ಕಾಂಗ್ರೆಸ್ ಜೊತೆ ಸರಕಾರ ರಚಿಸಿ ಕೋಮುವಾದಿ ಬಿಜೆಪಿಯನ್ನು ದೂರವಿಟ್ಟಿದ್ದೇವೆ: ಸಿಎಂ ಕುಮಾರಸ್ವಾಮಿ

Update: 2019-01-03 15:58 GMT

ಬೆಂಗಳೂರು, ಜ.3: ಜೆಡಿಎಸ್ ಪಕ್ಷ ಜಾತ್ಯತೀತ ತತ್ವವನ್ನು ಅಳವಡಿಸಿಕೊಂಡಿದ್ದು, ಇದೇ ಆಧಾರದ ಮೇಲೆ ಜನರಲ್ಲಿ ಮತಯಾಚನೆ ಮಾಡಿದ್ದೆವು. ಆದರೆ, ನಾವು ಅಂದುಕೊಂಡಷ್ಟು ನಮ್ಮ ಶಾಸಕರು ಗೆಲುವು ಸಾಧಿಸದಿದ್ದರೂ ದೇವರ ಬಲದಿಂದಾಗಿ ಮತ್ತೆ ಸಿಎಂ ಸ್ಥಾನ ಲಭಿಸಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಗುರುವಾರ ನಗರದ ಜೆಪಿ ಭವನದಲ್ಲಿ ಸ್ಥಳೀಯ ಸಂಸ್ಥೆಗಳು ಹಾಗೂ ಲೋಕಸಭಾ ಚುನಾವಣಾ ಪೂರ್ವ ಪಕ್ಷದ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷದ ಮುಖಂಡರುಗಳು ಜೆಡಿಎಸ್ ಪಕ್ಷವನ್ನು ನಿರ್ನಾಮ ಮಾಡುತ್ತೇವೆ ಎಂದು ಹೇಳಿಕೆಗಳನ್ನು ನೀಡುತ್ತಾರೆ. ಆದರೆ, ಇದೇ ಪಕ್ಷದ ಕಚೇರಿಯ ಬಾಗಿಲಿಗೆ ಬಂದು ನಾವು ನಿಮ್ಮ ಜೊತೆಗೆ ಸಮ್ಮಿಶ್ರ ಸರಕಾರ ರಚಿಸಲು ಸಿದ್ಧವೆಂದು ಹೇಳಿದ್ದರು. ಆದರೆ, ನಾವು ಆ ಕೋಮುವಾದಿ ಪಕ್ಷವನ್ನು ದೂರವಿಟ್ಟು, ಕಾಂಗ್ರೆಸ್ ಜೊತೆಗೆ ಸಮ್ಮಿಶ್ರ ಸರಕಾರ ರಚಿಸಿದೆವು. ಹಾಗೆಯೇ ದೇವರ ಬಲದಿಂದಾಗಿ ಮತ್ತೆ ಸಿಎಂ ಸ್ಥಾನ ಕೂಡ ಲಭಿಸಿತು ಎಂದು ಹೇಳಿದರು.

ನನ್ನ ಜನರೇ ನನ್ನನ್ನು ನಂಬುತ್ತಿಲ್ಲವಲ್ಲ ಎಂದು ಇದೇ ಜಾಗದಲ್ಲಿ ವಿಷ ಕುಡಿದು ವಿಷಕಂಠನಾಗಿದ್ದೇನೆಂದು ಕಣ್ಣೀರು ಹಾಕಿದ್ದೆ. ಉಮೇಶ್ ಕತ್ತಿ ಅವರು 6ನೆ ತಾರೀಖಿನೊಳಗೆ ಸರಕಾರ ರಚಿಸುತ್ತೇವೆ ಎಂದಿದ್ದರು. ಹೊಸ ಸರಕಾರ ರಚಿಸಿಕೊಳ್ಳಲು ನನ್ನಿಂದ ತೊಂದರೆಯಾಗಬಾರದೆಂದು ನಾನು ವಿದೇಶಕ್ಕೆ ಹೋಗಿದ್ದೆ. ಆದರೆ ಮೇಲೊಬ್ಬ ದೇವರು ಇದ್ದಾನಲ್ಲ, ಅವನ ರಕ್ಷಣೆ ನಮ್ಮ ಮೇಲೆ ಇದೆ ಎಂದು ಎಚ್‌ಡಿಕೆ ಹೇಳಿದರು. ಇನ್ನು, ರೈತರಿಗೆ ನಾನು ಲಾಲಿಪಾಪ್ ಕೊಟ್ಟಿದ್ದೇನೆಂದು ಪ್ರಧಾನಿಗಳು ಹೇಳಿದ್ದಾರೆ. ಪ್ರಧಾನಿ ಸ್ಥಾನದಲ್ಲಿ ಇರುವವರು ಜವಾಬ್ದಾರಿಯಿಂದ ಮಾತನಾಡಬೇಕು. ಇಷ್ಟೆಲ್ಲಾ ಸಾಲಮನ್ನಾ ಮಾಡಿದ ಮೇಲೂ ರೈತರು ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾಹಿತಿ ತರಿಸಿಕೊಂಡಿದ್ದೇನೆ. ರೈತರ ಆತ್ಮಹತ್ಯೆಗೆ ಬೇರೆ ಕಾರಣಗಳೂ ಇರುತ್ತವೆ ಎಂದು ಹೇಳಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡಿ, ಜಾತ್ಯತೀತ ವ್ಯವಸ್ಥೆಯಲ್ಲಿ ಕಾಂಗ್ರೆಸ್ ಹಿರಿಯಣ್ಣನಂತೆ. ಪ್ರಾದೇಶಿಕ ಪಕ್ಷಗಳನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ನಾನು ಯಾರ ವಿರುದ್ಧವೂ ದೂರಲ್ಲ ಎಂದು ನುಡಿದರು. ಈ ಪಕ್ಷವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಸಚಿವರು ಮತ್ತು ಶಾಸಕರ ಮೇಲಿದೆ. ಎಲ್ಲರೂ ಸಚಿವರಾಗಲು ಸಾಧ್ಯವಿಲ್ಲ. ನಮಗೆ ಹತ್ತು ನಿಗಮ ಮಂಡಳಿಗಳನ್ನು ಕೊಟ್ಟಿದ್ದಾರೆ. ಅವರಿಗೆ 20 ನಿಗಮ ಮಂಡಳಿಗಳಿವೆ, 30 ಶಾಸಕರಿಗೆ 3 ಅಥವಾ 4 ಬೋರ್ಡ್‌ಗಳು ಬರಬಹುದು ಎಂದರು.

