ಬಾಕಿ ತೆರಿಗೆ ಸಂಗ್ರಹಿಸಲು ಮೂರು ತಿಂಗಳ ಗಡುವು: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್
ಬೆಂಗಳೂರು, ಜ. 4: ಈಗಾಗಲೇ ಪ್ರಾರಂಭಿಸಿರುವ ವೈಟ್‌ಟಾಪಿಂಗ್ ಕಾಮಗಾರಿಯನ್ನು ಮೇ ಅಂತ್ಯದೊಳಗೆ ಪೂರ್ಣಗೊಳಿಸಿ, ಹೊಸ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶುಕ್ರವಾರ ಬಿಬಿಎಂಪಿ ಅಧಿಕಾರಿಗಳೊಂದಿಗೆ ಬಿಬಿಎಂಪಿ ನಗರೋತ್ಥಾನ, ಎಸ್‌ಐಪಿ, ಹಣಕಾಸು ಮತ್ತು ಕಂದಾಯ ವಿಭಾಗದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, 2ವರ್ಷಗಳಿಂದ ವೈಟ್‌ಟಾಪಿಂಗ್ ನಡೆಯುತ್ತಿದ್ದು, ಬಹುತೇಕ ಕಡೆ ಪೂರ್ಣಗೊಂಡಿಲ್ಲ. ಈಗಾಗಲೇ ಕೈಗೊಂಡಿರುವ ರಸ್ತೆಗಳ ವೈಟ್‌ಟಾಪಿಂಗ್ ಮೇ ಒಳಗೆ ಪೂರ್ಣಗೊಳಿಸಬೇಕು ಎಂದರು.
3 ವರ್ಷದಲ್ಲಿ 9,978 ಕೋಟಿ ರೂ.ಕಾಮಗಾರಿಗೆ ಕಾರ್ಯಾದೇಶ ನೀಡಿದ್ದು, ಈ ಯೋಜನೆಗಳ ಕಾಮಗಾರಿ ಪ್ರಾರಂಭಗೊಂಡಿವೆ. ವೈಟ್‌ಟಾಪಿಂಗ್, ರಾಜಕಾಲುವೆ, ಕೆರೆ, ತೋಟಗಾರಿಕೆ, ರಸ್ತೆ ದುರಸ್ತಿ, ರಸ್ತೆ ಅಗಲೀಕರಣ, ತ್ಯಾಜ್ಯ ನಿರ್ವಹಣೆ, ಪಾದಚಾರಿ ಮಾರ್ಗ ಸೇರಿದಂತೆ ಇತರೆ ಕೆಲಸಗಳು ಸೇರಿವೆ. ಬಹುತೇಕ ಕಾಮಗಾರಿಗಳು ಶೇ.60ರಷ್ಟು ಪೂರ್ಣಗೊಂಡಿವೆ. ಕೆಲವೆಡೆ ಭೂಸ್ವಾಧೀನದ ಸಮಸ್ಯೆಯಿಂದ ವಿಳಂಬವಾಗುತ್ತಿದೆ ಎಂದು ಹೇಳಿದರು.
ತ್ಯಾಜ್ಯ ವಿಲೇವಾರಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಟೆಂಡರ್‌ದಾರರಿಗೆ ಬಾಕಿ ಹಣವನ್ನು ಪಾವತಿಸಿ, ತ್ಯಾಜ್ಯ ವಿಲೇವಾರಿಯಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣ ಕಾರ್ಯವನ್ನು ಇದೇ ವರ್ಷ ಪೂರ್ಣಗೊಳಿಸಬೇಕು. ಮಳೆಗಾಲದ ಸಂದರ್ಭದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗದಂತೆ ಹಾಗೂ ರಾಜಕಾಲುವೆಗಳಲ್ಲಿ ಮಳೆ ಪ್ರವಾಹವಾಗುವ ಸ್ಥಳಗಳನ್ನು ಗುರುತಿಸಿ, ಮುಂದಿನ ಮಳೆಗಾಲದೊಳಗಾಗಿ ಈ ಸಮಸ್ಯೆ ಪರಿಹರಿಸಲು ಸೂಚನೆ ನೀಡಲಾಗಿದೆ ಎಂದರು.
