ಈ ಎಲ್ಲಾ ಕಾರಣಗಳಿಂದ ಒಬ್ಬ ವ್ಯಕ್ತಿ ಪ್ರಾಸ್ಟೇಟ್ ಕ್ಯಾನ್ಸರ್‌ಗೆ ತುತ್ತಾಗಬಹುದು…

Update: 2019-01-04 18:25 GMT

ಪ್ರಾಸ್ಟೇಟ್ ಕ್ಯಾನ್ಸರ್ ಹೆಚ್ಚಾಗಿ ವಯಸ್ಸಾದವರನ್ನು ಕಾಡುವ ರೋಗವಾಗಿದೆ. 50 ವರ್ಷ ದಾಟಿದವರಲ್ಲಿಯೂ ಈ ರೋಗ ಕಾಣಿಸಿಕೊಳ್ಳಬಹುದಾದರೂ 65 ವರ್ಷಕ್ಕಿಂತ ಹೆಚ್ಚಿನ ಪ್ರಾಯದ ಪುರುಷರಲ್ಲಿ ಸಾಮಾನ್ಯವಾಗಿದೆ. ಕಳೆದ ಕೆಲವು ದಶಕಗಳಿಂದ ಪ್ರಾಸ್ಟೇಟ್ ಕ್ಯಾನ್ಸರ್ ವಿಶ್ವಾದ್ಯಂತ ಪ್ರಮುಖ ಕಳವಳಕಾರಿ ಆರೋಗ್ಯ ಸಮಸ್ಯೆಯಾಗಿದೆ.

ಭಾರತದಲ್ಲಿಯೂ ಕಳೆದ 20 ವರ್ಷಗಳಿಂದ ಪ್ರಾಸ್ಟೇಟ್ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಲೇ ಇವೆ. 2020ರ ವೇಳೆಗೆ ದೇಶದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಬಳಲುತ್ತಿರುವವರ ಸಂಖ್ಯೆ ಈಗ ಇರುವುದರ ದುಪ್ಪಟ್ಟಾಗಲಿದೆ ಎಂದು ಅಂದಾಜಿಸಲಾಗಿದೆ.

ಪ್ರಾಸ್ಟೇಟ್ ಪುರುಷರ ಕಿಬ್ಬೊಟ್ಟೆಯಲ್ಲಿರುವ ಸಣ್ಣ ಗ್ರಂಥಿಯಾಗಿದೆ. ಟೆಸ್ಟೊಸ್ಟೆರೋನ್ ಹಾರ್ಮೋನ್‌ನಿಂದ ನಿಯಂತ್ರಿಸಲ್ಪಡುವ ಈ ಗ್ರಂಥಿಯು ವೀರ್ಯದ ಪ್ರಮುಖ ಭಾಗವಾಗಿರುವ ಪ್ರಾಸ್ಟೇಟ್ ದ್ರವವನ್ನು ಉತ್ಪಾದಿಸುತ್ತದೆ. ಪ್ರಾಸ್ಟೇಟ್ ಕೋಶಗಳಲ್ಲಿ ಅಸಹಜ ಬೆಳವಣಿಗೆಯಾದಾಗ ಅದು ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಈ ಕ್ಯಾನ್ಸರ್ ದೇಹದ ಇತರ ಭಾಗಗಳಿಗೂ ಹರಡಬಲ್ಲದು.

ಪ್ರಾಸ್ಟೇಟ್ ಕ್ಯಾನ್ಸರ್‌ಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಅದು ಕುಟುಂಬದಲ್ಲಿ ಕ್ಯಾನ್ಸರ್‌ನ ಇತಿಹಾಸ ಅಥವಾ ಆಹಾರಕ್ರಮದಂತಹ ಹಲವಾರು ಅಂಶಗಳಿಗೆ ಸಂಬಂಧಿಸಿರಬಹುದು. ವಯಸ್ಸು ಈ ಕ್ಯಾನ್ಸರ್‌ಗೆ ಕಾರಣವಾಗುವ ಪ್ರಮುಖ ಅಪಾಯವಾಗಿದೆ. ಶೇ.85ರಷ್ಟು ಪ್ರಾಸ್ಟೇಟ್ ಕ್ಯಾನ್ಸರ್ ರೋಗಿಗಳು 65ವರ್ಷಕ್ಕೂ ಹೆಚ್ಚಿನ ಪ್ರಾಯದವರಾಗಿರುತ್ತಾರೆ. ಪ್ರಾಸ್ಟೇಟ್ ಕ್ಯಾನ್ಸರ್‌ನ್ನುಂಟು ಮಾಡಬಲ್ಲ ಕೆಲವು ಅಪಾಯದ ಅಂಶಗಳು ಇಲ್ಲಿವೆ....

