ಹೈಕೋರ್ಟ್‌ನಲ್ಲಿ ಡಿಜಿಟಲ್ ಗ್ರಂಥಾಲಯಕ್ಕೆ ಕ್ರಮ: ಡಾ.ಜಿ.ಪರಮೇಶ್ವರ್

Update: 2019-01-03 13:55 GMT

ಬೆಂಗಳೂರು, ಜ.3: ಹೈಕೋರ್ಟ್‌ನಲ್ಲಿ ಈಗಿರುವ ಗ್ರಂಥಾಲಯವನ್ನು ಡಿಜಿಟಲೀಕರಣ ಮಾಡಲು ಕ್ರಮ ಕೈಗೊಳ್ಳುವಂತೆ ಉಪಮುಖ್ಯಮಂತ್ರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಡಾ.ಜಿ.ಪರಮೇಶ್ವರ್ ಸೂಚಿಸಿದರು.

ಗುರುವಾರ ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ಕಾನೂನು ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರಿಗೆ, ವಕೀಲರಿಗೆ ಪ್ರಮುಖವಾಗಿ ಗ್ರಂಥಾಲಯದ ಅವಶ್ಯಕತೆ ಇದೆ. ಈಗಿರುವ ಗ್ರಂಥಾಲಯ ಸಂಪೂರ್ಣ ಹಳೆಯದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಹೊಸ ಪುಸ್ತಕಗಳ ಸಂಗ್ರಹವಿಲ್ಲ. ಬೇರೆ ಗ್ರಂಥಾಲಯಗಳನ್ನೇ ಅವಲಂಬಿಸಬೇಕಿದೆ. ಹೈಕೋರ್ಟ್‌ಗೆ ಸ್ವಂತ ಗ್ರಂಥಾಲಯದ ಅಗತ್ಯವಿದೆ ಎಂಬ ಅಧಿಕಾರಿಗಳ ಬೇಡಿಕೆಗೆ ಸ್ಪಂದಿಸಿದ ಪರಮೇಶ್ವರ್, ಡಿಜಿಟಲ್ ಲೈಬ್ರರಿ ನಿರ್ಮಾಣ ಮಾಡುವಂತೆ ಸೂಚನೆ ನೀಡಿದರು.

ಕಾನೂನು ವಿಶ್ವವಿದ್ಯಾಲಯದ ಅಡಿಯಲ್ಲಿ ಒಟ್ಟು 906 ಕಾಲೇಜುಗಳಿದ್ದು, 27 ಅನುದಾನ ಹಾಗೂ 5 ಸರಕಾರಿ ಕಾಲೇಜುಗಳು ಸೇರಲಿವೆ. ರಾಜ್ಯದ ಹೈಕೋರ್ಟ್‌ನಲ್ಲಿ ಒಟ್ಟು 1,17,189 ಪ್ರಕರಣಗಳು ಇದ್ದು, ರಿಟ್ ಪೆಟಿಷನ್‌ಗಳೇ ಹೆಚ್ಚಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಎಸ್ಸಿಪಿ ಟಿಎಸ್ಪಿ ಯೋಜನೆಯಡಿ ಅನುದಾನ ಸಹಿತ ಹಾಗೂ ಸರಕಾರಿ ಕಾನೂನು ಕಾಲೇಜುಗಳ ಎಸ್ಸಿಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡಲಾಗುತ್ತಿದ್ದು, ಮುಂದಿನ ವರ್ಷದಿಂದ ಖಾಸಗಿ ಕಾನೂನು ಕಾಲೇಜುಗಳ ವಿದ್ಯಾರ್ಥಿಗಳಿಗೂ ನೀಡಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಕಳೆದ ಒಂದೂವರೆ ವರ್ಷದಿಂದ ರೀಸರ್ಚ್ ಲಾ ಆ್ಯಂಡ್ ಆರ್ಡರ್ ಇನ್ಸ್‌ಟಿಟ್ಯೂಟ್‌ಗೆ ಮುಖ್ಯಸ್ಥರ ನೇಮಕಾತಿ ಆಗದೇ ಖಾಲಿ ಇದ್ದು, ಶೀಘ್ರವೇ ತುಂಬಲು ಸೂಚನೆ ನೀಡಿದರು. ಜೊತೆಗೆ ಸರಕಾರದ ವತಿಯಿಂದ ನೇಮಕಗೊಳ್ಳುವ ಪ್ರಿನ್ಸಿಪಲ್ ಗೌರ್ನಮೆಂಟ್ ಅಡ್ವೋಕೇಟ್ ನೇಮಕಕ್ಕೂ ಗಮನಹರಿಸುವುದಾಗಿ ತಿಳಿಸಿದರು. ಗ್ರಾಮೀಣ ಭಾಗದ ಜನರಿಗೆ ಕಾನೂನು ಅರಿವು ಮೂಡಿಸುವ ಕೆಲಸವನ್ನು ಇನ್ನಷ್ಟು ಪ್ರಬಲವಾಗಿ ನಿರ್ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಪರಮೇಶ್ವರ್, ಪ್ರಸ್ತುತ ಯುವ ವಕೀಲರಿಗೆ 24 ತಿಂಗಳಿಗೆ ನೀಡುತ್ತಿರುವ 2 ಸಾವಿರ ರೂ. ಸ್ಟೈಪಂಡ್ ಮೊತ್ತವನ್ನು 5 ಸಾವಿರ ರೂ.ಗಳಿಗೆ ಹೆಚ್ಚಿಸುವ ಬೇಡಿಕೆಗೆ ಸಂಬಂಧಿಸಿದಂತೆ ಚಿಂತನೆ ನಡೆಸುವುದಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News