ಹಿಂದೂ ಧರ್ಮದ ಕಂದಾಚಾರ ವಿರೋಧಿಸಿ ಹುಟ್ಟಿದ್ದೇ ಲಿಂಗಾಯತ ಧರ್ಮ: ಬಸವಕುಮಾರ ಸ್ವಾಮೀಜಿ
ಬೆಂಗಳೂರು, ಜ.4: ಜೈನ, ಬೌದ್ಧ, ಕ್ರೈಸ್ತ ಹಾಗೂ ಇಸ್ಲಾಂ ಧರ್ಮದಂತೆ ಲಿಂಗಾಯತ ಕೂಡ ಒಂದು ಧರ್ಮ. ಅದು ಹಿಂದೂಗಳಲ್ಲಿರುವ ಒಂದು ಜಾತಿಯಲ್ಲ. ಹಿಂದೂ ಧರ್ಮದಲ್ಲಿನ ಕಂದಾಚಾರಗಳನ್ನು ವಿರೋಧಿಸಿ ಹುಟ್ಟಿಕೊಂಡ ಒಂದು ಧರ್ಮವಾಗಿದೆ ಎಂದು ಲಿಂಗಾಯತ ಧರ್ಮ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಬಸವಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ಸಮಗ್ರವಾದ ವಿಸ್ತೃತ ವರದಿ ನೀಡಿದೆ. ಅದನ್ನು ರಾಜ್ಯ ಸರಕಾರ ಪರಿಶೀಲಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ. ಕೇಂದ್ರ ಸರಕಾರ ಆದಷ್ಟು ಶೀಘ್ರವಾಗಿ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು. ಇಲ್ಲದಿದ್ದಲ್ಲಿ ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತ ಸಮುದಾಯವರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ವೀರಶೈವ ಲಿಂಗಾಯತ ಧರ್ಮ ಹಿಂದೂಗಳ ಒಂದು ಭಾಗ ಎಂದು ತಿಳಿಸಿದ್ದರಿಂದ 2013ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯು ವೀರಶೈವ ಲಿಂಗಾಯತ ಧರ್ಮ ಮಾನ್ಯತೆಗಾಗಿ ಕೇಂದ್ರ ಸರಕಾರಕ್ಕೆ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಲಾಗಿತ್ತು. ಆದರೆ ನಾಗಮೋಹನ್ ದಾಸ್ ಸಮಿತಿ ನೀಡಿರುವ ವರದಿಯಲ್ಲಿ ಲಿಂಗಾಯತ (ಬಸವಣ್ಣ ಒಪ್ಪಿತ) ಎಂದು ನಮೂದಿಸಲಾಗಿದೆ ಎಂದು ತಿಳಿಸಿದರು.
ಜೊತೆಗೆ ಇದು ಹಿಂದು ಧರ್ಮದ ಭಾಗವಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಸ್ವತಂತ್ರ ಧರ್ಮದ ಕುರಿತು ಸಂವಿಧಾನದಲ್ಲಿರುವ 17 ಗುಣಲಕ್ಷಣಗಳನ್ನು ಹೊಂದಿರುವ ಅಧಿಕೃತ ದಾಖಲೆಗಳನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಧರ್ಮ ವಿರೋಧಿ ಕಾರ್ಯ ಮಾಡುತ್ತಿದ್ದಾರೆ. ಅವರು ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಲಿಂಗಾಯತ ಎಂದು ನಮೂದಿಸುತ್ತಾರೆ. ಅಲ್ಲದೆ ಅವರ ವಾಸದ ಪ್ರಮಾಣ ಪತ್ರದಲ್ಲೂ ಲಿಂಗಾಯತ ಎಂದಿದೆ. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ದೊರೆತರೆ 99 ಒಳಪಂಗಡಗಳಿಗೆ ಸರಕಾರಿ ಸೌಲಭ್ಯಗಳು ದೊರೆಯಲಿವೆ ಎಂದು ಮಾಹಿತಿ ನೀಡಿದರು.