ಜ.4 ರಿಂದ ಸಂಸ್ಕೃತ ಸಮ್ಮೇಳನ
ಬೆಂಗಳೂರು, ಜ.2: ಸಂಸ್ಕೃತ ಭಾರತೀಯ ಪ್ರಾಂತ ಸಮ್ಮೇಳನವನ್ನು ಜ.4 ರಿಂದ ಮೂರು ದಿನಗಳ ಕಾಲ ರಾಜರಾಜೇಶ್ವರಿ ನಗರದಲ್ಲಿರುವ ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನದಲ್ಲಿ ಸಂಸ್ಕೃತ ಭಾರತ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸ್ಥೆಯ ಗುರುರಾವ ಕುಲಕರ್ಣಿ, ಪ್ರಾಂತ ಸಮ್ಮೇಳನದ ಅಧ್ಯಕ್ಷರಾಗಿ ನಾಡೋಜ ಡಾ.ಹಂಪ ನಾಗರಾಜಯ್ಯ, ಉಪಾಧ್ಯಕ್ಷರನ್ನಾಗಿ ಡಾ.ಮಲ್ಲೇಪುರಂ ಜಿ.ವೆಂಕಟೇಶ್‌ರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಸಮ್ಮೇಳನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 1500 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಗ್ರಾಮ, ತಾಲೂಕು, ಜಿಲ್ಲೆ, ನಗರ ಹಾಗೂ ಪ್ರಾಂತ ಮಟ್ಟದ ಜವಾಬ್ದಾರಿ ಹೊಂದಿರುವ ಕಾರ್ಯಕರ್ತರು, ಅಂಚೆ ಮೂಲಕ ಸಂಸ್ಕೃತಿ ಕಲಿಯುತ್ತಿರುವವರು, ಸಂಸ್ಕೃತ ವಿದ್ಯಾರ್ಥಿಗಳು, ಚಿಂತಕರು, ವಿದ್ವಾಂಸರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಮ್ಮೇಳನವನ್ನು ಕ್ರಿಕೆಟ್ ಆಟಗಾರ ಜಾವಗಲ್ ಶ್ರೀನಾಥ್ ಉದ್ಘಾಟಿಸಲಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್, ಸಂಸ್ಕೃತ ಭಾರತೀ ಕ್ಷೇತ್ರ ಸಂಘಟನ ಮಂತ್ರಿ ದತ್ತಾತ್ರೇಯ ವಜ್ರಳ್ಳಿ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಾಡೋಜ ಹಂಪ ನಾಗರಾಜಯ್ಯ, ಮಲ್ಲೇಪುರಂ ಜಿ.ವೆಂಟಕೇಶ್ ಉಪಸ್ಥಿತರಿದ್ದರು.