ಮೀನುಗಾರರನ್ನು ಸುರಕ್ಷಿತವಾಗಿ ಕರೆತರಲು ಅಗತ್ಯ ಕ್ರಮ: ಸಚಿವೆ ಜಯಮಾಲಾ

Update: 2019-01-04 14:16 GMT

ಬೆಂಗಳೂರು, ಜ. 4: ಮಲ್ಪೆ ಬಂದರಿನಿಂದ 18 ದಿನಗಳ ಹಿಂದೆ ತೆರಳಿದ್ದ 8 ಮಂದಿ ಮೀನುಗಾರರಿದ್ದ ‘ಸುವರ್ಣ ತ್ರಿಭುಜ’ ಬೋಟ್ ನಾಪತ್ತೆಯಾಗಿದ್ದು, ಮೀನುಗಾರರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಸರಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ತಿಳಿಸಿದ್ದಾರೆ.

ಬೋಟ್ ನಾಪತ್ತೆ ಪ್ರಕರಣ ಸಂಬಂಧ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರೊಂದಿಗೆ ಸಮಾಲೋಚನೆ ನಡೆಸಿದ್ದು, ಅಗತ್ಯ ಮಾಹಿತಿ ನೀಡಲಾಗಿದೆ. ಶೋಧನಾ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ. ನಾಳೆ(ಜ.5) ನಾನು ಉಡುಪಿಗೆ ತೆರಳಲಿದ್ದು, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ಷಿಪ್ರ ಕಾರ್ಯಾಚರಣೆ ರೂಪರೇಷೆ ಸಿದ್ಧಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಕರ್ನಾಟಕ ರಾಜ್ಯ, ಗೋವಾ ಮತ್ತು ಮಹಾರಾಷ್ಟ್ರ ವ್ಯಾಪ್ತಿಯಲ್ಲಿಯೂ ಶೋಧನಾ ಕಾರ್ಯ ಅತ್ಯಂತ ವ್ಯಾಪಕವಾಗಿ ನಡೆಸಲು ನಿಗಾ ವಹಿಸಲಾಗಿದೆ. ಮಹಾರಾಷ್ಟ್ರದ ಬಂದರುಗಳಲ್ಲಿ ಮತ್ತು ಸಮುದ್ರ ಪ್ರದೇಶಗಳಲ್ಲಿ ಶೋಧನಾ ಕಾರ್ಯಕ್ಕೆ ಸೈನ್ಯದ ನೆರವು ಪಡೆದುಕೊಳ್ಳಲು ಅನುಮತಿ ಪ್ರಕ್ರಿಯೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬೋಟ್ ನಾಪತ್ತೆಯಾದ ಸುದ್ದಿ ತಿಳಿದ ಕೂಡಲೇ ಕರಾವಳಿ ಕಾವಲು ಪೊಲೀಸ್, ಕೋಸ್ಟ್ ಗಾರ್ಡ್ ಮತ್ತು ಮೀನುಗಾರಿಕಾ ಇಲಾಖೆಗಳಿಗೆ ಮಾಹಿತಿ ನೀಡಿದ್ದು, ಶೋಧನಾ ಕಾರ್ಯಕ್ಕೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲು ಈಗಾಗಲೇ ಸೂಚಿಸಲಾಗಿದೆ ಎಂದು ಜಯಮಾಲಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News