ಲೋಕಸಭಾ ಚುನಾವಣೆಯ ಸ್ಥಾನಗಳ ಹಂಚಿಕೆ ಕುರಿತು ತೀರ್ಮಾನವಾಗಿಲ್ಲ: ದಿನೇಶ್‌ ಗುಂಡೂರಾವ್

Update: 2019-01-04 16:13 GMT

ಬೆಂಗಳೂರು, ಜ.4: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸ್ಥಾನಗಳ ಹಂಚಿಕೆ ಕುರಿತು ಇನ್ನೂ ಯಾವುದೇ ತೀರ್ಮಾನವಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ತಿಳಿಸಿದರು.

ಶುಕ್ರವಾರ ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಭಯ ಪಕ್ಷಗಳ ಮುಖಂಡರು ಕೂತು, ಚರ್ಚೆ ಮಾಡಿ, ಸ್ಥಾನಗಳ ಹಂಚಿಕೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. ಈ ವಿಚಾರವನ್ನು ಬಹಿರಂಗವಾಗಿ ಚರ್ಚೆ ಮಾಡುವ ಅಗತ್ಯವಿಲ್ಲ ಎಂದರು.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಅವರ ಪಕ್ಷದ ವೇದಿಕೆಯಲ್ಲಿ ಇಷ್ಟೇ ಸ್ಥಾನಗಳು ಬೇಕು ಎಂಬುದರ ಕುರಿತು ಚರ್ಚಿಸಿರಬಹುದು. ಕಾಂಗ್ರೆಸ್ ಹಾಗೂ ಜೆಡಿಎಸ್ ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಅನ್ನೋದಕ್ಕಿಂತ ನಮಗೆ ಗೆಲುವು ಮುಖ್ಯ ಎಂದು ದಿನೇಶ್‌ ಗುಂಡೂರಾವ್ ಹೇಳಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರ ನಮ್ಮ ಪಾಲಿಗೆ ಬರಬೇಕಿತ್ತು. ಆದರೆ, ಅವರು ಒಳ್ಳೆಯ ಅಭ್ಯರ್ಥಿ ಹೊಂದಿದ್ದರಿಂದ ನಾವು ಕ್ಷೇತ್ರ ಬಿಟ್ಟುಕೊಟ್ಟೆವು. ಕಾಂಗ್ರೆಸ್ ಎಲ್ಲಿಯೂ ಹಠ ಮಾಡುತ್ತಿಲ್ಲ. ಯಾರು ಎಲ್ಲಿ ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ ಎಂಬುದನ್ನು ನೋಡಿಕೊಂಡು ತೀರ್ಮಾನ ಮಾಡುತ್ತೇವೆಯೇ ಹೊರತು, ನಮಗೆ ಕೋಟಾ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲ ಎಂದು ಅವರು ಹೇಳಿದರು.

ನಮಗೆ ಫಲಿತಾಂಶ ಮುಖ್ಯವಾಗಬೇಕು. ಕೋಟಾ ವ್ಯವಸ್ಥೆಯಲ್ಲಿ ಇಷ್ಟೇ ಸ್ಥಾನಗಳು ಬೇಕು ಎಂದು ಜಗಳ ಮಾಡುವುದರಲ್ಲಿ ಅರ್ಥವಿಲ್ಲ. ನಮಗೆ ಪ್ರತಿಷ್ಠೆ ವಿಷಯವಲ್ಲ. ಇದ್ದಿದ್ದರೆ ಶಿವಮೊಗ್ಗ ಕ್ಷೇತ್ರವನ್ನು ಬಿಟ್ಟುಕೊಡುತ್ತಿರಲಿಲ್ಲ. ನಮಗೆ ಗೆಲ್ಲುವ ಅಭ್ಯರ್ಥಿಗಳು ಯಾರು, ಗೆಲ್ಲುವ ಕ್ಷೇತ್ರಗಳು ಯಾವುದು, ಯಾರಿಗೆ ಹೆಚ್ಚು ಅವಕಾಶಗಳಿವೆ. ಎಂಬುದನ್ನು ನೋಡಿಕೊಂಡು ನಾವು ಸ್ಥಾನಗಳನ್ನು ಹಂಚಿಕೆ ಮಾಡಿಕೊಳ್ಳುತ್ತೇವೆ ಎಂದು ದಿನೇಶ್‌ ಗುಂಡೂರಾವ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News