ತೆರಿಗೆ ಬಾಕಿ ಉಳಿಸಿಕೊಂಡವರ ಚರಾಸ್ತಿಗಳ ಜಪ್ತಿಗೆ ಬಿಬಿಎಂಪಿ ತೀರ್ಮಾನ
ಬೆಂಗಳೂರು, ಜ.5: ಆರೇಳು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಕಟ್ಟಡಗಳಿಂದ ಈವರೆಗೆ 455 ಕೋಟಿ ರೂ. ತೆರಿಗೆ ಸಂಗ್ರಹಿಸುವ ಮೂಲಕ ಬಿಬಿಎಂಪಿ ಶೇ.27.48ರಷ್ಟು ಗುರಿ ಸಾಧಿಸಿದೆ. ಉಳಿದ ಮೂರು ತಿಂಗಳಲ್ಲಿ ಇನ್ನು ಹೆಚ್ಚಿನ ಬಾಕಿ ತೆರಿಗೆ ಸಂಗ್ರಹಿಸುವ ಮೂಲಕ ತೆರಿಗೆ ಪ್ರಮಾಣ ಹೆಚ್ಚಿಸಿ, ಆರ್ಥಿಕ ವರ್ಷದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ತೆರಿಗೆ ಸಂಗ್ರಹ ಮಾಡಲಾಗುವುದಾಗಿ ಭರವಸೆ ಮೂಡಿಸಿದೆ.
ಹಲವು ವರ್ಷಗಳಿಂದ ಕೋಟ್ಯಂತರ ತೆರಿಗೆ ಬಾಕಿ ಉಳಿಸಿಕೊಂಡ ಕಟ್ಟಡಗಳಲ್ಲಿನ ಚರಾಸ್ತಿಗಳ ಜಪ್ತಿಗೆ ಮುಂದಾಗುವ ಮೂಲಕ ತೆರಿಗೆ ಬಾಕಿದಾರರಿಗೆ ಬಿಬಿಎಂಪಿ ಬಿಸಿ ಮುಟ್ಟಿಸಿದೆ. ಇದಕ್ಕೆ ಬೆದರಿಂದ ಬಾಕಿದಾರರು ಬಾಕಿ ತೆರಿಗೆ ಪಾವತಿಸಲು ಮುಂದಾಗುತ್ತಿದ್ದಾರೆ.
ಆಯುಕ್ತರ ಆದೇಶ: ಹಲವು ವರ್ಷಗಳಿಂದ ಪಾಲಿಕೆಗೆ ತೆರಿಗೆ ಬಾಕಿ ಉಳಿಸಿಕೊಂಡಿರುವ ಕಟ್ಟಡಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಕಂದಾಯ ವಿಭಾಗದ ಜಂಟಿ ಆಯುಕ್ತರು ಆದೇಶ ಹೊರಡಿಸಿದ್ದರು. ಜತೆಗೆ ಡಿಮ್ಯಾಂಡ್ ನೋಟಿಸ್‌ಗೆ ಜಾರಿಗೊಳಿಸಿದ ನಂತರವೂ ತೆರಿಗೆ ಪಾವತಿಸದ ಹಾಗೂ ಯಾವುದೇ ಉತ್ತರ ನೀಡದಂತಹ ಆಸ್ತಿಗಳ ಜಪ್ತಿಗೆ ಮುಂದಾಗುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ನಗರದ ಪ್ರಮುಖ ವಲಯಗಳಲ್ಲಿ ಕೋಟ್ಯಂತರ ರೂ. ತೆರಿಗೆ ಬಾಕಿ ಉಳಿಸಿಕೊಂಡಿರುವ ಪ್ರತಿಷ್ಠತ ಮಾಲ್‌ಗಳು, ಬಹುಮಹಡಿ ವಾಣಿಜ್ಯ ಕಟ್ಟಡಗಳ ಮೇಲೆ ದಾಳಿ ನಡೆಸಿರುವ ಕಂದಾಯ ವಿಭಾಗದ ಅಧಿಕಾರಿಗಳು, ಚರಾಸ್ತಿಗಳ ಜಪ್ತಿಗೆ ಮುಂದಾಗಿದ್ದಾರೆ.
ಇದಕ್ಕೆ ಬೆದರಿದ ಆಸ್ತಿ ಮಾಲಕರು ಕೂಡಲೇ ತೆರಿಗೆ ಪಾವತಿಸಲು ಮುಂದಾಗಿರುವುದು ಕಂಡುಬಂದಿದೆ. ಹೀಗಾಗಿ ಇದೇ ಕ್ರಮವನ್ನು ಮುಂದುವರಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ನಗರದ ಪಶ್ಚಿಮ ವಲಯ ವ್ಯಾಪ್ತಿಯ ಒರಾಯನ್ ಮಾಲ್ ಪಾಲಿಕೆಗೆ ಕೋಟ್ಯಂತರ ತೆರಿಗೆ ಬಾಕಿ ಉಳಿಸಿಕೊಂಡಿತ್ತು. ನೋಟಿಸ್ ನೀಡಿದ ನಂತರವೂ ಸಕಾರಾತ್ಮಕವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಇತ್ತೀಚೆಗೆ ಜಂಟಿ ಆಯುಕ್ತ ಚಿದಾನಂದ ನೇತೃತ್ವದ ಅಧಿಕಾರಿಗಳ ತಂಡ ಒರಾಯನ್ ಮಾಲ್‌ನ ಮೂರನೇ ಮಹಡಿ ಹಾಗೂ ನಾಲ್ಕನೇ ಮಹಡಿಯ ಜಪ್ತಿಗೆ ಮುಂದಾಗಿತ್ತು. ಇದರಿಂದ ಕಂಗಾಲಾದ ಮಾಲ್‌ನವರು ಸಂಜೆ ವೇಳೆಗೆ 2.6 ಕೋಟಿ ರೂ. ತೆರಿಗೆ ಪಾವತಿಸುವುದಾಗಿ ಹಾಗೂ ಜ. 10ರೊಳಗೆ ಸಂಪೂರ್ಣ ಬಾಕಿ ತೆರಿಗೆ ಪಾವತಿಸುವುದಾಗಿ ಮನವಿ ಮಾಡಿದ್ದಾರೆ.
