ಅತ್ಯಂತ ದೂರದ ಜಗತ್ತನ್ನು ದಾಟಿ ಮುಂದುವರಿದ ಗಗನನೌಕೆ

Update: 2019-01-01 15:58 GMT

ಕ್ಯಾಲಿಫೋರ್ನಿಯ, ಜ. 1: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದ ಗಗನನೌಕೆಯೊಂದು ಮಂಗಳವಾರ ಮಾನವರು ಅಧ್ಯಯನ ಮಾಡಿರುವ ಅತ್ಯಂತ ದೂರದ ಜಗತ್ತನ್ನೂ ದಾಟಿ ಮುಂದುವರಿದಿದೆ.

ಆದಿ ಕಾಲದ ಸೌರವ್ಯೂಹದ ಶೀತಲೀಕೃತ ಪಳೆಯುಳಿಕೆಯಾಗಿರುವ ‘ಅಲ್ಟಿಮಾ ತುಲೆ’ಯು, ಗ್ರಹಗಳು ಹೇಗೆ ರೂಪುಗೊಂಡವು ಎಂಬುದನ್ನು ವಿವರಿಸಬಹುದಾಗಿದೆ.

‘ನ್ಯೂ ಹರೈಝನ್ಸ್’ ಗಗನನೌಕೆಯು ಮಂಗಳವಾರ ಮುಂಜಾನೆ 12:33ಕ್ಕೆ ಭೂಮಿಯಿಂದ 640 ಕೋಟಿ ಕಿ.ಮೀ. ದೂರದಲ್ಲಿರುವ ಬಾಹ್ಯಾಕಾಶ ಬಂಡೆಯತ್ತ ತನ್ನ ಕ್ಯಾಮರಗಳನ್ನು ಹಾಯಿಸಿತು. ಆಗ ಮೇರಿಲ್ಯಾಂಡ್‌ನ ಜಾನ್ಸ್ ಹಾಪ್‌ಕಿನ್ಸ್ ಅಪ್ಲೈಡ್ ಫಿಸಿಕ್ಸ್ ಪ್ರಯೋಗಾಲಯದಲ್ಲಿ ಸೇರಿದ್ದ ವಿಜ್ಞಾನಿಗಳ ಗುಂಪು ಸಂಭ್ರಮ ಆಚರಿಸಿತು. ಮುಖ್ಯ ವಿಜ್ಞಾನಿ ಅಲನ್ ಸ್ಟರ್ನ್ ‘ಗೋ ನ್ಯೂ ಹರೈಝನ್ಸ್’ ಎಂದು ಹೇಳಿದರು.

‘‘ಈ ಹಿಂದೆ ಯಾವುದೇ ಬಾಹ್ಯಾಕಾಶ ನೌಕೆಯು ಇಷ್ಟು ದೂರ ಪ್ರಯಾಣಿಸಿಲ್ಲ’’ ಎಂದು ಅವರು ಹೇಳಿದರು.

ಗಗನನೌಕೆಯು ಮಂಜಿನ ಬಂಡೆಯ ಸುಮಾರು 3,500 ಕಿ.ಮೀ. ಅಂತರದಲ್ಲಿ ಹಾದು ಹೋಗುವ ಕೆಲವೇ ಕ್ಷಣಗಳಲ್ಲಿ 900ಕ್ಕೂ ಅಧಿಕ ಚಿತ್ರಗಳನ್ನು ತೆಗೆಯಬೇಕಾಗಿದೆ.

‘‘ಚಿತ್ರಗಳಿಗೆ ಸಂಬಂಧಿಸಿದ ದತ್ತಾಂಶಗಳು ಶೀಘ್ರದಲ್ಲೇ ಭೂಮಿಗೆ ಬರಲಿದೆ’’ ಎಂದು ಸೌತ್‌ವೆಸ್ಟ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಉಪ ಯೋಜನಾ ವಿಜ್ಞನಿ ಜಾನ್ ಸ್ಪೆನ್ಸರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News