×
Ad

ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಒಂದು ಭಾಗವಾಗಿ ಆರಂಭಿಸಬೇಕು: ನಟರಾಜ್ ಹುಳಿಯಾರ್

Update: 2019-01-03 20:20 IST

ಬೆಂಗಳೂರು, ಜ.3: ರಾಜ್ಯ ವ್ಯಾಪ್ತಿಯ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಒಂದು ಭಾಗವಾಗಿ ಆರಂಭಿಸಬೇಕು ಎಂದು ಚಿಂತಕ ಡಾ.ನಟರಾಜ್ ಹುಳಿಯಾರ್ ಅಭಿಪ್ರಾಯಪಟ್ಟರು.

ಗುರುವಾರ ನಗರದ ಕುಮಾರಕೃಪಾದ ಗಾಂಧಿ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಆಯೋಜಿಸಿದ್ದ ಸಾವಿತ್ರಿಭಾಯಿ ಫುಲೆ ಜನ್ಮ ದಿನಾಚರಣೆ ಅಂಗವಾಗಿ ‘ಇಂಗ್ಲಿಷ್ ಕಲಿಕೆ, ಅಂದು-ಇಂದು’ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪಠ್ಯಪುಸ್ತಕಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನ ಆಯ್ದ ಪಾಠಗಳನ್ನು ಜಾರಿಗೆ ತರಬೇಕು. ಮಹಾರಾಷ್ಟ್ರದಂತೆ ರಾಜ್ಯದ ಅಂಗನವಾಡಿಯಲ್ಲಿ ಅಕ್ಷರಾಭ್ಯಾಸ, 2ನೇ ತರಗತಿಯಲ್ಲಿ ವಾಕ್ಯ ರಚನೆ, ಸಂಭಾಷಣೆ ಕಲಿಕೆ ಹಾಗೂ 3ನೇ ತರಗತಿಯಿಂದ ಇಂಗ್ಲಿಷ್ ಪದಗಳನ್ನು ಪರಿಚಯಿಸಬೇಕು. ಗ್ರಾಮೀಣ ಹಾಗೂ ಪಟ್ಟಣದ ಮಕ್ಕಳ ಇಂಗ್ಲಿಷ್ ಭಾಷೆಯ ಉಚ್ಛಾರಣೆಯ ಮಡಿವಂತಿಕೆ ಸಮಸ್ಯೆಯನ್ನು ಸಾಮಾಜಿಕವಾಗಿ ಬಗೆಹರಿಸಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಸಮ್ಮಿಳಿತವಾದ ವಾತಾವರಣ ಸೃಷ್ಟಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ದೇಶದಾದ್ಯಂತ ಸರಕಾರಿ ಹಾಗೂ ಖಾಸಗಿ ಕ್ಷೇತ್ರಗಳ ನಡುವೆ ಸಂಘರ್ಷ ನಡೆಯುತ್ತಿದೆ. ಸರಕಾರಿ ಶಾಲೆಗಳ ಬಾಗಿಲು ಮುಚ್ಚುವುದನ್ನೇ ಖಾಸಗಿ ಶಾಲೆಗಳು ಕಾಯುತ್ತಿವೆ. ಸರಕಾರಿ ಶಾಲೆಗಳು ಮುಚ್ಚಿದ ತಕ್ಷಣ ಅವುಗಳನ್ನು ವಶಪಡಿಸಿಕೊಳ್ಳಲು ಹವಣಿಸುತ್ತಿವೆ ಎಂದ ಅವರು, ಇದೊಂದು ದೊಡ್ಡ ಜಾಲವಾಗಿ ಮಾರ್ಪಟ್ಟಿದೆ. ಇಂತಹ ಸಂದರ್ಭದಲ್ಲಿ ಸರಕಾರಿ ಶಾಲೆಗಳ ಸಬಲೀಕರಣ ಹಾಗೂ ಇಂಗ್ಲಿಷ್ ಮಾಧ್ಯಮ ಶಿಕ್ಷಣ ದೊಡ್ಡ ಸವಾಲಾಗಿದೆ. ಸರಕಾರಿ ಶಾಲೆಗಳನ್ನು ಉಳಿಸುವಲ್ಲಿ ಪ್ರಗತಿಪರ ಸಂಘಟನೆಗಳೆಲ್ಲ ಒಗ್ಗೂಡಿ ದನಿ ಎತ್ತಬೇಕು ಎಂದು ಕರೆ ನೀಡಿದರು.

