ವಿರೋಧದ ನಡುವೆಯೂ ಪೌರತ್ವ ಮಸೂದೆ ಕುರಿತ ವರದಿ ಅಂಗೀಕರಿಸಿದ ಜೆಪಿಸಿ

Update: 2019-01-04 14:21 GMT

ಹೊಸದಿಲ್ಲಿ,ಜ.4: ಪೌರತ್ವ ಕಾಯ್ದೆ,1955ರಲ್ಲಿ ತಿದ್ದುಪಡಿಗಳನ್ನು ತರಲು ಉದ್ದೇಶಿಸಿರುವ ಪೌರತ್ವ(ತಿದ್ದುಪಡಿ) ಮಸೂದೆ,2016ಕ್ಕೆ ಹಸಿರು ನಿಶಾನೆಯನ್ನು ತೋರಿಸಿರುವ ವರದಿಯನ್ನು ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯು ಗುರುವಾರ ಅಂಗೀಕರಿಸಿದೆ.

ಈ ತಿದ್ದುಪಡಿಯು ಅಫ್ಘಾನಿಸ್ಥಾನ,ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳ ಅಲ್ಪಸಂಖ್ಯಾತ ಸಮುದಾಯಗಳು 12 ವರ್ಷಗಳ ಬದಲು ಆರು ವರ್ಷಗಳ ಅವಧಿಗೆ ದೇಶದಲ್ಲಿ ವಾಸದ ಬಳಿಕ ಅವರಿಗೆ ಭಾರತದ ಪೌರತ್ವವನ್ನು ನೀಡುತ್ತದೆ.

ಅಸ್ಸಾಂ ಒಪ್ಪಂದದ ಉಪನಿಯಮ 6ರ ಅನುಷ್ಠಾನಕ್ಕೆ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಮಿತಿಯ ಬಿಜೆಪಿ ಸದಸ್ಯರು ಶಿಫಾರಸನ್ನೂ ಸಲ್ಲಿಸಿದ್ದಾರೆ. ಈ ಉಪನಿಯಮದಂತೆ ಕೇಂದ್ರವು ರಾಜ್ಯದ ಮೂಲನಿವಾಸಿ ಸಮುದಾಯಗಳ ಸಾಂಸ್ಕೃತಿಕ,ಸಾಮಾಜಿಕ ಮತ್ತು ಭಾಷಾ ಅನನ್ಯತೆ ಹಾಗೂ ಪರಂಪರೆಗಳನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಸಾಂವಿಧಾನಿಕ,ಶಾಸಕಾಂಗ ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ಉಪನಿಯಮವನ್ನು ಜಾರಿಗೊಳಿಸಲು ಕೇಂದ್ರವು ಬುಧವಾರ ಇನ್ನೊಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.

ಜೆಪಿಸಿಯು ಬಿಜೆಪಿಯ 14,ಕಾಂಗ್ರೆಸ್‌ನ ನಾಲ್ವರು,ಟಿಎಂಸಿ ಮತ್ತು ಬಿಜೆಡಿಯ ತಲಾ ಇಬ್ಬರು ಮತ್ತು ಹಲವಾರು ಇತರ ಪ್ರಾದೇಶಿಕ ಪಕ್ಷಗಳ ತಲಾ ಓರ್ವರು ಸದಸ್ಯರನ್ನು ಒಳಗೊಂಡಿದೆ.

ವರದಿಯನ್ನು ಅಂಗೀಕರಿಸುವ ಸಮಿತಿಯ ನಿರ್ಧಾರವು ಸರ್ವಾನುಮತದ್ದಾಗಿರಲಿಲ್ಲ ಎಂದು ಬಿಜೆಪಿಯೇತರ ಸದಸ್ಯರು ಸುದ್ದಿಸಂಸ್ಥೆಗೆ ತಿಳಿಸಿದ್ದು,ಮೂವರು ಸದಸ್ಯರು ಸಮಿತಿಯ ಅಧ್ಯಕ್ಷ ಹಾಗೂ ಬಿಜೆಪಿ ನಾಯಕ ರಾಜೇಂದ್ರ ಅಗರವಾಲ್ ಅವರಿಗೆ ತಮ್ಮ ಅಸಮಾಧಾನವನ್ನು ಸೂಚಿಸಿ ಪತ್ರಗಳನ್ನು ಸಲ್ಲಿಸುವ ಸಾಧ್ಯತೆಗಳಿವೆ ಎಂದರು.

ಗುರುವಾರದ ಜೆಪಿಸಿ ಸಭೆಯಲ್ಲಿ ಅಗರವಾಲ್ ಮತ್ತು ಕಾಂಗ್ರೆಸ್ ಸಂಸದ ಭುವನೇಶ್ವರ ಕಲಿಟಾ ಅವರ ನಡುವೆ ವಾಗ್ಯುದ್ಧ ನಡೆದ ಬಳಿಕ ಕಲಿಟಾ ಸಭ್ಯಾಗ ಮಾಡಿದ್ದರು.

ಅಸ್ಸಾಂ ಒಪ್ಪಂದದ ಉಪನಿಯಮವೊಂದರಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುವ ಮೂಲಕ ಸರಕಾರವು ಚಾಣಾಕ್ಷತೆಯಿಂದ ಇನ್ನೊಂದು ಉಪನಿಯಮವನ್ನು ದುರ್ಬಲಗೊಳಿಸಿದೆ ಎಂದು ಬಳಿಕ ಸುದ್ದಿಗಾರರಿಗೆ ತಿಳಿಸಿದ ಕಲಿಟಾ,ಸಮಿತಿಯು ಪ್ರತಿಪಕ್ಷ ಸದಸ್ಯರ ಎಲ್ಲ ಸಲಹೆಗಳನ್ನು ತಿರಸ್ಕರಿಸಿತ್ತು ಎಂದರು.

ಜ.7ರಂದು ವರದಿಯನ್ನು ಸಂಸತ್ತಿಗೆ ಸಲ್ಲಿಸಲಾಗುವುದು ಎಂದು ಅಗರವಾಲ್ ಸುದ್ದಿಗಾರರಿಗೆ ತಿಳಿಸಿದರು.

ತನ್ಮಧ್ಯೆ ಮಸೂದೆಯ ವಿರುದ್ಧ ಎಲ್ಲ ಪ್ರತಿಪಕ್ಷಗಳು ಒಂದಾಗಬೇಕೆಂದು ಮಾಜಿ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರು ಹೇಳಿದರೆ,ಮಸೂದೆಯು ಸಂಸತ್ತಿನಲ್ಲಿ ಅಂಗೀಕಾರಗೊಂಡರೆ ತಾನು ಮೈತ್ರಿಕೂಟವನ್ನು ತೊರೆಯುವುದಾಗಿ ಬಿಜೆಪಿಯ ಮಿತ್ರಪಕ್ಷ ಅಸ್ಸಾಂ ಗಣ ಪರಿಷದ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News