ಜ.8, 9ರ ಅಖಿಲ ಭಾರತ ಮಹಾ ಮುಷ್ಕರಕ್ಕೆ ಎಡ ಪಕ್ಷಗಳ ಕರೆ

Update: 2019-01-03 14:01 GMT

ಬೆಂಗಳೂರು, ಡಿ.3: ದೇಶದಾದ್ಯಂತ ಕಾರ್ಮಿಕ ವರ್ಗ ಹಾಗೂ ರೈತಾಪಿ ಸಮುದಾಯದಿಂದ ಜ.8,9ರಂದು ನಡೆಯಲಿರುವ ಅಖಿಲ ಭಾರತ ಮಹಾ ಮುಷ್ಕರ ಹಾಗೂ ಹರತಾಳಕ್ಕೆ ಎಡಪಕ್ಷಗಳಾದ ಸಿಪಿಐ, ಸಿಪಿಐ(ಎಂ), ಎಸ್.ಯು.ಸಿ.ಐ(ಸಿ) ಹಾಗೂ ಸಿಪಿಐ(ಎಂ.ಎಲ್) ಲಿಬರೇಷನ್ ರಾಜ್ಯ ಘಟಕಗಳು ಜಂಟಿಯಾಗಿ ಕರೆ ನೀಡುವುದಾಗಿ ತಿಳಿಸಿವೆ.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿಐ(ಎಂ)ನ ಕಾರ್ಯದರ್ಶಿ ಯು.ಬಸವರಾಜ, ಕೇಂದ್ರ ಸರಕಾರದ ವಿರುದ್ಧ ನಡೆಯಲಿರುವ ಈ ಮುಷ್ಕರ ಅತ್ಯಂತ ನ್ಯಾಯಯುತವಾದುದಾಗಿದೆ. ಈ ಮುಷ್ಕರದ ಯಶಸ್ಸಿಗೆ ನಮ್ಮೆಲ್ಲ ಸದಸ್ಯರು ಹಾಗೂ ಘಟಕಗಳು ಶ್ರಮಿಸಲಿದ್ದಾರೆ ಎಂದು ಹೇಳಿದರು.

ಪ್ರತಿವರ್ಷ 1.5 ಕೋಟಿ ವಿದ್ಯಾವಂತ ನಿರುದ್ಯೋಗಿಗಳು ಹೊರಬಂದರೆ, ಉದ್ಯೋಗ ನೀಡಿಕೆ ಕೇವಲ ಅದರ ಶೇ.1ರಷ್ಟೂ ಇಲ್ಲ. ಶಿಕ್ಷಣ ಹಾಗೂ ಆರೋಗ್ಯದ ಖಾಸಗೀಕರಣ ಬಡವರನ್ನು ಸಂಕಷ್ಟಕ್ಕೀಡು ಮಾಡುತ್ತಿದೆ. ಭ್ರಷ್ಟಾಚಾರ ಮಾಡಲು ಬಿಡುವುದಿಲ್ಲ ಎಂದ ಪ್ರಧಾನಿ ಸ್ವತಃ ಅವರ ಪಕ್ಷವೇ ಹಗರಣದ ಆರೋಪ ಹೊತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ವ್ಯವಸಾಯದಲ್ಲಿ ಆಸಕ್ತಿ ಹೊಂದಿರುವ ದಲಿತರು, ಹಿಂದುಳಿದ ಸಮುದಾಯಗಳ ಬಡವರಿಗೆ ಸರಕಾರಿ ಜಮೀನು ನೀಡುವ ಬದಲು, ಕೋಟ್ಯಂತರ ಎಕರೆ ಜಮೀನುಗಳನ್ನು ಕಂಪೆನಿಗಳಿಗಾಗಿ ಕಾಯ್ದಿರಿಸಲಾಗುತ್ತದೆ. ಕೋಟ್ಯಂತರ ಎಕರೆ ಬೀಳು ಭೂಮಿಗಳನ್ನು ಕಂಪೆನಿ ಕೃಷಿಗೆ ವಹಿಸಿಕೊಡಲಾಗುತ್ತಿದೆ. 20 ಕೋಟಿಗೂ ಅಧಿಕ ಎಕರೆ ಜಮೀನುಗಳನ್ನು ಕೈಗಾರಿಕಾ ಕಾರಿಡಾರ್ ಮತ್ತಿತರೆ ಮೂಲ ಸೌಕರ್ಯಗಳ ಹೆಸರಿನಲ್ಲಿ ಬಲವಂತದ ಸ್ವಾಧೀನ ಮಾಡಲಾಗುತ್ತಿದೆ ಎಂದರು.

ಸರಕಾರಗಳ ಜನವಿರೋಧಿ ನೀತಿಗಳಿಂದಾಗಿ ಶ್ರೀಮಂತರು ಬಡವರ ನಡುವಿನ ಅಂತರ ಹೆಚ್ಚುತ್ತಿರುವುದರಿಂದ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಬೆಳೆಯುತ್ತಲೆ ಇವೆ. ಆದ್ದರಿಂದ ಈ ಸರಕಾರ ಮುಂದುವರೆಯಲು ಯಾವುದೇ ನೈತಿಕತೆ ಉಳಿದಿಲ್ಲ. ಜನವಿರೋಧಿ ನಿಲುಮೆಗಳನ್ನು ತಡೆಯಲು ತೀವ್ರ ರೀತಿಯ ಚಳುವಳಿಯೊಂದೇ ಮಾರ್ಗವಾಗಿರುವುದರಿಂದ ಈ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸುವುದರ ಅಗತ್ಯವಿದೆ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News