► ಆಹಾರಕ್ರಮ

ಕೊಬ್ಬು ಅಧಿಕವಾಗಿರುವ ಆಹಾರವು ಪ್ರಾಸ್ಟೇಟ್ ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದು ಕೆಲವು ತಜ್ಞರ ಅಭಿಪ್ರಾಯವಾಗಿದೆ. ಕೆಂಪು ಮಾಂಸದಂತಹ ಹೆಚ್ಚಿನ ಅನಾರೋಗ್ಯಕಾರಿ ಕೊಬ್ಬು ಇರುವ ಮತ್ತು ಅತ್ಯಂತ ಹೆಚ್ಚಿನ ಉಷ್ಣತೆಯಲ್ಲಿ ಬೇಯಿಸಲಾಗುವ ಆಹಾರಗಳನ್ನು ಸೇವಿಸುವವರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಉಂಟಾಗುವ ಅಪಾಯ ಹೆಚ್ಚಿರುತ್ತದೆ. ಇಂತಹ ಆಹಾರಗಳು ಕ್ಯಾನ್ಸರ್‌ಕಾರಕ ಸಂಯುಕ್ತಗಳನ್ನು ಉತ್ಪಾದಿಸುವುದು ಇದಕ್ಕೆ ಕಾರಣವಾಗಿದೆ. ಅಲ್ಲದೆ ಅತಿಯಾದ ಕೊಬ್ಬು ಟೆಸ್ಟೊಸ್ಟೆರೋನ್ ಉತ್ಪಾದನೆಯನ್ನು ಪ್ರಚೋದಿಸುತ್ತದೆ ಮತ್ತು ಇದು ಪ್ರಾಸ್ಟೇಟ್ ಗ್ರಂಥಿಯ ಮೇಲೆ ಪರಿಣಾಮವನ್ನುಂಟು ಬೀರಿ ಅದರ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅತಿಯಾದ ಟೆಸ್ಟೊಸ್ಟೆರೋನ್ ಪ್ರಾಸ್ಟೇಟ್ ಕೋಶಗಳ ಅಸಹಜ ವಿಭಜನೆಗೆ ಕಾರಣವಾಗುತ್ತದೆ ಮತ್ತು ತನ್ಮೂಲಕ ಕ್ಯಾನ್ಸರ್‌ನ್ನುಂಟು ಮಾಡುತ್ತದೆ.

► ಅತಿಯಾದ ದೇಹತೂಕ

24.9ಕ್ಕಿಂತ ಹೆಚ್ಚಿನ ಬಾಡಿ ಮಾಸ್ ಇಂಡೆಕ್ಸ್(ಬಿಎಂಐ) ಹೊಂದಿರುವವರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್‌ ನ ಅಪಾಯವು 25ಕ್ಕಿಂತ ಕಡಿಮೆ ಬಿಎಂಐ ಹೊಂದಿರುವವರಿಗೆ ಹೋಲಿಸಿದರೆ ಎರಡು ಪಟ್ಟು ಇರುತ್ತದೆ. ಅಲ್ಲದೆ ಅತಿಯಾದ ತೂಕ ಮತ್ತು ಬೊಜ್ಜು ಹೊಂದಿರುವವರಲ್ಲಿ ಚಯಾಯಪಚಯ ಲಕ್ಷಣ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ನಡುವಿನ ನಂಟು ಬಲವಾಗಿರುತ್ತದೆ.

► ಕೀಟನಾಶಕಗಳು

 ಕೀಟನಾಶಕಗಳು ಕ್ಯಾನ್ಸರ್ ಕಾರಕ ಸಂಯುಕ್ತಗಳನ್ನು ಹೊಂದಿದ್ದು, ಇವು ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸುತ್ತವೆ. ಹೀಗಾಗಿ ಕೃಷಿಗೆ ಕೀಟನಾಶಕ ಬಳಸುವ ರೈತರು ಮತ್ತು ಇಂತಹ ಕೀಟನಾಶಕಗಳ ಸಂಪರ್ಕದಲ್ಲಿರುವ ವೃತ್ತಿಪರರಲ್ಲಿ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯ ಹೆಚ್ಚಾಗಿರುತ್ತದೆ. ಅಲ್ಲದೆ ಎಸ್ಟ್ರೋಜೆನಿಕ್ ಗುಣಗಳನ್ನು ಹೊಂದಿರುವ ಆರ್ಗಾನೊಕ್ಲೋರಿನ್ ಕೀಟನಾಶಗಳಿಗೆ ಒಡ್ಡಿಕೊಳ್ಳುವುದರಿಂದ ಪ್ರಾಸ್ಟೇಟ್ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯ ಹೆಚ್ಚಿರುತ್ತದೆ.

