ವಿಧಾನಸೌಧದ ಬಳಿ 25.76 ಲಕ್ಷ ನಗದು ಪತ್ತೆ ಪ್ರಕರಣ: ಸರಕಾರಿ ನೌಕರನ ತೀವ್ರ ವಿಚಾರಣೆ

Update: 2019-01-05 16:01 GMT

ಬೆಂಗಳೂರು, ಜ.5: ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಸಿಕ್ಕಿರುವ 25.76 ಲಕ್ಷ ರೂ. ಜಪ್ತಿ ಪ್ರಕರಣ ಸಂಬಂಧ ಸರಕಾರಿ ನೌಕರನಾಗಿರುವ ಮೋಹನ್ ಅನ್ನು ಹಿರಿಯ ಪೊಲೀಸ್ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದರು.

ಶನಿವಾರ ಮೋಹನ್ ಅವರನ್ನು ವಿಚಾರಣೆಗೊಳಪಡಿಸಿ ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಮೋಹನ್ ಅವರು ಒಂದೊಂದು ಬಾರಿ ಒಂದೊಂದು ರೀತಿಯ ಹೇಳಿಕೆ ನೀಡಿದ್ದು, ಇವರು ನೀಡಿರುವ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಪೊಲೀಸರು, ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

12 ವರ್ಷದಿಂದ ಕೆಲಸ: ವಿಧಾನಸೌಧದ ಸಚಿವರೊಬ್ಬರ ಕಚೇರಿಯೊಂದರಲ್ಲಿ ಟೈಪಿಸ್ಟ್ ಆಗಿದ್ದ ಮೋಹನ್ ಕಳೆದ 12 ವರ್ಷಗಳಿಂದ ಮಂತ್ರಿಗಳ ಬಳಿ ಕೆಲಸ ಮಾಡುತ್ತಿದ್ದರೆಂಬುದು ತಿಳಿದುಬಂದಿದ್ದು, ಪ್ರಸ್ತುತ ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಪ್ರಕರಣ ಎಸಿಬಿಗೆ: ಈ ಪ್ರಕರಣವನ್ನು ಎಸಿಬಿಗೆ ವಹಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ. ಹಣ ವರ್ಗಾವಣೆ ಪ್ರಕರಣವಾಗಿರುವುದರಿಂದ ಎಸಿಬಿಗೆ ಈ ಪ್ರಕರಣ ವಹಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಪ್ರಕರಣದ ಹಿನ್ನಲೆ: ಶುಕ್ರವಾರ ಸಂಜೆ ವಿಧಾನಸೌಧದ ಪಶ್ಚಿಮ ದ್ವಾರದ ಸಮೀಪ ಬ್ಯಾಗ್ ಅನ್ನು ಕೊಂಡೊಯ್ಯುತ್ತಿದ್ದ ವ್ಯಕ್ತಿಯನ್ನು ವಿಧಾನಸೌಧ ಭದ್ರತಾ ಸಿಬ್ಬಂದಿ ತಡೆದು ಪರಿಶೀಲಿಸಿದಾಗ ಅದರಲ್ಲಿ 25.76 ಲಕ್ಷ ರೂ. ಹಣ ಪತ್ತೆಯಾಗಿತ್ತು. ಈ ಸಂಬಂಧ ವಿಧಾನಸೌಧ ಠಾಣೆ ಪೊಲೀಸರು ಮೋಹನ್ ಎಂಬುವರನ್ನು ಬಂಧಿಸಿದ್ದು, ಹಣ ವಶಪಡಿಸಿಕೊಂಡು ವಿಚಾರಣೆಗೊಳಪಡಿಸಿದಾಗ ಗೊಂದಲದ ಹೇಳಿಕೆ ನೀಡಿದ್ದರು.

ನೋಟಿಸ್, ಮಹಜರು

ಪ್ರಕರಣ ಸಂಬಂಧ ವಿಧಾನಸೌಧದ ಹಿರಿಯ ಅಧಿಕಾರಿಗಳಿಗೆ ಇಲ್ಲಿನ ವಿಧಾನಸೌಧ ಠಾಣಾ ಪೊಲಿಸರು ನೋಟಿಸ್ ನೀಡಿದ್ದಾರೆ ಎನ್ನಲಾಗಿದ್ದು, ಶನಿವಾರ ಮೋಹನ್ ಅವರನ್ನು ಮಹಜರಿಗಾಗಿ ಕರೆತರಲಾಯಿತು.

ಮೊದಲಿಗೆ ಶಾಸಕರ ಭವನಕ್ಕೆ ಕರೆದೊಯ್ದು, ತಪಾಸಣೆಗೈದ ಪೊಲೀಸರು, ಬಳಿಕ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಚಿವ ಪುಟ್ಟರಂಗ ಶೆಟ್ಟಿ ಆಪ್ತ ಕಾರ್ಯದರ್ಶಿ ಕಚೇರಿಗೆ ಕರೆದೊಯ್ದು ಸ್ಥಳ ಮಹಜರು ಮಾಡಿದರು. ಬಳಿಕ ಅದರ ಪಕ್ಕದಲ್ಲಿರುವ ಕಾರ್ಮಿಕ ಸಚಿವರ ಆಪ್ತ ಕಾರ್ಯದರ್ಶಿ ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಿದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News