ವಿಶ್ವನಾಥ್ ಕೆಲಸ ಮಾಡುವ ವ್ಯಕ್ತಿ, ಅನುಭವ ಇದೆ. ಆದರೆ ಏಳು ತಿಂಗಳಿಂದ ಏನೂ ಮಾಡಲು ಆಗಿಲ್ಲ. ಪ್ರತಿದಿನ ಬರುತ್ತಾರೆ ಹೋಗುತ್ತಾರೆ. ಅದಕ್ಕೆ ನಾನು ಕಾರ್ಯಪ್ರವೃತ್ತನಾದೆ. ಫೆಬ್ರವರಿ ಒಳಗಾಗಿ ರಾಜ್ಯಾದ್ಯಂತ ಮುಸ್ಲಿಂ ಮೈನಾರಿಟಿ ಸಭೆಗಳನ್ನು ಮಾಡಿ ಎಂದು ಕರೆ ನೀಡಿದರು.

ಇನ್ನು ಸಾಲಮನ್ನಾ ವಿಚಾರ ಬುಕ್ ಅಡ್ಜೆಸ್ಟ್ ಮೆಂಟ್ ಆಗಬಾರದು ಎಂದು ಮಾಜಿ ಸಿಎಂ ಎಸ್.ಎಂ. ಕೃಷ್ಣ ಹೇಳಿದ್ದಾರೆ. ಅವರಿಗೆ ಮಾಹಿತಿ ಇಲ್ಲವಾದರೆ ಅವರ ಮನೆಗೂ ಒಂದು ಕಾಪಿ ಕಳುಹಿಸುತ್ತೇನೆ. ಬುಕ್ ಅಡ್ಜಸ್ಟ್ ಮೆಂಟ್ ಮಾಡುವವರು ಬ್ಯಾಂಕ್ ಸೆಕ್ರೆಟರಿಗಳು. ಅದಕ್ಕೆ ಆ ರೀತಿ ಆಗಬಾರದು ಎಂಬ ಕಾರಣಕ್ಕೆ ಒಂದು ಪ್ರತ್ಯೇಕ ಸೆಲ್ ಮಾಡಿ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದೇವೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಕೃಷ್ಣ ಪ್ರತಿಕ್ರಿಯೆಗೆ ತಿರುಗೇಟು ನೀಡಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮಾತನಾಡಿ, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ನಿಗಮ ಮಂಡಳಿಗಳ ಸದಸ್ಯತ್ವದ ಗೌರವ ಕೊಡಬೇಕು. ಹೀಗಾಗಿ, ಆದಷ್ಟು ಬೇಗ ನಿಗಮ-ಮಂಡಳಿ ಅಧ್ಯಕ್ಷರನ್ನ ನೇಮಿಸುವಂತೆ ಒತ್ತಾಯಿಸಿದರು. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರವು, ಕೊಡಗು ಪುನರ್ ನಿರ್ಮಾಣ, ಅಂಬರೀಶ್ ನಿಧನ, ಮಂಡ್ಯದ ಬಸ್ ದುರಂತ, ಹನೂರು ದೇವಾಲಯದ ವಿಷ ಪ್ರಾಶನ ಸಂದರ್ಭದಲ್ಲಿ ಮಾಡಿದ ನಿರ್ವಹಣೆ ಚೆನ್ನಾಗಿತ್ತು, ಎಲ್ಲರೂ ಮೆಚ್ಚಿಕೊಳ್ಳುವಂತೆ ಆಗಿದೆ. ಇನ್ನು, ರೈತರ ಸಾಲ ಮನ್ನಾ ಹುಡುಗಾಟವಲ್ಲ. ಈ ಸವಾಲನ್ನು ಕುಮಾರಸ್ವಾಮಿ ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ. ಇದರ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಚಿವ ಎಚ್.ಡಿ.ರೇವಣ್ಣ, ಸಚಿವ ಜಿ.ಟಿ.ದೇವೇಗೌಡ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ರೇವುನಾಯಕ್ ಬೆಳಮಗಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News