ತೆರಿಗೆ ಸಂಗ್ರಹದಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಒಟ್ಟು 19.71ಲಕ್ಷ ಜನ ಈ ವರ್ಷದ ತೆರಿಗೆ ಪಾವತಿಸಿದ್ದಾರೆ. ತೆರಿಗೆ ಪಾವತಿಸದ 59,861 ಜನರಿಗೆ ನೋಟಿಸ್ ನೀಡಿದ್ದು, ಇದರಿಂದ 113 ಕೋಟಿ ರೂ.ಬಾಕಿ ತೆರಿಗೆ ಸಂಗ್ರಹವಾಗಿದೆ. ಇನ್ನು, 921 ಜನರಿಗೆ ವಾರೆಂಟ್ ನೀಡಿದ್ದರಿಂದ 36ಕೋಟಿ ರೂ.ಸಂಗ್ರಹವಾಗಿದೆ. ಬಿಬಿಎಂಪಿ ತೆರಿಗೆ ಪಾವತಿ ವಿಚಾರದಲ್ಲಿ ಕಠಿಣ ಕ್ರಮ ತೆಗೆದುಕೊಂಡಿರುವುದರಿಂದ ಬಾಕಿ ತೆರಿಗೆ ಸಂಗ್ರಹವಾಗುತ್ತಿದೆ. ತೆರಿಗೆ ಕಟ್ಟದವರಿಗೆ ಮುಲಾಜಿಲ್ಲದೇ ನೋಟಿಸ್ ನೀಡಿ, ಅದಕ್ಕೂ ಜಗ್ಗದಿದ್ದರೆ ಅವರ ವಿರುದ್ಧ ವಾರೆಂಟ್ ನೀಡುವ ಮೂಲಕ ಕ್ರಮ ತೆಗೆದುಕೊಳ್ಳಿ ಎಂದು ಅವರು ಸೂಚಿಸಿದರು.
ಪ್ರತಿ ವಲಯದಲ್ಲಿ ತೆರಿಗೆ ಪಾವತಿಸದ 100 ಜನರ ಪಟ್ಟಿಯನ್ನು ಮಾಧ್ಯಮದ ಮೂಲಕ ಬಹಿರಂಗ ಪಡಿಸಿ, ಅವರಿಗೆ ಯಾವುದೇ ರೀತಿಯ ವಿನಾಯಿತಿ ಕೊಡಬೇಕಿಲ್ಲ. ಜೊತೆಗೆ, ತೆರಿಗೆ ಕಟ್ಟದ ಕೇಂದ್ರದ ಕಟ್ಟಡಗಳ ವಿರುದ್ಧವೂ ನೋಟಿಸ್ ನೀಡಿ, ಇಲ್ಲವೆ ಮಾಧ್ಯಮದಲ್ಲಿ ಈ ಪಟ್ಟಿ ಬಿತ್ತರಗೊಳಿಸಿ ಎಂದು ಅವರು ನಿರ್ದೇಶನ ನೀಡಿದರು.
ಜನಾಭಿಪ್ರಾಯ ಪಡೆದು ಸ್ಟೀಲ್‌ಬ್ರಿಡ್ಜ್ ಯೋಜನೆ
ಸ್ಟೀಲ್‌ಬ್ರಿಡ್ಜ್ ಯೋಜನೆಯನ್ನು ಸಾರ್ವಜನಿಕರ ಅಭಿಪ್ರಾಯವನ್ನು ಆಧರಿಸಿ ಕೈಗೆತ್ತಿಕೊಳ್ಳಲಾಗುವುದು. ಈ ಹಿಂದೆ ಮಾಡಿದ್ದ ಯೋಜನೆಯ ಅಂದಾಜು ವೆಚ್ಚ ಹಾಗೂ ಡಿಪಿಆರ್ ಅನ್ನು ಸಾರ್ವಜನಿಕರ ಮುಂದೆ ಚರ್ಚೆಗೆ ಇಡಲಾಗುವುದು. ಅವರ ಸಲಹೆ, ಸೂಚನೆ ಮೇರೆಗೆ ಈ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಈ ಯೋಜನೆ ವ್ಯಾಪ್ತಿಗೆ 812ಮರಗಳು ಬರಲಿದ್ದು, ಕೆಲವನ್ನು ಸ್ಥಳಾಂತರ ಮಾಡಲಾಗುವುದು. ಮತ್ತೊಂದೆಡೆ, 60 ಸಾವಿರ ಸಸಿಗಳನ್ನು ನೆಡಲಾಗಿದೆ. ಸ್ಟೀಲ್‌ಬ್ರಿಡ್ಜ್ ಯೋಜನೆ ಹೊರತಾಗಿಯು ಬಿಬಿಎಂಪಿಯಿಂದ 1ಕೋಟಿ ಸಸಿ ನೆಡಲಾಗುತ್ತಿದೆ. ಮಳೆಗಾಲ ಸಮೀಪಿಸುತ್ತಿದ್ದಂತೆ ಸಸಿಗಳನ್ನು ನೆಡುವ ಕಾರ್ಯ ಆರಂಭವಾಗಲಿದೆ.
-ಡಾ.ಜಿ.ಪರಮೇಶ್ವರ್ ಉಪ ಮುಖ್ಯಮಂತ್ರಿ