ವರ್ಲ್ಡ್ ಟ್ರೇಡ್ ಸೆಂಟರ್ 15 ಕೋಟಿ ರೂ. ತೆರಿಗೆ ಬಾಕಿ:
ಇಟಾ ಮಾಲ್, ಗೋಪಾಲನ್ ಮಾಲ್, ಮಂತ್ರಿ ಮಾಲ್‌ಗಳು ಸಹ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಒರಾಯನ್ ಮಾಲ್‌ನಲ್ಲಿ ಅಧಿಕಾರಿಗಳ ಕಾರ್ಯಾಚರಣೆಗೆ ಬೆದರಿದ ಇತರೆ ಮಾಲ್‌ಗಳು ಜಪ್ತಿಗೆ ಮೊದಲೇ ತೆರಿಗೆ ಪಾವತಿಸಿದ್ದಾರೆ. ಆದರೆ, ಯಶವಂತಪುರದ ವರ್ಲ್ಡ್ ಟ್ರೇಡ್ ಸೆಂಟರ್ 15 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಇನ್ನು ಮಾರಪ್ಪನಪಾಳ್ಯ ವಾರ್ಡ್ ಇಂಟರ್ ಟೆಕ್ ಸಾಫ್ಟ್‌ವೇರ್ ಸಂಸ್ಥೆ ತೆರಿಗೆ ಪಾವತಿಸದೆ ಸತಾಯಿಸುತ್ತಿದ್ದರು. ಆ ಹಿನ್ನೆಲೆಯಲ್ಲಿ ಜಪ್ತಿ ಮಾಡಿ ಬಾಡಿಗೆದಾರರಿಂದ ತೆರಿಗೆ ವಸೂಲಿ ಮಾಡಲಾಗಿದೆ ಎಂದು ಪಶ್ಚಿಮ ವಲಯದ ಜಂಟಿ ಆಯುಕ್ತ ಚಿದಾನಂದ ಅವರು ಮಾಹಿತಿ ನೀಡಿದರು.
ಇನ್ನು ಪೂರ್ವ ವಲಯದಲ್ಲಿ ಸೆಂಟ್ರಲ್ ಮಾಲ್, ಗರುಡಾ ಮಾಲ್, ಸ್ಟಾರ್ ಹೊಟೇಲ್‌ಗಳು ಸೇರಿ 34 ಬೃಹತ್ ವಾಣಿಜ್ಯ ಕಟ್ಟಡಗಳು 35 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದವು. ಆ ಪೈಕಿ 10 ಕಟ್ಟಡಗಳಿಂದ ಈಗಾಗಲೇ ತೆರಿಗೆ ಸಂಗ್ರಹಿಸಲಾಗಿದ್ದು, ಇನ್ನು 13 ಕಟ್ಟಡಗಳ ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ತೆರಿಗೆ ಸಂಗ್ರಹಕ್ಕೆ ವಿಳಂಬವಾಗಿದೆ ಎಂದು ಪೂರ್ವ ವಲಯ ಜಂಟಿ ಆಯುಕ್ತ ರವೀಂದ್ರ ಹೇಳಿದರು.
ಗೋಡೆ ಮೇಲೆ ಬಾಕಿದಾರರ ಹೆಸರು: ಪಾಲಿಕೆಗೆ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಹೆಸರನ್ನು ಸಾರ್ವಜನಿಕರಿಗೆ ತಿಳಿಯುವಂತೆ ಪಾಲಿಕೆ ಕಚೇರಿಗಳ ಗೋಡೆಗಳ ಮೇಲೆ ಅಂಟಿಸಲಾಗಿದೆ. ಇದರಿಂದ ಮುಜುಗರಕ್ಕೆ ಒಳಗಾದ ಹಲವಾರು ಆಸ್ತಿ ಮಾಲಕರು ತೆರಿಗೆ ಪಾವತಿಸಲು ಮುಂದಾಗುತ್ತಿದ್ದಾರೆ. ಇದೇ ರೀತಿ ಎಲ್ಲ ವಲಯಗಳಲ್ಲಿಯೂ ಪ್ರಮುಖ 100 ಜನ ಬಾಕಿದಾರರ ಹೆಸರುಗಳನ್ನು ಗೋಡೆಗಳ ಮೇಲೆ ಅಂಟಿಸುವಂತೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೂಚನೆ ನೀಡಿದ್ದಾರೆ.