ವಿಶ್ವದ ಮೊತ್ತಮೊದಲ ಮಾನವಶಾಸ್ತ್ರಜ್ಞ ಅಲ್ ಬರೂನಿ

Update: 2019-01-05 18:36 GMT

ಅಲ್ ಬರೂನಿಯ ಬಹುಮುಖಿ ಪ್ರತಿಭೆ ಸೀಮಾತೀತವಾಗಿತ್ತು. ಆತ ಓರ್ವ ವಿಜ್ಞಾನಿ, ಗಣಿತಶಾಸ್ತ್ರಜ್ಞ, ಖಗೋಲಶಾಸ್ತ್ರಜ್ಞ ಹಾಗೂ ಇತಿಹಾಸಕಾರನಾಗಿದ್ದ. ಅವನನ್ನು ಮೊತ್ತಮೊದಲ ಮಾನವಶಾಸ್ತ್ರಜ್ಞನೆಂದು ಪರಿಗಣಿಸುವುದು ಹೇಗೆ ಸಾಧ್ಯವೋ, ಹಾಗೆಯೇ ಅವನನ್ನು ‘ಜಿಯೋಡೆಸಿ’( ಭೊಮಿಯನ್ನು ಅಳೆಯುವ ವಿಜ್ಞಾನ)ಯ ಪಿತೃ ಎಂದು ಕೂಡ ಪರಿಗಣಿಸಬಹುದಾಗಿದೆ.


ಪಾಶ್ಚಾತ್ಯ ದೇಶಗಳಲ್ಲಿ ಬೋಧನೆ ಮತ್ತು ಸಂಶೋಧನೆ ನಡೆಸುತ್ತಿರುವಾಗ, ಮುಸ್ಲಿಂ ಇತಿಹಾಸದ ಕೆಲವು ಅತ್ಯಂತ ಶ್ರೇಷ್ಠ ವ್ಯಕ್ತಿಗಳ ಬಗ್ಗೆ ವಿಶ್ವವಿದ್ಯಾನಿಲಯಗಳಲ್ಲಿ ಏನನ್ನೂ ಹೇಳುವುದಿಲ್ಲ ಮತ್ತು ಆ ಹೆಸರುಗಳು ಅಲ್ಲಿ ಯಾರಿಗೂ ಗೊತ್ತಿರುವುದಿಲ್ಲ ಎಂಬುದು ನಾನು ಗಮನಿಸಿದ ವಿಷಯ. ಅಂತಹ ಶ್ರೇಷ್ಠರ ಹೆಸರುಗಳಲ್ಲಿ ನಿಜಾಮುಲ್ ಮುಲ್ಕ್, ಇಬ್ನ್ ಬತೂತಾ ಮತ್ತು ನನ್ನ ಅಧ್ಯಯನದ ಶಿಸ್ತು ಆಗಿರುವ ಮಾನವಶಾಸ್ತ್ರಕ್ಕೆ ತುಂಬಾ ಪ್ರಸ್ತುತನಾಗಿರುವ ಅಲ್ ಬರೂನಿಯ ಹೆಸರುಗಳು ಸೇರಿವೆ. ‘ರಾಯಲ್ ಅಂತ್ರಪಾಲಾಜಿಕಲ್ ಸೊಸೈಟಿ ಆಫ್ ಗ್ರೇಟ್ ಬ್ರಿಟನ್ ಆ್ಯಂಡ್ ಐರ್ಲೆಂಡ್’ ಪ್ರಕಟಿಸಿದ ಪತ್ರಿಕೆಯಲ್ಲಿ ನಾನು ಮೊತ್ತ ಮೊದಲು ಅಲ್ ಬರೂನಿಯ ಬಗ್ಗೆ ಬರೆದೆ. ಆ ಬರಹದಲ್ಲಿ ನಾನು ಬರೂನಿಯನ್ನು ಮೊತ್ತ ಮೊದಲ ಮಾನವಶಾಸ್ತ್ರಜ್ಞ ಎಂದು ಕರೆದಿದ್ದೆ.

