ಆ್ಯಂಬಿಡೆಂಟ್ ವಂಚನೆ ಪ್ರಕರಣ: ತ್ವರಿತವಾಗಿ ತನಿಖೆ ನಡೆಸಲು ಕೋರಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ

Update: 2019-01-04 16:54 GMT

ಬೆಂಗಳೂರು, ಜ.4: ಆ್ಯಂಬಿಡೆಂಟ್ ಕಂಪೆನಿಯ ವಂಚನೆ ಪ್ರಕರಣದ ತನಿಖೆಯನ್ನು ತ್ವರಿತವಾಗಿ ನಡೆಸಿ ಯಾವುದೇ ವಿಳಂಬ ಮಾಡದೆ ಅಂತಿಮ ವರದಿ ಸಲ್ಲಿಸಲು ಹಾಗೂ ಆರೋಪಿಗಳಿಂದ ಜಪ್ತಿ ಮಾಡಿಕೊಳ್ಳಲಾದ ಹಣವನ್ನು ಸಂಬಂಧಪಟ್ಟ ಠೇವಣಿದಾರರಿಗೆ ಹಿಂದಿರುಗಿಸಲು ರಾಜ್ಯ ಸರಕಾರ ಹಾಗೂ ಸಿಸಿಬಿ ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಈ ಕುರಿತಂತೆ ನಗರದ ವಿನೋಬಾನಗರ ನಿವಾಸಿ ಶಫಿವುಲ್ಲಾ ಖಾನ್ ಸೇರಿದಂತೆ ಆ್ಯಂಬಿಡೆಂಟ್ ಕಂಪೆನಿಯಿಂದ ವಂಚನೆಗೊಳಗಾದ 25 ಮಂದಿ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಅದು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಅರ್ಜಿದಾರರ ಪರ ವಕೀಲ ಸೈಯದ್ ಉಮರ್ ವಕಾಲತ್ತು ಹಾಕಿದ್ದಾರೆ. ಆ್ಯಂಬಿಡೆಂಟ್ ಮಾರ್ಕೆಟಿಂಗ್ ಪ್ರೈ. ಲಿಮಿಟೆಡ್ ಹಾಗೂ ಅದರ ಪ್ರವರ್ತಕರು, ಏಜೆಂಟರು, ಸಂಚಾಲಕರು ಮತ್ತು ಕಂಪೆನಿಗೆ ಸಂಬಂಧಿಸಿದ ಇತರರಿಂದ ಸುಮಾರು 30 ಸಾವಿರ ಕುಟುಂಬಗಳು ಮೋಸ ಹೋಗಿವೆ. ಅಧಿಕೃತ ನೋಂದಣಿಯಾಗದ ಆ್ಯಂಬಿಡೆಂಟ್ ಕಂಪೆನಿ ತನ್ನ ಸ್ವಂತ ಲಾಭಕ್ಕಾಗಿ ಕಾನೂನುಬಾಹಿರವಾಗಿ ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡಿದೆ. ಪ್ರಕರಣದ ತನಿಖೆ ವಿಳಂಬವಾಗುವಂತೆ ಮಾಡಲು ಉದ್ದೇಶಪೂರ್ವಕವಾಗಿ ಕಂಪೆನಿಯು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ ಎಂದು ಪಿಐಎಲ್‌ನಲ್ಲಿ ದೂರಲಾಗಿದೆ.

ಹೀಗಾಗಿ, ಯಾವುದೇ ಒತ್ತಡ ಅಥವಾ ಪ್ರಭಾವಕ್ಕೊಳಗಾಗದೆ ಪ್ರಕರಣದ ತನಿಖೆಯನ್ನು ತ್ವರಿತವಾಗಿ ಮುಗಿಸಿ ಅಂತಿಮ ವರದಿ ಸಲ್ಲಿಸುವಂತೆ ರಾಜ್ಯ ಸರಕಾರದ ಗೃಹ ಇಲಾಖೆಗೆ ನಿರ್ದೇಶನ ನೀಡಬೇಕು. ಅದೇ ರೀತಿ ಆರೋಪಿಗಳಿಂದ ಜಪ್ತಿ ಮಾಡಿಕೊಳ್ಳಲಾದ ಹಣವನ್ನು ಸಂಬಂಧಪಟ್ಟ ಠೇವಣಿದಾರರಿಗೆ ಹಿಂದಿರುಗಿಸುವಂತೆ ಸಿಸಿಬಿ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News