×
Ad

ಬೆಂಗಳೂರು: ಬಂಟ್ವಾಳ ಸಿಪಿಐ ಕಚೇರಿಯ ಮೇಲೆ ದಾಳಿ ಖಂಡಿಸಿ ಪ್ರತಿಭಟನೆ

Update: 2019-01-03 19:40 IST

ಬೆಂಗಳೂರು, ಜ. 3: ಸಂವಿಧಾನ ನಂಬಿಕೆಯೇ ಇಲ್ಲದ, ಸಂಪ್ರದಾಯವಾದಿ ಸಂಘ ಪರಿವಾರದ ವಿರುದ್ಧ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರೆಲ್ಲರೂ ಒಗ್ಗೂಡಬೇಕು ಎಂದು ಎಐಟಿಯುಸಿ ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್ ಇಂದಿಲ್ಲಿ ಕರೆ ನೀಡಿದ್ದಾರೆ.

ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಿಪಿಐ ಪಕ್ಷದ ಕಚೇರಿಗೆ ಬೆಂಕಿ ಹಚ್ಚಿದ ಸಂಘ ಪರಿವಾರದ ಕ್ರಮವನ್ನು ಖಂಡಿಸಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬಲಪಂಥೀಯ ಸಂಘ ಪರಿವಾರದ ಸಂಪ್ರದಾಯವಾದಿಗಳ ವಿರುದ್ಧ ಎಡಪಕ್ಷಗಳು-ಪ್ರಗತಿಪರರು ಒಗ್ಗೂಡಿ ಹೋರಾಟ ನಡೆಸಬೇಕು ಎಂದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ರಂಗ ಸೇರಿದಂತೆ ಎಲ್ಲ ರಂಗಗಳಲ್ಲಿ ವಿಫಲವಾಗಿರುವ ಬಿಜೆಪಿ ಕೋಮುವಾದದ ಮೂಲಕ ಜನರನ್ನು ವಂಚಿಸುತ್ತಿದೆ ಎಂದು ದೂರಿದರು.

ರಾಮಮಂದಿರ ಮತ್ತು ಶಬರಿಮಲೆಯಂತಹ ಭಾವನಾತ್ಮಕ ವಿಚಾರಗಳ ನೆಪದಲ್ಲಿ ಬಿಜೆಪಿ, ಜಾತ್ಯತೀತ ಸಮಾಜದಲ್ಲಿ ಸಂಘರ್ಷ ಸೃಷ್ಟಿಸುತ್ತಿದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದ ಅವರು, ಶಬರಿಮಲೆಗೆ ಇಬ್ಬರು ಮಹಿಳೆಯರು ಪ್ರವೇಶಿಸಿದ ಹಿನ್ನೆಲೆಯಲ್ಲಿ ಬಂಟ್ವಾಳದ ಪಕ್ಷದ ಕಚೇರಿ ಮೇಲೆ ದಾಳಿ ನಡೆಸಿದ ಸಂಘ ಪರಿವಾರದ ವಿರುದ್ಧ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪ್ರತಿಭಟನಾಕಾರರು ಬೆಂಕಿ ಹಚ್ಚುವ ಬಿಜೆಪಿ-ಸಂಘಪರಿವಾರದಿಂದ ದೇಶದ ಧರ್ಮ ರಕ್ಷಣೆ ಸಾಧ್ಯವೇ?, ಸಂಘ ಪರಿವಾರದ ಹೇಡಿ ಕೃತ್ಯಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಿಪಿಎಂ ಮುಖಂಡರಾದ ಉಮೇಶ್, ವರಲಕ್ಷ್ಮಿ, ಸಿಪಿಐಎಂಎಲ್‌ನ ಅಪ್ಪಣ್ಣ, ಸಿಪಿಐನ ಬಾಬು, ಹರಿಗೋವಿಂದ್, ಜ್ಯೋತಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News