ಬಿಜೆಪಿ ಆಡಳಿತದಿಂದ ಜಾತ್ಯತೀತ ಸ್ವರೂಪಕ್ಕೆ ಧಕ್ಕೆ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರಾಧ್ಯಕ್ಷ ಡಾ.ಇಲ್ಯಾಸ್

Update: 2019-01-05 16:24 GMT

ಬೆಂಗಳೂರು, ಜ.5: ಕೇಂದ್ರದಲ್ಲಿ ಮತ್ತೊಂದು ಅವಧಿಗೆ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದರೆ, ದೇಶದ ಜಾತ್ಯತೀತ ಸ್ವರೂಪದ ವ್ಯವಸ್ಥೆಗೆ ಧಕ್ಕೆಯಾಗುವುದು ನಿಶ್ಚಿತ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಡಾ.ಎಸ್.ಖಾಸೀಂ ರಸೂಲ್ ಇಲ್ಯಾಸ್ ತಿಳಿಸಿದರು.

ಶನಿವಾರ ನಗರದ ಬೆನ್ಸನ್‌ಟೌನ್‌ನಲ್ಲಿರುವ ಇಂಡಿಯನ್ ಸೋಷಿಯಲ್ ಇನ್ಸ್‌ಟಿಟ್ಯೂಟ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಮುಖಂಡರ ಎರಡು ದಿನಗಳ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು 2019ರ ಲೋಕಸಭಾ ಚುನಾವಣೆಯಲ್ಲಿ ಜಾತ್ಯತೀತ ಮನೋಭಾವನೆಯ, ಸಮಾನ ಮನಸ್ಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ನಾವು ಸಿದ್ಧವಿದ್ದೇವೆ. ಈಗಾಗಲೆ ಈ ಸಂಬಂಧ ಸಿಪಿಐ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಕೃಷಿ, ಶಿಕ್ಷಣ ಹಾಗೂ ಆರ್ಥಿಕ ನೀತಿಗಳ ಕುರಿತು ಈ ಎರಡು ದಿನಗಳ ಕಾರ್ಯಾಗಾರದಲ್ಲಿ ಚರ್ಚಿಸಲಾಗುತ್ತದೆ. ದೇಶದ ಶೇ.70ರಷ್ಟು ಜನ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿದ್ದಾರೆ. ಈ ಪೈಕಿ ಬಹುಪಾಲು ಮಂದಿ ಕೃಷಿಯನ್ನೆ ಅವಲಂಬಿಸಿದ್ದಾರೆ. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದರೂ ರೈತರ ಆತ್ಮಹತ್ಯೆಗಳು ನಿಂತಿಲ್ಲ ಎಂದು ಇಲ್ಯಾಸ್ ತಿಳಿಸಿದರು.

ದೇಶದ ಜಿಡಿಪಿಗೆ ದೊಡ್ಡ ಕೊಡುಗೆ ನೀಡುತ್ತಿರುವ ಕೃಷಿ ವಲಯವನ್ನು ಲಾಭದಾಯಕವನ್ನಾಗಿಸಲು ಏನು ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಚರ್ಚಿಸುವುದಲ್ಲದೆ, ಪಕ್ಷದ ಕಾರ್ಯಕರ್ತರು ಮುಖಂಡರಿಗೂ ಈ ಸಂಬಂಧ ಜಾಗೃತಿ ಮೂಡಿಸಲಾಗುತ್ತದೆ ಎಂದು ಅವರು ಹೇಳಿದರು.

