವರ್ಷ ಎನರ್ಜಿ ಎಫಿಷಿಯನ್ಸಿ ಸರ್ವಿಸಸ್ ಲಿ.(ಇಇಎಸ್‌ಎಲ್)ಗೆ ಒಟ್ಟು 10,000 ಟಿಗೋರ್ ಇಲೆಕ್ಟ್ರಿಕ್ ಕಾರುಗಳನ್ನು ಪೂರೈಸುವ ಟೆಂಡರನ್ನು ಗೆದ್ದುಕೊಂಡಿದ್ದು,ಈಗಾಗಲೇ ಇಂತಹ ನೂರಾರು ಕಾರುಗಳನ್ನು ಇಇಎಸ್‌ಎಲ್‌ಗೆ ಪೂರೈಸಿದೆ.

ಟಾಟಾ ಟಿಗೋರ್ ಇವಿ ಮತ್ತು ಟಿಯಾಗೋ ಇವಿ ಇವೆರಡೂ ಒಂದೇ 3-ಫೇಸ್ ಎಸಿ ಇಂಡಕ್ಷನ್ ಮೋಟರ್‌ನ್ನು ವಿದ್ಯುತ್ ಪೂರೈಕೆಗೆ ಬಳಸಲಿವೆ. ಗರಿಷ್ಠ ಔಟ್‌ಪುಟ್ 4,500 ಆರ್‌ಪಿಎಂ ಅಥವಾ 40 ಎಚ್‌ಪಿಯಲ್ಲಿ 30 ಕೆಡಬ್ಲ್ಸು ಆಗಿದ್ದು,ಒಂದು ಬಾರಿಗೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ ಸುಮಾರು 140 ಕಿ.ಮೀ.ದೂರವನ್ನು ಕ್ರಮಿಸಬಹುದಾಗಿದೆ. ಟಿಗೋರ್ ಇವಿಗೆ 10 ಲ.ರೂ.ಬೆಲೆ ನಿಗದಿಗೊಳಿಸುವ ನಿರೀಕ್ಷೆಯಿದೆ.

► ನಿಸಾನ್ ಲೀಫ್

ನಿಸಾನ್ ಲೀಫ್ 40 ಕೆಡಬ್ಲುಚ್ ಬ್ಯಾಟರಿಯನ್ನು ಹೊಂದಿರಲಿದ್ದು,ಒಂದು ಬಾರಿ ಸಂಪೂಣವಾಗಿ ಚಾರ್ಜ್ ಮಾಡಿದರೆ 270 ಕಿ.ಮೀ.ದೂರವನ್ನು ಕ್ರಮಿಸುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ. ಇಲೆಕ್ಟ್ರಿಕ್ ಮೋಟರ್ 148 ಎಚ್‌ಪಿ ಮತ್ತು 320 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಕಾರು ಶೀಘ್ರವಾಗಿ ಚಾರ್ಜ್ ಆಗುವ ವೈಶಿಷ್ಟವನ್ನು ಹೊಂದಿದ್ದು,ಸುಮಾರು 40 ನಿಮಿಷಗಳಲ್ಲಿ ಬ್ಯಾಟರಿಯು ಶೇ.80ರಷ್ಟು ಚಾರ್ಜ್ ಆಗುತ್ತದೆ. 2019ರಲ್ಲಿ ನಿಸಾನ್ 60 ಕೆಡಬ್ಲ್ಸುಎಚ್‌ನಷ್ಟು ಭಾರೀ ಬ್ಯಾಟರಿಯೊಂದಿಗೆ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು,ಇದು ಇನ್ನೂ ಹೆಚ್ಚಿನ ಮೈಲೇಜ್ ನೀಡಲಿದೆ ಎನ್ನಲಾಗಿದೆ. ಇದರ ನಿಖರ ಮೈಲೇಜ್ ವ್ಯಾಪ್ತಿಯನ್ನು ತಿಳಿಸಿಲ್ಲವಾದರೂ ನೂತನ ಮಾದರಿಯು ಸುಮಾರು 350 ಕಿ.ಮೀ.ಮೈಲೇಜ್ ನೀಡುತ್ತದೆ ಎಂದು ನಿರೀಕ್ಷಿಸಬಹುದು.

► ಹುಂಡೈ ಕೋನಾ ಇಲೆಕ್ಟ್ರಿಕ್

2019,ಜುಲೈನಲ್ಲಿ ಭಾರತದಲ್ಲಿ ಬಿಡುಗಡೆಗೆ ಸಜ್ಜಾಗಿರುವ ಹುಂಡ್ಯ ಕೋನಾ ಇಲೆಕ್ಟ್ರಿಕ್ ಕಾರನ್ನು ಚೆನ್ನೈನಲ್ಲಿರುವ ಹುಂಡೈ ಫ್ಯಾಕ್ಟರಿಯಲ್ಲಿ ಜೋಡಣೆಗೊಳಿಸಲಾಗುತ್ತದೆ. ಕಾರಿನ ಬೆಲೆ 30 ಲಕ್ಷ ರೂ.ಗಳಿಗಿಂತ ಕಡಿಮೆ ಇರುತ್ತದೆ ಎನ್ನುವುದನ್ನು ಕಂಪನಿಯು ದೃಢಪಡಿಸಿದೆ. ಹುಂಡೈ ಕೋನಾ ಇಲೆಕ್ಟ್ರಿಕ್ ಎಸ್‌ಯುವಿಯನ್ನು ದೇಶದ 10 ಅಗ್ರ ಮಹಾನಗರಗಳಲ್ಲಿ ಮಾತ್ರ ಮಾರಾಟ ಮಾಡಲಾಗುವುದು ಮತ್ತು ಕ್ರಮೇಣ ಇತರ ನಗರಗಳಿಗೂ ವಿಸ್ತರಿಸಲಾಗುವುದು.

► ಆಡಿ ಇ-ಟ್ರಾನ್

ಆಡಿ ಹೊಸವರ್ಷದಲ್ಲಿ ತನ್ನ ಐಷಾರಾಮಿ ಇಲೆಕ್ಟ್ರಿಕ್ ಎಸ್‌ಯುವಿ ಇ-ಟ್ರಾನ್‌ನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಇದು 90 ಕೆಡಬ್ಲುಎಚ್ ಬ್ಯಾಟರಿ ಪ್ಯಾಕ್‌ನ ಎರಡು ಇಲೆಕ್ಟ್ರಿಕ್ ಮೋಟರ್‌ಗಳನ್ನು ಹೊಂದಿರಲಿದೆ. ಗರಿಷ್ಠ 590 ಎಚ್‌ಪಿಯ ಶಕ್ತಿಯನ್ನು ಉತ್ಪಾದಿಸಲಿದ್ದು,ಕಾರು ಕೇವಲ 3.5 ಸೆಕೆಂಡ್‌ಗಳಲಿ ಗಂಟೆಗೆ ಝೀರೊದಿಂದ 100 ಕಿ.ಮೀ.ವೇಗವನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದೆ. ಜಿಟಿ ಪರಿಕಲ್ಪನೆಯು 12 ಸೆಕೆಂಡ್‌ಗಳಲ್ಲಿ ಝೀರೊದಿಂದ 200 ಕಿ.ಮೀ.ವೇಗವನ್ನು ನೀಡಲಿದೆ. ಕಾರಿನ ಗರಿಷ್ಠ ವೇಗವನ್ನು ಪ್ರತಿ ಗಂಟೆಗೆ 240 ಕಿ.ಮೀ.ಗೆ ಸೀಮಿತಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News