×
Ad

ಸಿಸಿಬಿ ಪೊಲೀಸ್ ಬಲೆಗೆ ಬಿದ್ದ ಬಹುಕೋಟಿ ವಂಚಕ: ಹಲವು ದಾಖಲೆಗಳು ಜಪ್ತಿ

Update: 2019-01-03 22:44 IST

ಬೆಂಗಳೂರು, ಜ.3: ಮಂಗಳೂರು ಸೇರಿದಂತೆ ನಾನಾ ಕಡೆ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿಕೊಡುವುದಾಗಿ ನಂಬಿಸಿ ಬಹುಕೋಟಿ ವಂಚನೆ ಮಾಡಿದ ಆರೋಪದಡಿ ಸ್ಕೈಲೈನ್ ಕನ್‌ಸ್ಟ್ರಕ್ಷನ್ ಹೌಸಿಂಗ್ ಪ್ರೈ.ಲಿ ಮತ್ತು ಕಲ್ಮನೆ ಕಾಫಿಯ ವ್ಯವಸ್ಥಾಪಕ ನಿರ್ದೇಶಕನನ್ನು ಸಿಸಿಬಿ ಪೊಲೀಸರು ಬಂಧಿಸಿ ಹಲವು ದಾಖಲಾತಿಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಅವಿನಾಶ್ ಪ್ರಭು ಬಂಧಿತ ಆರೋಪಿಯಾಗಿದ್ದು, ಈತ ತನ್ನ ಸಹೋದರನೊಂದಿಗೆ ಜತೆಗೂಡಿ ಬೆಂಗಳೂರಿನ ಕೆ.ನಾರಾಯಣಪುರ ಬಳಿ ಸ್ಕೈಲೈನ್ ಔರಾ-100, ಹೊರಮಾವು ಬಳಿ ಸ್ಕೈಲೈನ್ ರಿಟ್ರೀಟ್-87, ಹೆಣ್ಣೂರು ಮುಖ್ಯರಸ್ತೆಯ ಸ್ಕೈಲೈನ್ ಅಕೇಶಿಯಾ-40, ರೆಸ್ಟ್ ಹೌಸ್ ರಸ್ತೆಯ ಸ್ಕೈಲೈನ್-ವಿಲ್ಲಾ ಮಾರಿಯಾ, ಯಲಹಂಕ ಬಳಿ ಸ್ಕೈಲೈನ್ ವಾಟರ್ ಫ್ರಂಟ್-78.

ಮಂಗಳೂರಿನಲ್ಲಿ ಸ್ಕೈಲೈನ್ ಬ್ಲೂಬೇರಿ-30 ಮತ್ತು ಬೆಸ್ಟ್ ಹೌಸ್-06 ಎಂಬ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿ ಮಾರಾಟ ಮಾಡುವುದಾಗಿ ಸಾರ್ವಜನಿಕರಿಗೆ ತಿಳಿಸಿ, ಗ್ರಾಹಕರಿಂದ ನೂರಾರು ಕೋಟಿ ರೂಪಾಯಿಗಳನ್ನು ಮುಂಗಡವಾಗಿ ಪಡೆದು, ವಂಚನೆ ಮಾಡಿರುವುದಾಗಿ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದರು.