ಕೇಂದ್ರದಲ್ಲಿ ಯುಪಿಎ ಅಥವಾ ಎನ್‌ಡಿಎ ಯಾರೇ ಅಧಿಕಾರದಲ್ಲಿರಲಿ, ದೇಶದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಣೆ ಮಾಡಬೇಕಾದ್ದು ಅವರ ಜವಾಬ್ದಾರಿ. ಶಿಕ್ಷಣದ ಕೇಸರೀಕರಣ ನಡೆಸಲಾಗುತ್ತಿದೆ, ಇತಿಹಾಸವನ್ನು ತಿರುಚುವ ಪ್ರಯತ್ನಗಳು ನಡೆಯತ್ತಿವೆ ಎಂದು ಆರೋಪಿಸಲಾಗುತ್ತಿದೆ. ನಮ್ಮ ಸಮಾಜಕ್ಕೆ ಯಾವ ರೀತಿಯ ಶಿಕ್ಷಣ ಬೇಕು ಎಂಬುದರ ಕುರಿತು ಚಿಂತನೆ ನಡೆಸಬೇಕಿದೆ ಎಂದು ಅವರು ಹೇಳಿದರು.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ಅಲ್ಪಸಂಖ್ಯಾತರ ವಿರೋಧಿ ಅನ್ನೋದು ಜಗಜ್ಜಾಹೀರು. ಆದುದರಿಂದಲೇ, ತ್ರಿವಳಿ ತಲಾಕ್ ಕುರಿತು ಕಾನೂನು ಜಾರಿಗೆ ತಂದು ಸಮಾಜದಲ್ಲಿ ಗೊಂದಲದ ವಾತಾವರಣ ಸೃಷ್ಟಿಸುತ್ತಿದೆ. ಅಲ್ಲದೆ, ಸಮಾಜವನ್ನು ಧರ್ಮದ ಆಧಾರದ ಮೇಲೆ ವಿಭಜನೆ ಮಾಡಿ, ಹಿಂದುಗಳ ಮತಗಳನ್ನು ಒಂದೆಡೆ ಕ್ರೋಡೀಕರಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.

ಗೋಹತ್ಯೆ, ಗುಂಪು ಹಲ್ಲೆಗಳು ಇವುಗಳ ಮತ್ತೊಂದು ರೂಪವಾಗಿದೆ. ಅನ್ಯಧರ್ಮೀಯರಿಗೆ ಹೋಲಿಸಿದರೆ ಮುಸ್ಲಿಮರಲ್ಲಿ ವಿಚ್ಛೇದನದ ಪ್ರಮಾಣ ತುಂಬಾ ಕಡಿಮೆ. ಸುಪ್ರೀಂಕೋರ್ಟ್‌ನ ಆದೇಶ ಬಳಿಕ, ಅನಗತ್ಯವಾಗಿ ತ್ರಿವಳಿ ತಲಾಕ್‌ಗೆ ಸಂಬಂಧಿಸಿದಂತೆ ಕಾನೂನು ತರಲಾಯಿತು. ನಂತರ, ಅದನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಪ್ರಯತ್ನಿಸಲಾಯಿತು ಎಂದು ಇಲ್ಯಾಸ್ ತಿಳಿಸಿದರು.

ತ್ರಿವಳಿ ತಲಾಕ್‌ಗೆ ಮಾನ್ಯತೆ ಇಲ್ಲ ಎಂದು ಹೇಳುತ್ತಾರೆ. ಆಗದೇ ಇರುವ ಅಪರಾಧಕ್ಕೆ ಜಾಮೀನು ರಹಿತ ಶಿಕ್ಷೆ ಯಾಕೆ. ತ್ರಿವಳಿ ತಲಾಕ್ ನೀಡಿದ ಪುರುಷನನ್ನು ಮೂರು ವರ್ಷ ಜೈಲಿಗೆ ಅಟ್ಟಲಾಗುತ್ತದೆ. ಅಲ್ಲದೆ, ಮತ್ತೊಂದೆಡೆ ಆತನು ಪತ್ನಿಗೆ ಜೀವನಾಂಶವನ್ನು ನೀಡಬೇಕಂತೆ. ಇದು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಬ್ದುಲ್ ಹಮೀದ್ ಫರಾನ್, ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಹಬೀಬುಲ್ಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News