ಇಂದು ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ (ಆರ್‌ಟಿಇ) ದುರುಪಯೋಗವಾಗುತ್ತಿದೆ. ಅತ್ಯಂತ ಕಳಪೆ ದರ್ಜೆ ಶಾಲೆಗಳು ಆರ್‌ಟಿಇ ಅಡಿ ಬಡ ಮಕ್ಕಳನ್ನು ದಾಖಲಿಸಿಕೊಳ್ಳುತ್ತಿವೆ. ಖಾಸಗಿ ಶಾಲೆಗಳಿಗೆ ಕುಡಿಯುವ ನೀರು, ವಿದ್ಯುತ್ ಬಿಲ್ಲು, ಸಿಬ್ಬಂದಿಗೆ ಸಂಬಳ ನೀಡಲು ದುಡ್ಡಿಲ್ಲ. ಹಾಗಾಗಿ ಆರ್‌ಟಿಇ ಯೋಜನೆಯ ಹಣ ಬಿಡುಗಡೆಗೆ ಸರಕಾರಕ್ಕೆ ಮನವಿ ಮಾಡಿವೆ ಎಂದು ಟೀಕಿಸಿದರು.

ಇಂಗಿಷ್ ಕಲಿಕೆಯನ್ನು ಶಿಕ್ಷಕರು ಲಘುವಾಗಿ ಸ್ವೀಕರಿಸಿದ್ದಾರೆ. ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸಿ ಇಂಗ್ಲಿಷ್ ಕಲಿಸುತ್ತಾರೆ. ಆದರೆ, ಬಡ ಮಕ್ಕಳು ಇಂಗ್ಲಿಷ್ ಕಲಿಯುವುದಿಲ್ಲವೆಂದು ಸ್ವತಃ ಅವರೇ ತೀರ್ಮಾನಿಸಿದ್ದಾರೆ. ಇಂಗ್ಲಿಷ್ ಕಲಿಕೆ ಹಿನ್ನೆಡೆಗೆ ಶಿಕ್ಷಕರೇ ಕಾರಣಕರ್ತರು ಎಂದರು.

ಶಿಕ್ಷಕಿಯರ ದಿನ: ಶಿಕ್ಷಣ ತಜ್ಞೆ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವಾದ ಜ.3 ಅನ್ನು ಶಿಕ್ಷಕಿಯರ ದಿನವಾಗಿ ಆಚರಿಸಲಾಗುವುದು. ರಾಜ್ಯದಲ್ಲಿ ಉತ್ತಮ ಶಿಕ್ಷಕಿಯರನ್ನು ಗುರುತಿಸಿ ಸಾವಿತ್ರಿಬಾಯಿ ಫುಲೆ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲು ಉದ್ದೇಶಿಸಲಾಗಿದೆ. ಸರಕಾರವೂ ಶಿಕ್ಷಕಿಯರ ದಿನ ಆಚರಿಸುವಂತೆ ಮನವಿ ಮಾಡಲಾಗುವುದು ಎಂದು ನಟರಾಜ್ ಹುಳಿಯಾರ್ ನುಡಿದರು.

ಶಿಕ್ಷಣ ತಜ್ಞ ಡಾ.ವಿ.ಬಿ.ತಾರಕೇಶ್ವರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನೆದರ್‌ಲ್ಯಾಂಡ್, ಆಫ್ರಿಕಾ, ವೆಸ್ಟ್‌ಇಂಡಿಸ್, ಆಸ್ಟ್ರೇಲಿಯಾ, ಮಲೇಷಿಯಾ ಸೇರಿದಂತೆ ವಿವಿಧ ದೇಶಗಳು ಇಂಗ್ಲಿಷ್ ಕಲಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿವೆ. ಜಗತ್ತಿನ ಶಿಕ್ಷಣ ಮಾಧ್ಯಮ ಇಂಗ್ಲಿಷ್ ಮಾಧ್ಯಮವಾಗಿ ಬದಲಾಗುತ್ತಿದೆ. ಈ ಪ್ರಕ್ರಿಯೆ ಕಳೆದ 20 ವರ್ಷಗಳಲ್ಲಿ ವೇಗವಾಗಿ ಸಾಗುತ್ತಿದೆ ಎಂದು ತಿಳಿಸಿದರು.