ವಂಚೆನಗೊಳಗಾದ ಕ್ರಿಸ್ಟೋಫರ್ ರೀಗಲ್ ಎಂಬುವರು ಇಲ್ಲಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದರ ಅನ್ವಯ, ಪ್ರಕರಣದ ಗಂಭೀರತೆಯನ್ನು ಅರಿತು ಮುಂದಿನ ತನಿಖೆಯನ್ನು ಸಿಸಿಬಿ ಘಟಕಕ್ಕೆ ವರ್ಗಾವಣೆ ನೀಡಲಾಗಿತ್ತು. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಗುರುವಾರ ದಾಳಿ ನಡೆಸಿ ಬಂಧಿಸಿರುವುದಲ್ಲದೆ, ರೇಂಜ್ ರೋವರ್, ಆಡಿ ಮತ್ತು ಇನ್ನೋವಾ ಕಾರುಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿ ತನ್ನ ಸಹೋದರ ಧೀರಜ್ ಪ್ರಭುನೊಂದಿಗೆ ಸೇರಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿಕೊಡುವುದಾಗಿ ಆಮಿಷವೊಡ್ಡಿ ಆರಂಭಿಕ ಮುಂಗಡವಾಗಿ ಶೇಕಡ 90 ರಷ್ಟು ಹಣ ಪಡೆದು, ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಕಾರ್ಯವನ್ನು ಮಧ್ಯದಲ್ಲಿ ನಿಲ್ಲಿಸಿ, ಗ್ರಾಹಕರಿಗೆ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿಕೊಡದೇ ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಆಯುಕ್ತರು ವಿವರಿಸಿದರು.

ಆರೋಪಿಯು ವಿವಿಧ ಬ್ಯಾಂಕುಗಳಲ್ಲಿ 15 ಖಾತೆಗಳನ್ನು ಹೊಂದಿರುವುದು ತನಿಖಾ ವೇಳೆ ತಿಳಿದು ಬಂದಿದ್ದು, ಅವುಗಳನ್ನು ಸ್ಥಗಿತಗೊಳಿಸಲಾಗಿದೆ. ಈತ ಸುಮಾರು 200 ಜನರಿಗೆ 100 ಕೋಟಿಗೂ ಅಧಿಕ ಹಣವನ್ನು ವಂಚಿಸಿರುವುದಾಗಿಯೂ ಹಾಗೂ ವಂಚಿಸಲಾಗಿರುವ ಹಣವನ್ನು ಕೆಂಗೇರಿಯಲ್ಲಿ 5 ಎಕರೆ, ಅಲ್ಲಾಲಸಂದ್ರ ಬಳಿ 3 ಎಕರೆ, ಹೆಣ್ಣೂರು ಬಳಿ- 3 ಎಕರೆ. ಕನಕಪುರ ಬಳಿ 7-ಎಕರೆ, ಮಂಗಳೂರಿನಲ್ಲಿ-8.5 ಎಕರೆ, ಚೆನೈನ ನೆಲ್ಸನ್ ಮಾಣಿಕ್ಯಂ ರಸ್ತೆಯಲ್ಲಿ -ಅರ್ಧ ಎಕರೆ ಬೆಂಗಳೂರು ಹಾಗೂ ಹೊರ ರಾಜ್ಯಗಳಲ್ಲಿ ಜಮೀನುಗಳ ಮೇಲೆ ಹಾಗೂ ಬೆಂಗಳೂರಿನ ವಿವಿಧೆಡೆ 11 ಕಲ್ಮನೆ ಕಾಫಿ ಜೌಟ್‌ಲೆಟ್‌ಗಳ ಮೇಲೆ ಅಕ್ರಮವಾಗಿ ಹಣ ಹೂಡಿಕೆ ಮಾಡಿ ಐಷಾರಾಮಿ ಜೀವನ ನಡೆಸುತ್ತಿರುವುದಾಗಿ ತಿಳಿದು ಬಂದಿರುತ್ತದೆ ಎಂದು ಸುನೀಲ್‌ಕುಮಾರ್ ತಿಳಿಸಿದರು.

ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಆರೋಪಿ ಧೀರಜ್ ಪ್ರಭುನ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಅಪರಾಧ ವಿಭಾಗದ ಅಪರ ಪೊಲೀಸ್ ಆಯುಕ್ತ ಆಲೋಕ್ ಕುಮಾರ್ ತಿಳಿಸಿದರು.

ಈ ಸಂದರ್ಭದಲ್ಲಿ ಸಿಸಿಬಿ ಡಿಸಿಪಿ ಎಸ್.ಗಿರೀಶ್, ಸಹಾಯಕ ಪೊಲೀಸ್ ಆಯುಕ್ತ ಬಿ.ಆರ್.ವೇಣುಗೋಪಾಲ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News