×
Ad

ರಾಜ್ಯದಲ್ಲಿ ರಾಷ್ಟ್ರೀಯ ಮಹಿಳಾ ಪಕ್ಷಕ್ಕೆ ಚಾಲನೆ

Update: 2019-01-03 22:55 IST

ಬೆಂಗಳೂರು, ಜ.3: ಮಹಿಳೆಯರಿಗೆ ಶಾಸಕ ಸಭೆಗಳಲ್ಲಿ ಶೇ.50 ರಷ್ಟು ಮೀಸಲಾತಿ ಕಲ್ಪಿಸುವುದು, ಮಹಿಳಾ ಸಮಾನತೆ ಹಾಗೂ ಮಹಿಳಾ ಹಕ್ಕುಗಳ ಸಂರಕ್ಷಣೆಯನ್ನೇ ಪ್ರಧಾನವಾಗಿರಿಸಿಕೊಂಡು ರಾಷ್ಟ್ರೀಯ ಮಹಿಳಾ ಪಕ್ಷವನ್ನು ರಾಜ್ಯದಲ್ಲಿ ವಿಸ್ತರಿಸಲಾಗುತ್ತಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ.ಶ್ವೇತಾ ಶೆಟ್ಟಿ ತಿಳಿಸಿದ್ದಾರೆ.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ರಾಷ್ಟ್ರೀಯ ಮಹಿಳಾ ಪಕ್ಷ ಆಯೋಜಿಸಿದ್ದ, ಪಕ್ಷದ ರಾಜ್ಯ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ರಾಜಧಾನಿಯಲ್ಲಿ ಪಕ್ಷಕ್ಕೆ ಕಳೆದ ತಿಂಗಳು ಚಾಲನೆ ನೀಡಿದ್ದು, ಇದೀಗ ತನ್ನ ಜಾಲವನ್ನು ರಾಜ್ಯದಾದ್ಯಂತ ವಿಸ್ತರಿಸಲು ನಿರ್ಧರಿಸಲಾಗಿದೆ. ಪಕ್ಷದಲ್ಲಿ ಹೆಚ್ಚಿನ ಆದ್ಯತೆ ಮಹಿಳೆಯರಿಗೆ ನೀಡಲಿದ್ದು, ಪಕ್ಷದ ತತ್ವ ಸಿದ್ಧಾಂತವನ್ನು ಬೆಂಬಲಿಸುವ ಪುರುಷರಿಗೂ ಅವಕಾಶವನ್ನು ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಹಾಲಿ ರಾಜಕೀಯ ಪಕ್ಷಗಳು ಮಹಿಳೆಯರ ಹಕ್ಕುಗಳ ಮತ್ತು ಸಮಾನತೆ ವಿಚಾರಗಳನ್ನು ನಿರ್ಲಕ್ಷಿಸಿವೆ. ಲೋಕಸಭೆಯಲ್ಲಿ 545 ಸದಸ್ಯರಿದ್ದು, ಶೇ.11 ರಷ್ಟು ಮಾತ್ರ ಮಹಿಳೆಯರಿದ್ದಾರೆ. ಮಹಿಳೆಯರಿಗೆ ಶಾಸನ ಸಭೆಗಳಲ್ಲಿ ಶೇ.33 ರಷ್ಟು ಮಹಿಳಾ ಮೀಸಲಾತಿ ಕಲ್ಪಿಸಲು ರಾಜಕೀಯ ಪಕ್ಷಗಳಲ್ಲಿ ಒಮ್ಮತ ಮೂಡಿಲ್ಲ. ಇದೇ ಉದ್ದೇಶದಿಂದ ಪಕ್ಷ ಸ್ಥಾಪಿಸಲಾಗಿದ್ದು, ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ಪಕ್ಷದ ಗುರಿಯಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News