ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ: ಕೇರಳ ಸರಕಾರದ ವಿರುದ್ಧ ಬಿಜೆಪಿ ಸಂಸದರಿಂದ ದಿಲ್ಲಿಯಲ್ಲಿ ಧರಣಿ

Update: 2019-01-04 17:27 GMT

ಹೊಸದಿಲ್ಲಿ, ಜ. 4: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ಕರ್ನಾಟಕದ ಬಿಜೆಪಿ ಸಂಸದರು ದಿಲ್ಲಿಯ ಸಂಸತ್ ಭನವನದ ಮಹಾತ್ಮ ಗಾಂಧಿ ಪುತ್ಥಳಿ ಬಳಿ ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಿ, ಕೇರಳ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಧರಣಿ ಸತ್ಯಾಗ್ರಹದಲ್ಲಿ ಸಂಸದರಾದ ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್, ರಾಜೀವ್ ಚಂದ್ರಶೇಖರ್, ಕರಡಿ ಸಂಗಣ್ಣ, ವಿ.ಮುರಳೀಧರನ್, ನಳಿನ್‌ ಕುಮಾರ್ ಕಟೀಲು, ಭಗವಂತ್ ಖೂಬಾ, ಪಿ.ಸಿ.ಗದ್ದೀಗೌಡರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ಬಳಿಕ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಸುಪ್ರೀಂಕೋರ್ಟ್ ಆದೇಶ ನೆಪದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಸಿಪಿಎಂ ಸರಕಾರ, ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುತ್ತಿದೆ. ಮಹಿಳೆಯರಿಗೆ ದೇಗುಲಕ್ಕೆ ಪ್ರವೇಶ ಕಲ್ಪಿಸುವ ಮೂಲಕ ಅಯ್ಯಪ್ಪ ಭಕ್ತರ ಮೇಲೆ ದೌರ್ಜನ್ಯ ನಡೆಸಿದೆ ಎಂದು ದೂರಿದರು.

ನೂರಾರು ವರ್ಷಗಳ ಭಕ್ತರ ನಂಬಿಕೆಯನ್ನು ಮಣ್ಣುಪಾಲು ಮಾಡಿದ್ದು, ಕೇರಳ ಸರಕಾರದ ಕ್ರಮ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ನಮ್ಮ ಕಾರ್ಯಕರ್ತರ ಮೇಲೆ ಸಿಪಿಎಂ ದಬ್ಬಾಳಿಕೆ ನಡೆಸುತ್ತಿದೆ. ಶಬರಿಮಲೆ ವಿಚಾರದಲ್ಲಿ ರಾಜಕೀಯ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ನೀಡಬೇಕು. ಶಬರಿಮಲೆ ರಕ್ಷಿಸಬೇಕು. ಧಾರ್ಮಿಕ ನಂಬಿಕೆಗಳ ಜತೆ ಆಟ ಆಡುವುದನ್ನು ನಿಲ್ಲಿಸಬೇಕು. ಸಿಪಿಎಂ, ಪಿಣರಾಯಿ ವಿಜಯನ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ, ಸಂಸದರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News