► ಕುಟುಂಬದ ಇತಿಹಾಸ

ಶೇ.5ರಿಂದ 10 ರಷ್ಟು ಪ್ರಾಸ್ಟೇಟ್ ಕ್ಯಾನ್ಸರ್‌ಗಳು ಕುಟುಂಬದ ಇತಿಹಾಸದಿಂದ ಬಳುವಳಿಯಾಗಿ ಬಂದಿರುತ್ತವೆ ಎಂದು ಅಂದಾಜಿಸಲಾಗಿದೆ. 55 ವರ್ಷಕ್ಕಿಂತ ಕಡಿಮೆ ಪ್ರಾಯದ ಪುರುಷರಲ್ಲಿ ಸುಮಾರು ಶೇ.40ರಷ್ಟು ಪ್ರಕರಣಗಳಲ್ಲಿ ವಂಶವಾಹಿಗಳು ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಕಾರಣವಾಗಬಹುದು. ಕೋಶಗಳ ವಿಭಜನೆಯನ್ನು ಪುನರಾವರ್ತಿಸುವ ವಂಶವಾಹಿಗಳಲ್ಲಿ ಎಚ್‌ಒಎಕ್ಸ್‌ಬಿ13 ವಂಶವಾಹಿ ಒಂದಾಗಿದೆ. ಅಲ್ಲದೆ ವ್ಯಕ್ತಿಯ ನಿಕಟ ರಕ್ತಸಂಬಂಧಿ ಅಂದರೆ ತಂದೆ ಅಥವಾ ಸೋದರರು ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೆ ಅಂತಹ ವ್ಯಕ್ತಿಗೂ ಈ ರೋಗವುಂಟಾಗುವ ಅಪಾಯ ಹೆಚ್ಚಾಗಿರುತ್ತದೆ. ತಂದೆ ಮತ್ತು ಮಗನ ನಡುವೆ ಇಂತಹ ತುಲನಾತ್ಮಕ ಅಪಾಯ 2.5 ಪಟ್ಟು ಇದ್ದರೆ,ಒಡಹುಟ್ಟಿದವರ ನಡುವೆ 3.4 ಪಟ್ಟಿರುತ್ತದೆ.

►  ಸಹಕಾಯಿಲೆ ಸ್ಥಿತಿ

ಕೆಲವು ಅನಾರೋಗ್ಯಗಳು ಪ್ರಾಸ್ಟೇಟ್ ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸಬಲ್ಲವು. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಕಾಯಿಲೆಗಳು ಇವುಗಳಲ್ಲಿ ಸೇರಿವೆ. ಮಧುಮೇಹಿಗಳು ಇತರರಿಗೆ ಹೋಲಿಸಿದರೆ ಪ್ರಾಸ್ಟೇಟ್ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯ ನಾಲ್ಕು ಪಟ್ಟುಗಳಷ್ಟಿರುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಅಲ್ಲದೆ ಅಧಿಕ ರಕ್ತದೊತ್ತಡ ರೋಗಿಗಳಲ್ಲಿ ಸಾಮಾನ್ಯ ರಕ್ತದೊತ್ತಡ ಹೊಂದಿದವರಿಗೆ ಹೋಲಿಸಿದರೆ ಪ್ರಾಸ್ಟೇಟ್ ಕ್ಯಾನ್ಸರ್‌ನ ಅಪಾಯ ಮೂರು ಪಟ್ಟು ಹೆಚ್ಚಿರುತ್ತದೆ.

ಇವುಗಳಲ್ಲದೆ ಧೂಮ್ರಪಾನ,ಮದ್ಯಪಾನ ಮತು ವ್ಯಾಸೆಕ್ಟಮಿಯಂತಹ ಪ್ರಾಸ್ಟೇಟ್ ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸಬಹುದಾದ ಇತರ ಅಂಶಗಳೂ ಇವೆ. ಆದರೆ ತಂಬಾಕು ಸಹಿತ ಅಥವಾ ರಹಿತ ಎಲೆ ಅಡಿಕೆ ತಿನ್ನುವ ಹಾಗೂ ಬೀಡಿ-ಸಿಗರೇಟ್ ಸೇದುವ ಚಟಗಳಿಗೂ ಪ್ರಾಸ್ಟೇಟ್ ಕ್ಯಾನ್ಸರ್‌ಗೂ ಸಂಬಂಧವಿರುವುದು ಸಂಪೂರ್ಣವಾಗಿ ರುಜುವಾತಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News