ಬೆಂಗಳೂರು: ವೈದ್ಯಕೀಯ ಶುಲ್ಕ ಏರಿಕೆ ಖಂಡಿಸಿ ಎಐಡಿಎಸ್‌ಓ ಪ್ರತಿಭಟನೆ
ಬೆಂಗಳೂರು, ಜ. 4: ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾವನ್ನು ಮೀಸಲಿಡಬೇಕು ಹಾಗೂ ಕಾಲೇಜುಗಳ ಶುಲ್ಕವನ್ನು ಶೇ.300ಕ್ಕೆ ಏರಿಸಬೇಕೆಂಬ ರಾಜ್ಯ ಸರಕಾರದ ನಿರ್ಧಾರವನ್ನು ಖಂಡಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್(ಎಐಡಿಎಸ್‌ಓ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶುಕ್ರವಾರ ಪುರಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ರಾಜ್ಯ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನೇತೃತ್ವ ವಹಿಸಿದ್ದ ಡಾ.ಸುಧಾ ಕಾಮತ್ ಮಾತನಾಡಿ, ವೈದ್ಯಕೀಯ ಶುಲ್ಕವನ್ನು ಯು.ಜಿಗೆ ರೂ.17 ಸಾವಿರ ರೂ.ನಿಂದ 50 ಸಾವಿರ ರೂ.ಗಳಿಗೆ ಮತ್ತು ಪಿ.ಜಿಗೆ 50 ಸಾವಿರ ರೂ.ಗಳಿಂದ 3 ಲಕ್ಷ ರೂ.ಗಳಿಗೆ ಹೆಚ್ಚಿಸುವಂತೆ ಸರಕಾರವು ಪ್ರಸ್ತಾವನೆಯನ್ನು ಮಂಡಿಸಿದ್ದು, ಇದರಿಂದ ವೈದ್ಯಕೀಯ ಶಿಕ್ಷಣ ಪಡೆದುಕೊಳ್ಳುವುದೇ ಅಸಾಧ್ಯವಾಗಲಿದೆ ಎಂದರು.
ಅಲ್ಲದೆ, ಶೇ.10ರಷ್ಟು ವೈದ್ಯಕೀಯ ಸೀಟುಗಳನ್ನು ಎನ್‌ಆರ್‌ಐ ಕೋಟಾದಡಿ ತರುವುದರಿಂದ, ವೈದ್ಯರಾಗಬೇಕೆಂಬ ಕನಸನ್ನು ಹೊತ್ತುಬರುವ ಕೆಳಮಧ್ಯಮ ವರ್ಗದ ವಿದ್ಯಾರ್ಥಿಗಳು ಇನ್ನು ಮುಂದೆ ವೈದ್ಯಕೀಯ ಶಿಕ್ಷಣವನ್ನು ಪಡೆದುಕೊಳ್ಳಬೇಕೆಂಬ ಕನಸನ್ನು ಕಾಣಲಾರದಂತಾಗುತ್ತದೆ ಎಂದು ಅವರು ಹೇಳಿದರು.
ಲಕ್ಷಾಂತರ ರೂ.ಗಳನ್ನು ವೈದ್ಯಕೀಯ ಶಿಕ್ಷಣವನ್ನು ಪಡೆಯಲು ವ್ಯಯಿಸುವ ಕಾರಣ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವವನ್ನು ನಿರ್ಮಿಸಬೇಕಾಗಿದ್ದ ವೈದ್ಯಕೀಯ ಶಿಕ್ಷಣವು ಇಂದು ವೈದ್ಯರಲ್ಲಿ ವ್ಯಾಪಾರದ ಮನೋಭಾವವನ್ನು ನಿರ್ಮಿಸುತ್ತಿರುವುದು ಸರಿಯಲ್ಲ. ಕೂಡಲೇ ಈ ತೀರ್ಮಾನದಿಂದ ರಾಜ್ಯ ಸರಕಾರ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಐಡಿಎಸ್‌ಓ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಅಭಯಾ ದಿವಾಕರ್, ಬೆಂಗಳೂರು ನಗರ ಜಿಲ್ಲಾ ಕಾರ್ಯದರ್ಶಿ ರೋಷನ್ ಸೇರಿದಂತೆ ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.