×
Ad

ಬೆಂಗಳೂರು ಮಹಾನಗರ ಪಾಲಿಕೆಯ ಒಂದು ಕಸದ ಬುಟ್ಟಿಗೆ 2.8 ಲಕ್ಷ ಖರ್ಚು: ಆರೋಪ

Update: 2019-01-03 23:01 IST

ಬೆಂಗಳೂರು, ಜ.3: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಸದ ಬುಟ್ಟಿಗಾಗಿಯೇ 2.8 ಲಕ್ಷ ಖರ್ಚು ಮಾಡುವ ಮೂಲಕ ಸೈಂಟಿಫಿಕ್ ವೇಸ್ಟ್ ಕಲೆಕ್ಷನ್ ಬಿನ್ ಹೆಸರಲ್ಲಿ ಸಾರ್ವಜನಿಕರ ಹಣವನ್ನು ವ್ಯಯ ಮಾಡುತ್ತಿದೆ. ನಗರದ ವಿವಿಧೆಡೆ ಹಸಿ ಒಣ ಕಸಕ್ಕೆ ಬುಟ್ಟಿಗಳನ್ನು ಅಳವಡಿಸಲಾಗಿದ್ದು, ಇದರ ಒಟ್ಟು ಖರ್ಚು 5.79 ಲಕ್ಷ ರೂ. ಯಾಗಿದ್ದು, ಒಂದು ಕಸದ ಬುಟ್ಟಿಗೆ 2,89,500 ರೂ. ಗಳಂತೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಒಟ್ಟು 200 ಕಡೆ 400 ಬಿನ್‌ಗೆ 11.58 ಕೋಟಿ ರೂಪಾಯಿ ಪೋಲು ಮಾಡಲಾಗಿದೆ ಎಂದು ಜೋಗುಪಾಳ್ಯ ವಾರ್ಡ್ ಸದಸ್ಯ ಗೌತಮ್ ಆರೋಪಿಸಿದ್ದಾರೆ.

ಡಸ್ಟ್ ಬಿನ್ ಯೋಜನೆ ಜಾರಿಗೆ ತರಲು 2016 ಡಿಸೆಂಬರ್ 22 ರಂದು ಟೆಂಡರ್ ಕರೆಯಲಾಗಿತ್ತು. ಆದರೆ ಯೋಜನೆ 2018 ಮಾರ್ಚ್‌ನಲ್ಲಿ ಜಾರಿ ಬಂದಿದೆ. ಯಾವುದೇ ಯೋಜನೆಗೆ ಕೈ ಹಾಕಬೇಕಾದರೆ ಎಲ್ಲೆಲ್ಲಿ ಡೆಸ್ಟ್ ಬಿನ್ ಹಾಕಬೇಕು ಎಂಬ ಮಾಹಿತಿ ಸಿದ್ಧಪಡಿಸಬೇಕು. ಆದರೆ ಆ ಇನ್ನೂರು ಪ್ರದೇಶಗಳನ್ನು ಮೊದಲೇ ಗುರುತಿಸಿಲ್ಲ. ಪ್ರಸ್ತುತ ನೂರು ಸ್ಥಳಗಳಲ್ಲಿ ಡೆಸ್ಟ್‌ಬಿನ್ ಅಳವಡಿಸಲಾಗಿದೆ.

ತಜ್ಞರ ಪ್ರಕಾರ ಆ ಡಸ್ಟ್ ಬಿನ್‌ಗಳ ಸಾಮರ್ಥ್ಯ ತಿಂಗಳಿಗೆ 2 ಮೆಟ್ರಿಕ್ ಟನ್ ಕಸ ಮಾತ್ರ. ಆ ಪ್ರಕಾರ 200 ಕಡೆ 5 ವರ್ಷದಲ್ಲಿ 24 ಸಾವಿರ ಮೆಟ್ರಿಕ್ ಟನ್ ಕಸ ಸಂಗ್ರಹವಾಗಲಿದೆ. ಪ್ರತಿ 1 ಮೆಟ್ರಿಕ್ ಟನ್‌ಗೆ 625 ರೂ. ನೀಡಿದರೆ 1.5 ಕೋಟಿ ರೂ. ಸಾಕಾಗುತ್ತದೆ. ಈ ಪ್ರಕಾರ 33 ಕೋಟಿಯಲ್ಲಿ ಉಳಿಕೆಯ 31.50 ಕೋಟಿ ರೂ. ಏನಾಯಿತು ಎಂಬುದು ಪ್ರಶ್ನೆಯಾಗಿದೆ.

ಕಸ ಎತ್ತಲು ಬಳಸುವ ವಾಹನ, ಯಂತ್ರಕ್ಕೆ 11.58 ಕೋಟಿ ರೂ. ಹಾಗೂ ಕಸ ಸಾಗಣೆ ಮಾಡಲು ಬಳಸುವ ಯಂತ್ರದ ಖರ್ಚು 4.48 ಕೋಟಿ ರೂ.ಆಗಿದ್ದು, ಈ ಪ್ರಕಾರ 200 ಕಡೆಗಳಲ್ಲಿ ಕಸ ತೆಗೆಯಲು 8 ವಾಹನ ಬಳಸುತ್ತಿದ್ದು, ಒಂದು ವಾಹನಕ್ಕೆ 56 ಲಕ್ಷ ರೂ. ಆಗುತ್ತದೆ. ಅಷ್ಟೇ ಅಲ್ಲದೆ ಕಸದ ಡಬ್ಬಗಳ ನಿರ್ವಹಣೆಗೆ 5.21 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಕೋಟಿ ಕೋಟಿ ರೂ. ಹಣ ನೀಡುವ ಬದಲು ಬಿಬಿಎಂಪಿಯೇ ಹೊಸ ವಾಹನಗಳನ್ನು ಖರೀದಿಸಬಹುದು. ಸಾರ್ವಜನಿಕರ ಹಣ ದುಂದು ವೆಚ್ಚಕ್ಕೆ ಪಾಲಿಕೆ ಕಡಿವಾಣ ಹಾಕಬೇಕಿದೆ.

ಝೋಂಟಾ ಕಂಪನಿ ಸೈಂಟಿಫಿಕ್ ವೇಸ್ಟ್ ಕಲೆಕ್ಷನ್ ಬಿನ್‌ನ ಗುತ್ತಿಗೆ ಪಡೆದಿದ್ದು, 55 ಕೋಟಿ ರೂ. ಯೋಜನೆಯಾಗಿದೆ. 200 ಸ್ಥಳಗಳಲ್ಲಿ ಡೆಸ್ಟ್ ಬಿನ್‌ಗಳನ್ನು ಅಳವಡಿಸಲಾಗಿದ್ದು, ಮೇಲ್ವಿಚಾರಣೆಗೆ 25.75 ಲಕ್ಷ ರೂ. ಖರ್ಚಾಗುತ್ತದೆ ಎಂದು ಕಂಪನಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News