ಜ.8, 9ರ ಮುಷ್ಕರಕ್ಕೆ ಎಐಕೆಎಸ್‌ಸಿಸಿ ಗ್ರಾಮ ಮಟ್ಟದ ಘಟಕಗಳಿಗೆ ಕರೆ
ಬೆಂಗಳೂರು, ಡಿ.3: ಕೇಂದ್ರ ಸರಕಾರದ ರೈತ-ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಜ.8,9 ರಂದು ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ತನ್ನ ಭಾಗೀದಾರ ಸಂಘಟನೆಗಳ, ಗ್ರಾಮ ಮಟ್ಟದ ಘಟಕಗಳಿಗೆ ಅಖಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಕರೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಕೆಎಸ್‌ಸಿಸಿ ರಾಜ್ಯ ಸಂಚಾಲಕ ಜೆಸಿ ಬಯ್ಯಿರೆಡ್ಡಿ, ಬರಪರಿಹಾರಕ್ಕಾಗಿ ನ್ಯಾಯ ಬದ್ಧವಾಗಿ ನೀಡಬೇಕಿರುವ ಅನುದಾನಗಳನ್ನು ಕೇಂದ್ರ ಸರಕಾರ ಬಿಡುಗಡೆ ಮಾಡುತ್ತಿಲ್ಲ. ಜೊತೆಗೆ ತೊಗರಿ, ಭತ್ತ, ರೇಷ್ಮೆ, ಕಬ್ಬಿಗೆ ಸಂಬಂಧಿಸಿದ ಕನಿಷ್ಠ ಬೆಂಬಲ ಬೆಲೆ ನಿಗದಿ ಮತ್ತು ಖರೀದಿಯ ಸಮರ್ಪಕವಾಗಿ ನಡೆಯುತ್ತಿಲ್ಲ. ಇಂತಹ ಎಲ್ಲ ಸಮಸ್ಯೆಗಳು ಪರಿಹಾರಕ್ಕಾಗಿಯೂ ಮುಷ್ಕರ ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು.
ಋಣಮುಕ್ತ ಆಯೋಗಕ್ಕೆ ಆಗ್ರಹ: ಬರಗಾಲ, ಅತಿವೃಷ್ಟಿಯಂತಹ ವಿಶೇಷ ಸಂದರ್ಭಗಳಲ್ಲಿ ಬ್ಯಾಂಕ್ ಹಾಗೂ ಖಾಸಗಿ ಸಾಲ ಮನ್ನಾದಂತಹ ಪ್ರಶ್ನೆಗಳನ್ನು ಶಾಶ್ವತವಾಗಿ ನಿರ್ವಹಿಸಲು ರಾಜ್ಯದಲ್ಲಿ ಕೇರಳ ಮಾದರಿಯ ಋಣ ಮುಕ್ತ ಆಯೋಗದವನ್ನು ರಚಿಸಬೇಕೆಂದು ಅಖಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.