ಸಾಹಿತಿ ಡಾ.ಕೆ.ಶರೀಫಾ ಮಾತನಾಡಿ, ಇಂದಿಗೂ ಮಹಿಳೆಯರು ಶಿಕ್ಷಣಕ್ಕಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಇದೆ. ಮಕ್ಕಳು ಮಹಿಳೆಯರ ಮೇಲೆ ಅತ್ಯಾಚಾರ ಹೆಚ್ಚುತ್ತಿದೆ. ವೈಚಾರಿಕತೆ ಬೆಳೆಸಬೇಕಾದ ಶಿಕ್ಷಣ ಪದ್ಧತಿ ಮೌಢ್ಯತೆಯನ್ನು ಬಿತ್ತುತ್ತಿದೆ. ಇಂಥ ಸಂದರ್ಭದಲ್ಲಿ ಸಾವಿತ್ರಿಬಾಯಿ ಫುಲೆ ಅವರ ಆದರ್ಶಗಳನ್ನು ಹೆಚ್ಚೆಚ್ಚು ಪ್ರಚುರಪಡಿಸಬೇಕಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಮಾವಳ್ಳಿ ಶಂಕರ್, ನಾಗಣ್ಣ ಬಡಿಗೇರ, ನಾಗತಿಹಳ್ಳಿ ನಾಗರಾಜ್ ಇನ್ನಿತರರು ಉಪಸ್ಥಿತರಿದ್ದರು.

‘ಕಸಾಪ ಸರಕಾರಿ ಶಾಲೆ ದತ್ತು ತೆಗೆದುಕೊಳ್ಳಲಿ’

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಶಾಲೆಗಳ ಸಬಲೀಕರಣ ಬಯಸುವುದಾದರೆ ಪರಿಷತ್ತಿನ ಪಕ್ಕದಲ್ಲಿರುವ ಅತ್ಯಂತ ಹಳೆಯದಾದ ಸರಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಮುನ್ನಡೆಸಲಿ. ಅದು ಅಲ್ಲದೆ, ಸರಕಾರಿ ಶಾಲೆಗಳ ಸಬಲೀಕರಣ ವಿಚಾರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಿರ್ಲಕ್ಷತೆ ವಹಿಸಿದೆ. ಜತೆಗೆ ಪ್ರಗತಿಪರ ನಡೆಯನ್ನು ವಿರೋಧಿಸುವ ಜಾಡಿಗೆ ಇಳಿದಿದೆ.

-ಡಾ.ನಟರಾಜ್ ಹುಳಿಯಾರ್, ಚಿಂತಕ

ಏಕೆ ಪ್ರಶ್ನಿಸಬಾರದು?

ಸಾಮಾಜಿಕ ಮೌಢ್ಯಗಳನ್ನು ಯಾಕೆ ಪ್ರಶ್ನಿಸಬಾರದು? ಸಾಹಿತ್ಯ ಸಮ್ಮೇಳನದಲ್ಲಿ ಫ್ಯಾಷನ್ ಶೋ ರೀತಿ ಪೂರ್ಣಕುಂಭ ಹೊರಲು, ಸಂಸಾರದ ನಭ ಹೊರಲು ಮಹಿಳೆಯರನ್ನು ಬಳಸಿಕೊಳ್ಳಲಾಗುತ್ತಿದೆ. ಸಾಹಿತ್ಯವಿರುವುದು ಓದಲೋ ಅಥವಾ ಮಹಿಳೆಯರು ಇರುವುದು ತಮ್ಮ ವಿಚಾರಗಳನ್ನು ಮಂಡಿಸಲೋ? ಕಾಲ ಬದಲಾದಂತೆ ಮೌಲ್ಯಗಳು ಬದಲಾಗುತ್ತವೆ. ವೌಲ್ಯಗಳು ಬದಲಾದಂತೆ ನಾವೂ ಬದಲಾಗಬೇಕಿದೆ

-ಡಾ.ಕೆ.ಶರೀಫಾ, ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News