ಪಿಂಚಣಿ ಹಕ್ಕನ್ನು ಸರಕಾರ ಕಸಿದುಕೊಳ್ಳಬಾರದು: ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ

Update: 2019-01-04 17:25 GMT

ಬೆಂಗಳೂರು, ಜ.4: ಪಿಂಚಣಿ ಎಂಬುವುದು ನಮ್ಮ ಹಕ್ಕುಗಳಲ್ಲಿ ಒಂದಾಗಿದ್ದು, ಇದನ್ನು ಸರಕಾರ ಕಸಿದುಕೊಳ್ಳಲು ಯತ್ನಿಸಬಾರದು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಇಂದಿಲ್ಲಿ ತಿಳಿಸಿದರು.

ಶುಕ್ರವಾರ ನಗರದ ಗಾಂಧಿ ಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘ ಏರ್ಪಡಿಸಿದ್ದ, ‘2006ರಿಂದ ಸರಕಾರಿ-ಅರೆ ಸರಕಾರಿ ಸೇವೆಗೆ ಸೇರಿ ಮರಣ ಹೊಂದಿರುವ ಎನ್‌ಪಿಎಸ್ ನೌಕರರ ಅವಲಂಬಿತರ ಹಾಗೂ ನಿವೃತ್ತ ಎನ್‌ಪಿಎಸ್ ನೌಕರರ’ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರವೇ, ನೌಕರರ ಪಿಂಚಣಿ ಎಂಬುವುದು ಹಕ್ಕು ಇದ್ದಂತೆ. ಆದರೆ, ಯಾವುದೇ ಸರಕಾರ ಈ ಹಕ್ಕುಗಳನ್ನು ಕಸಿದುಕೊಳ್ಳಲು ಯತ್ನಿಸಬಾರದು. ಇದಕ್ಕೆ ನನ್ನ ವಿರೋಧ ಇದೆ ಎಂದು ಅವರು ನುಡಿದರು.

ಸರಕಾರವು ಸರಕಾರಿ ನೌಕರರಲ್ಲಿ ಎರಡು ಗುಂಪುಗಳನ್ನಾಗಿ ಮಾಡಿದ್ದಲ್ಲದೆ, ಒಂದು ಗುಂಪಿಗೆ ಅನ್ಯಾಯ ಮಾಡಿದೆ. ಆದರೆ, ಈ ಅನ್ಯಾಯ ಸರಿಪಡಿಸಲು ಹಾಗೂ ಎನ್‌ಪಿಎಸ್ ನೌಕರರಿಗೆ ನ್ಯಾಯ ಒದಗಿಸುವ ಹೋರಾಟದಲ್ಲಿ ಭಾಗಿಯಾಗುವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಶಾಂತಾರಾಮ ಮಾತನಾಡಿ, ದೆಹಲಿ ರಾಜ್ಯ ವ್ಯಾಪ್ತಿಯ ಸರಕಾರಿ ನೌಕರರಿಗೆ, ಎನ್‌ಪಿಎಸ್ ರದ್ದುಗೊಳಿಸಲು ಅಲ್ಲಿನ ರಾಜ್ಯ ಸರಕಾರ ಕ್ರಮಕೈಗೊಂಡಿದೆ. ಇದೇ ಮಾದರಿಯಲ್ಲಿ ಕರ್ನಾಟಕ ಸರಕಾರವು, ಎನ್‌ಪಿಎಸ್ ರದ್ದುಗೊಳಿಸಿ, ನಿಶ್ಚಿತ ಪಿಂಚಣಿ ಯೋಜನೆಯನ್ನು ಮರು ಸ್ಥಾಪಿಸುವಂತೆ ಆಗ್ರಹಿಸಿದರು.

ವಿಚಾರ ಸಂಕಿರಣದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಾಗನಗೌಡ, ಉಪಾಧ್ಯಕ್ಷರಾದ ಸಿದ್ದಪ್ಪ ಸಂಗಣ್ಣನವರ, ಚಂದ್ರಕಾಂತ ತಳವಾರ ಸೇರಿದಂತೆ ಪ್ರಮುಖರಿದ್ದರು.

ಬೇಡಿಕೆಗಳೇನು?

* ಸರಕಾರ ನಿವೃತ್ತಿ ಮತ್ತು ಮರಣ ಉಪಧನವನ್ನು 2018ರಿಂದ ಜಾರಿಗೊಳಿಸಿದ್ದು, ಇದು 2006ರಿಂದ ಅನ್ವಯವಾಗುವಂತೆ ಜಾರಿಗೆ ತನ್ನಿ

* ಎನ್‌ಪಿಎಸ್ ರದ್ದು ಮಾಡಿ ಹಳೇ ಪಿಂಚಣಿ ಯೋಜನೆ ಜಾರಿಗೆ ತನ್ನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News