ವಾರ್ತಾ ಇಲಾಖೆ ಹೊಸ ರೂಪ ತಾಳಬೇಕು: ಇಲಾಖೆ ಕಾರ್ಯದರ್ಶಿ ಪಂಕಜ್‌ ಕುಮಾರ್ ಪಾಂಡೆ

Update: 2019-01-02 16:50 GMT

ಬೆಂಗಳೂರು, ಜ.2: ಪ್ರಸ್ತುತ ದಿನಮಾನಗಳಲ್ಲಿ ತಾಂತ್ರಿಕತೆಯ ಲೋಕದಲ್ಲಿನ ಬೆಳವಣಿಗೆಗಳ ಹಿನ್ನಲೆಯಲ್ಲಿ ಮಾಧ್ಯಮಗಳು ಸಾಕಷ್ಟು ಬದಲಾಗಿದ್ದು, ಬದಲಾವಣೆಗೆ ಅನುಗುಣವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೂ ಹೊಸ ರೂಪ ತಾಳಬೇಕಾದ ಅವಶ್ಯಕತೆ ಇದೆ ಎಂದು ಇಲಾಖೆಯ ಕಾರ್ಯದರ್ಶಿ ಪಂಕಜ್‌ಕುಮಾರ್ ಪಾಂಡೆ ಹೇಳಿದ್ದಾರೆ.

ಬುಧವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಇಲಾಖೆ ಬಜೆಟ್ ವಿಚಾರದಲ್ಲಿ ಮತ್ತು ಅಧಿಕಾರಿ/ಸಿಬ್ಬಂದಿಗಳ ಗಾತ್ರದಲ್ಲಿ ಚಿಕ್ಕ ಇಲಾಖೆಯಾಗಿದ್ದದೂ, ಸರಕಾರದಲ್ಲಿ ಅತ್ಯಂತ ಪ್ರಮುಖ ಇಲಾಖೆಯಾಗಿದೆ.

ರಾಜ್ಯ ಸರಕಾರದ ಯೋಜನೆಗಳನ್ನು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಲುಪಿಸುವ ಮಹತ್ತರ ಜವಾಬ್ದಾರಿಯನ್ನು ಹೊಂದಿದೆ. ನಮ್ಮದು ಸೇವಾ ಇಲಾಖೆಯಾಗಿದ್ದು, ಸರಕಾರದ ಅತ್ಯಂತ ಪ್ರಮುಖ ಇಲಾಖೆಗಳಲ್ಲಿ ಒಂದಾಗಿದೆ ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ವಾರ್ತಾಧಿಕಾರಿಗಳ ಸಮಸ್ಯೆಗಳನ್ನು ಆಲಿಸಿದ ಅವರು, ತುರ್ತಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇಂತಹ ಸಭೆಗಳ ಅವಶ್ಯಕತೆ ಇರುತ್ತದೆ. ಸರಕಾರದ ಮಟ್ಟದಲ್ಲಿ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದಾಗ ಇಲಾಖೆಯ ಪರ ಮಾತನಾಡಲು ಸಹಾಯಕವಾಗುತ್ತದೆ ಎಂದರು.

ಈ ವೇಳೆ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ದರಾಜು, ಮದ್ಯಪಾನ ಸಂಯಮ ಮಂಡಳಿ ಹಿರಿಯ ಅಧಿಕಾರಿಗಳು ತಮ್ಮ ಸಂಸ್ಥೆಗಳ ಕಾರ್ಯವೈಖರಿ ಹಾಗೂ ಸಾಧನೆಗಳ ಕುರಿತು ಕಾರ್ಯದರ್ಶಿಗಳೊಂದಿಗೆ ಚರ್ಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News