ಕೆಐವೈಜಿ ಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿಲ್ಲ: ಕೊಕ್ಕೊ ಅಸೋಸಿಯೇಷನ್‌ನಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ

Update: 2019-01-02 16:36 GMT

ಬೆಂಗಳೂರು, ಜ.2: ಪುಣೆಯಲ್ಲಿ ಜ.9ರಿಂದ ನಡೆಯಲಿರುವ ಖೇಲೊ ಇಂಡಿಯಾ ಯುವ ಕ್ರೀಡಾಕೂಟದಲ್ಲಿ (ಕೆಐವೈಜಿ) ಪಾಲ್ಗೊಳ್ಳಲು ನಮಗೆ ಅನುಮತಿ ನೀಡಿಲ್ಲ ಎಂದು ಆಕ್ಷೇಪಿಸಿ ಕರ್ನಾಟಕ ರಾಜ್ಯ ಕೊಕ್ಕೊ ಅಸೋಸಿಯೇಷನ್ ಹೈಕೋರ್ಟ್ ಮೆಟ್ಟಿಲೇರಿದೆ.

ಅಸೋಸಿಯೇಷನ್ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಾದಿಸಿದ ವಕೀಲೆ ಡಿ.ಸಂಧ್ಯಾ ಅವರು, ಅಧಿಕೃತ ಕೊಕ್ಕೊ ಸಂಸ್ಥೆ ಕಳುಹಿಸಿರುವ ಪಟ್ಟಿಯನ್ನು ಕಡೆಗಣಿಸಿ, ಕರ್ನಾಟಕ ರಾಜ್ಯ ಒಲಿಂಪಿಕ್ ಸಂಸ್ಥೆ ಪ್ರತ್ಯೇಕ ತಂಡ ರಚಿಸಿ ಅದಕ್ಕೆ ಅನುಮೋದನೆ ಪಡೆದಿದೆ ಮತ್ತು ಆ ತಂಡವನ್ನು ಕ್ರೀಡಾಕೂಟಕ್ಕೆ ಕಳುಹಿಸಲು ಮುಂದಾಗಿದೆ. ಇದು ಅಕ್ರಮ ಹಾಗೂ ಕಾನೂನು ಬಾಹಿರ ಎಂದು ವಿವರಿಸಿದರು.

ಆಕ್ಷೇಪವೇನು: ಕೊಕ್ಕೊ ಫೆಡರೇಷನ್ ಆಫ್ ಇಂಡಿಯಾ 2018ರ ಅಕ್ಟೋಬರ್ 7ರಂದು ನಮಗೆ ಪತ್ರ ಬರೆದು ಖೇಲೊ ಇಂಡಿಯಾ ಕ್ರೀಡಾಕೂಟಕ್ಕೆ ಪುರುಷರ ಹಾಗೂ ಮಹಿಳೆಯರ ತಂಡಗಳನ್ನು ಆಯ್ಕೆ ಮಾಡಿ ಕಳುಹಿಸಿಕೊಡಿ ಎಂದು ಸೂಚಿಸಿತ್ತು. ಅದರಂತೆ ಎರಡು ತಂಡಗಳನ್ನು ಆಯ್ಕೆ ಮಾಡಿ ಪಟ್ಟಿ ಕಳುಹಿಸಿಕೊಟ್ಟಿದ್ದೆವು. ಆದರೆ, ಸರಕಾರ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿಗಳನ್ನು ಕ್ರೀಡಾಕೂಟಕ್ಕೆ ರಾಜ್ಯದ ನೋಡಲ್ ಏಜೆನ್ಸಿಯನ್ನಾಗಿ ನೇಮಿಸಿತು ಎಂದರು.

ಹೀಗಾಗಿ ನೋಡಲ್ ಅಧಿಕಾರಿಯಿಂದ ಆಯ್ಕೆ ಪಟ್ಟಿಗೆ ಅನುಮೋದನೆ ಪಡೆದು ಕಳುಹಿಸುವಂತೆ ಫೆಡರೇಷನ್ ಸೂಚಿಸಿತ್ತು. ಇದರನ್ವಯ ನ.27 ರಂದು ಅಸೋಸಿಯೇಷನ್ ಆಯ್ಕೆ ಪಟ್ಟಿಯನ್ನು ನೀಡಿತ್ತು. ಆದರೆ ಈವರೆಗೂ ಅದಕ್ಕೆ ಅನುಮತಿ ನೀಡಿಲ್ಲ ಎಂಬುದು ಅರ್ಜಿದಾರರ ಆಕ್ಷೇಪ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News