ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ, ಇಸ್ಲಾಮಿಕ್ ಬರಹಗಾರ, ಪ್ರಚಾರಕ ಖಾದರ್ ಖಾನ್

Update: 2019-01-02 10:57 GMT

ಡಿಸೆಂಬರ್ 31ರಂದು ಕೆನಡಾದಲ್ಲಿ ಅನಾರೋಗ್ಯದಿಂದ ತಮ್ಮ 81ನೇ ವಯಸ್ಸಿನಲ್ಲಿ ನಿಧನರಾದ ಹಿರಿಯ ಬಾಲಿವುಡ್ ನಟ, ಬರಹಗಾರ ಖಾದರ್ ಖಾನ್ ತಮ್ಮ ಚಿತ್ರರಂಗದ ಜೀವನಕ್ಕೆ ಗುಡ್ ಬೈ ಹೇಳಿದ ನಂತರ ಇಸ್ಲಾಂ ಕುರಿತಾದ ಕೃತಿಗಳನ್ನು ಬರೆಯುತ್ತಿದ್ದರಲ್ಲದೆ, ಇಸ್ಲಾಂ ಧರ್ಮದ ಸಂದೇಶವನ್ನು ಪಸರಿಸುವ ಕೈಂಕರ್ಯದಲ್ಲಿಯೂ ತೊಡಗಿದ್ದರೆಂದು ಹೆಚ್ಚಿನವರಿಗೆ ಪ್ರಾಯಶಃ ತಿಳಿದಿರಲಿಕ್ಕಿಲ್ಲ.

ಚಿತ್ರರಂಗದಲ್ಲಿದ್ದ ಹಲವಾರು ದಶಕಗಳಲ್ಲಿ ಅವರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರಲ್ಲದೆ 250ಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆಗಳನ್ನೂ ಬರೆದಿದ್ದರು. ತಮ್ಮ ಜೀವನದ ನಂತರದ ವರ್ಷಗಳನ್ನು ಅವರು ಇಸ್ಲಾಂ ಧರ್ಮವನ್ನು ಅರಿಯಲು ಹಾಗೂ ಅದರ ಸಂದೇಶಗಳನ್ನು ಪಸರಿಸಲು ಮುಡಿಪಾಗಿಸಿದ್ದರು. ಅರೆಬಿಕ್ ಭಾಷೆ ಕಲಿಯುವ ವಿದ್ಯಾರ್ಥಿಗಳಿಗೆ ಪಠ್ಯಕ್ರಮ ಸಿದ್ಧಪಡಿಸುತ್ತಿದ್ದ ಅವರು ದುಬೈಯಲ್ಲಿ ಕೆ.ಕೆ. ಇನ್‍ಸ್ಟಿಟ್ಯೂಟ್ ಆಫ್ ಅರಬಿಕ್ ಲಾಂಗ್ವೇಜ್ ಆ್ಯಂಡ್ ಇಸ್ಲಾಮಿಕ್ ಕಲ್ಚರ್ ಎಂಬ ಸಂಸ್ಥೆಯನ್ನೂ ಸ್ಥಾಪಿಸಿದ್ದರು.

“ನನ್ನ ತಂದೆ ಮೌಲವಿ ಅಬ್ದುಲ್ ರೆಹಮಾನ್ ಅರಬಿಕ್ ಭಾಷೆ ಮತ್ತು ಇಸ್ಲಾಮಿಕ್ ಸಾಹಿತ್ಯದಲ್ಲಿ ಸ್ನಾತ್ತಕೋತ್ತರ ಪದವೀಧರರಾಗಿದ್ದರು. ಹಾಲೆಂಡ್ ಗೆ ವಾಸ ಬದಲಿಸಿದ್ದ ಅವರು ಅಲ್ಲಿ ಒಂದು ಸಂಸ್ಥೆಯನ್ನು ಸ್ಥಾಪಿಸಿದ್ದರು. ನಿಧನಕ್ಕೂ ಮುನ್ನ ನನ್ನ ಕೈ ಹಿಡಿದು ಅರಬಿಕ್, ಇಸ್ಲಾಮಿಕ್ ಕಾನೂನು ಮತ್ತು ಕುರಾನ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ನನಗೆ ತಿಳಿಸಿದ್ದರು. ನನಗೆ ಆ ಬಗ್ಗೆ ಏನೂ ಗೊತ್ತಿಲ್ಲ ಎಂದು ಹೇಳಿದಾಗ ನಾಟಕ ರಂಗ ಮತ್ತು ಚಿತ್ರರಂಗದ ಬಗ್ಗೆ ನಿನಗೇನು ಗೊತ್ತಿತ್ತು?, ಪ್ರಯತ್ನಿಸಿ ಯಶಸ್ವಿಯಾಗಿಲ್ಲವೇ?, ಬೋರ್ ಹೊಡೆಸುವ ಚಿತ್ರ ಕಥೆಗಳನ್ನು ನೀನು ಆಸಕ್ತಿಯುತವಾಗಿಸಿದಂತೆ ಇದು ಕೂಡ'' ಎಂದು ಇಂಡಿಯಾ ವೆಸ್ಟ್ ಗೆ ನೀಡಿದ್ದ ಸಂದರ್ಶನವೊಂದರಲ್ಲಿ ಹಿಂದೆ ಖಾದರ್ ಖಾನ್ ಹೇಳಿದ್ದರು.

ಚಿತ್ರರಂಗ ಪ್ರವೇಶಿಸುವ ಮುನ್ನ ಅವರು ಮುಂಬೈಯ ಎಂ.ಎಚ್. ಸಾಹೂ ಸಿದ್ದೀಕ್ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಉಪನ್ಯಾಸಕರಾಗಿದ್ದರು. ಶಿಕ್ಷಣವೊಂದರಿಂದಲೇ ಇಸ್ಲಾಂ ಬಗೆಗಿನ ತಪ್ಪು ಕಲ್ಪನೆಗಳನ್ನು ದೂರವಾಗಿಸಬಹುದೆಂದು ಅವರು ಬಲವಾಗಿ ನಂಬಿದ್ದರು.

“ಇಸ್ಲಾಂ ಧರ್ಮ ಶಾಂತಿಯನ್ನು ಪಸರಿಸುತ್ತದೆ. ಶಾಂತಿ ಸೌಹಾರ್ದತೆಗಾಗಿ ನಾನು ನನ್ನ ಕೈಲಾದಷ್ಟು ಮಾಡಬಹುದಾದರೆ ಅದಕ್ಕಿಂತ ಹೆಚ್ಚು ನನಗೆ ಬೇರೇನೂ ಬೇಕಿಲ್ಲ'' ಎಂದು ಖಾನ್ ಒಮ್ಮೆ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News