ಯೂತ್ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಮನು ಭಾಕರ್ ಗೆ ಇನ್ನೂ ಸಿಕ್ಕಿಲ್ಲ ಸರಕಾರ ಘೋಷಿಸಿದ ಹಣ

Update: 2019-01-05 10:56 GMT

ಹೊಸದಿಲ್ಲಿ, ಜ.5: ತಾನು 2018ರ ಯೂತ್ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಹರ್ಯಾಣ ಸರಕಾರ ಆಶ್ವಾಸನೆ ನೀಡಿದ್ದ 2 ಕೋಟಿ ರೂ. ಬಹುಮಾನವನ್ನು ಇನ್ನೂ ನೀಡದೇ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಭಾರತದ ಭರವಸೆಯ ಶೂಟರ್ ಮನು ಭಾಕರ್, ರಾಜ್ಯದ ಕ್ರೀಡಾ ಸಚಿವ ಅನಿಲ್ ವಿಜ್ ಹಾಗೂ ರಾಜ್ಯ ಸರಕಾರವನ್ನು ತಮ್ಮ ಸರಣಿ ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. ತಮಗೆ ಘೋಷಿಸಲಾದ ಬಹುಮಾನ ತಮಗೆ ದೊರೆಯುವುದೇ ಅಥವಾ ಅದು ಕೇವಲ ಜುಮ್ಲಾ ಹೌದೇ ಎಂದು ಅವರು ಸಚಿವರನ್ನು ಪ್ರಶ್ನಿಸಿದ್ದಾರೆ.

ಇದಕ್ಕೂ ಮುಂಚೆ ಇನ್ನೊಂದು ಟ್ವೀಟ್ ಮಾಡಿದ 16 ವರ್ಷದ ಭಾಕರ್, “ಹರ್ಯಾಣದಲ್ಲಿ ಯಾರೋ ನಿಜವಾಗಿಯೂ ಯೂತ್ ಒಲಿಂಪಿಕ್ಸ್  ಬಹುಮಾನದಲ್ಲಿ ಆಡುತ್ತಿದ್ದಾರೆ. ಇದು ಆಟಗಾರರನ್ನು ಉತ್ತೇಜಿಸಲೋ ಅಥವಾ ನಿರುತ್ತೇಜಿಸಲೋ ಯಾವುದು ಸರಿ?'' ಎಂದು ಅವರು ಪ್ರಶ್ನಿಸಿದ್ದಾರೆ.

ಯೂತ್ ಒಲಿಂಪಿಕ್ಸ್ ಆರಂಭಗೊಳ್ಳುವ ಮುನ್ನ ಇದ್ದ ರಾಜ್ಯ ಸರಕಾರದ ತಿದ್ದುಪಡಿಗೊಂಡ ನೀತಿಯಂತೆ ಚಿನ್ನದ ಪದಕ ವಿಜೇತರಿಗೆ 2 ಕೋಟಿ ರೂ. ನಗದು ಬಹುಮಾನ ನೀಡಲಾಗುವುದಾದರೆ, ಬೆಳ್ಳಿ ಮತ್ತು ಕಂಚು ಗೆದ್ದವರಿಗೆ ಕ್ರಮವಾಗಿ ರೂ. 1.25 ಕೋಟಿ ಹಾಗೂ ರೂ. 80 ಲಕ್ಷ ನಿಗದಿಯಾಗಿತ್ತು. ಇದಕ್ಕೂ ಮುಂಚೆ ಪದಕ ವಿಜೇತರಿಗೆ ತಲಾ ರೂ. 10 ಲಕ್ಷ, ರೂ. 7.5 ಲಕ್ಷ ಹಾಗೂ ರೂ. 5 ಲಕ್ಷ ನಗದು ಬಹುಮಾನ ದೊರೆಯುತ್ತಿತ್ತು.

ಆದರೆ ಡಿಸೆಂಬರ್ 2018ರಲ್ಲಿ ಮತ್ತೆ ತನ್ನ ನಗದು ಬಹುಮಾನ ನೀತಿಗೆ ತಿದ್ದುಪಡಿ ತಂದ ಸರಕಾರ ಚಿನ್ನ ವಿಜೇತರಿಗೆ ರೂ. 1 ಕೋಟಿ, ಬೆಳ್ಳಿ ಮತ್ತು ಕಂಚು ವಿಜೇತರಿಗೆ ಕ್ರಮವಾಗಿ ರೂ. 65 ಲಕ್ಷ ಹಾಗೂ ರೂ. 40 ಲಕ್ಷ ನಿಗದಿಪಡಿಸಿತ್ತು.

ಭಾರತದ ಇಬ್ಬರು ಟೆನ್ನಿಸ್ ಆಟಗಾರರು, ಮೂವರು ಪ್ಯಾಡ್ಲರುಗಳ ಜತೆಗೆ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಗೆ ಆಯ್ಕೆಯಾದ 16 ಶೂಟರ್ ಗಳ ಪೈಕಿ ಭಾಕರ್ ಕೂಡ ಒಬ್ಬರಾಗಿದ್ದಾರೆ. 2020 ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಸಲುವಾಗಿ  ಆಟಗಾರರನ್ನು ಸಿದ್ಧಪಡಿಸುವ ಯೋಜನೆ ಇದಾಗಿದೆ. ಆಯ್ಕೆಗೊಂಡ ಅಥ್ಲೀಟುಗಳಿಗೆ ಮಾಸಿಕ ರೂ. 50,000 ಸಹಾಯಧನ ದೊರೆಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News