ಕಳೆದ ಹಲವಾರು ವರ್ಷಗಳಲ್ಲಿ ನಡೆಸಿದ ಅಧ್ಯಯನಗಳಲ್ಲಿ ನಾನು ಅನೇಕಬಾರಿ ಅಲ್ ಬರೂನಿಗೆ ಮರಳಿ ಬಂದಿದ್ದೇನೆ. ಓರ್ವ ಮಾನವಶಾಸ್ತ್ರಜ್ಞನಾಗಿ ನನಗೆ ಅವನ ಬರವಣಿಗೆ, ಅವನ ಕೃತಿ ಬಹಳ ಮುಖ್ಯ. ಯಾಕೆಂದರೆ ಪಾಶ್ಚಾತ್ಯ ಜಗತ್ತಿನಲ್ಲಿ ಮಾನವ ಶಾಸ್ತ್ರವನ್ನು ಅಧ್ಯಯನ ಮಾಡುವಾಗ ಮಾನವಶಾಸ್ತ್ರವನ್ನು ಒಂದು ಪಾಶ್ಚಿಮಾತ್ಯ ಸೃಷ್ಟಿ: ನಿರ್ದಿಷ್ಟವಾಗಿ ಒಂದು ಶಿಸ್ತು ಆಗಿ ರೂಪುಗೊಂಡ ಒಂದು ಜ್ಞಾನ ಪ್ರಕಾರವೆಂದು ನನಗೆ ಹೇಳಿಕೊಡಲಾಗಿತ್ತು. ನನಗೆ ಬೋಧಿಸಲಾದಂತೆ ಮಾನವಶಾಸ್ತ್ರದ ವ್ಯಾಖ್ಯಾನದಲ್ಲಿ ಇವೆಲ್ಲ ಸೇರಿವೆ: ವಿದ್ಯಾರ್ಥಿ ಅಧ್ಯಯನ ಮಾಡಬೇಕಾದ ತಂಡದಲ್ಲಿ ಒಬ್ಬನಾಗಿ ವೀಕ್ಷಿಸುವುದು; ತಂಡದ ಆ ಜನರ ಸಂಸ್ಕಾರಗಳನ್ನು ಜಾಗರೂಕತೆಯಿಂದ ಗುರುತುಮಾಡಿಕೊಳ್ಳವುದು; ಅವರ ಪ್ರಾಥಮಿಕ ಮೂಲ ಪಠ್ಯಗಳನ್ನು ಸಂಶೋಧನೆಗಳನ್ನು ಸಾಧ್ಯವಿರುವಲ್ಲಿ ಅಂತರ್/ಪರಸ್ಪರ- ಸಾಂಸ್ಕೃತಿಕ ಹೋಲಿಕೆಗಳನ್ನು ಬಳಸಿ ವಸ್ತುನಿಷ್ಠವಾಗಿ ನಿರ್ಲಿಪ್ತವಾಗಿ ಸಾದರಪಡಿಸುವುದು.

ಅಲ್ ಬರೂನಿಯ ಕೃತಿಯಲ್ಲಿ ಈ ಎಲ್ಲ ಲಕ್ಷಣಗಳು, ಗುಣಗಳು ಇವೆ. ಪಾಶ್ಚಾತ್ಯ ಜಗತ್ತಿನಲ್ಲಿ ಮಾನವಶಾಸ್ತ್ರ ಬೆಳೆಯುವ ಶತಮಾನಗಳ ಮೊದಲೇ ಮುಸ್ಲಿಮರಂತಹ, ಪಾಶ್ಚಾತ್ಯರಲ್ಲದ ಜನ, ಈಗ ನಾವು ಯಾವುದನ್ನು ಮಾನವಶಾಸ್ತ್ರ ಎಂದು ಕರೆಯುತ್ತೇವೆಯೋ, ಅದನ್ನು ಅನುಷ್ಠಾನಗೊಳಿಸುತ್ತಿದ್ದರು, ಅನ್ವಯಿಸುತ್ತಿದ್ದರು. ನಾನು ಆ ಕುರಿತು ಬರೆದ ಮೊದಲ ಲೇಖನವು ಮಾನವಶಾಸ್ತ್ರದ ಸ್ವರೂಪದ ಕುರಿತು ಅಕಾಡಮಿಯಲ್ಲಿ ಚರ್ಚೆಯೊಂದಕ್ಕೆ ನಾಂದಿಯಾಯಿತು. ಮಾನವ ಶಾಸ್ತ್ರಕ್ಕೆ ಮುಸ್ಲಿಂ ಜಗತ್ತಿನಲ್ಲಿ ಒಂದು ಪ್ರಾಚೀನವಾದ ನೆಲೆ ಇದೆ ಮತ್ತು ಅದು ಜ್ಞಾನದ ಹುಡುಕಾಟ ಹಾಗೂ ಇತರ ಸಂಸ್ಕೃತಿಗಳನ್ನು /ಸಮಾಜಗಳನ್ನು ಅರ್ಥಮಾಡಿಕೊಳ್ಳುವ ಇಸ್ಲಾಮಿಕ್ ದೃಷ್ಟಿಕೋನದ, ಜೀವನ ದರ್ಶನದ ಒಂದು ಭಾಗವಾಗಿದೆ ಎಂದು ನಾನು ವಾದಿಸಿದ್ದೆ.
ಮಧ್ಯ ಏಶ್ಯಾದ ವಿದ್ವಾಂಸ ಅಬುರೈಹಾನ್ ಮುಹಮ್ಮದ್ ಅಲ್ ಬರೂನಿ(973-1048) ಬಹುಮುಖ ಪ್ರತಿಭೆಯ ಓರ್ವ ಜೀನಿಯಸ್ ಆಗಿದ್ದ.

ಅವನಂತಹ ಹಲವರನ್ನು ವಿಶ್ವಕ್ಕೆ ನೀಡಿದ ಇಸ್ಲಾಮಿಕ್ ಯುಗದಲ್ಲಿ ಆತ ಅಸಾಧಾರಣವಾದ ಪ್ರತಿಭೆ ಉಳ್ಳವನಾಗಿದ್ದ. ಆ ಯುಗ ಫಿರ್ದೌಸಿ(940-1020), ಅವಿಸೆನ್ನಾ (980-1937) ಮತ್ತು ಇಬ್ನ್ ಹೈತಮ್(965-1040)ರಂತಹವರ ಯುಗವಾಗಿತ್ತು. ಇಸ್ಲಾಮಿಕ್ ಸಾಂಸ್ಕೃತಿಕ ಹಾಗೂ ವೈಜ್ಞಾನಿಕ ಸಾಧನೆಗಳ ಉತ್ತುಂಗ ಕಾಲವಾಗಿತ್ತು. ಮಂಗೋಲಿಯನ್ನರು 1258ರಲ್ಲಿ ಈ ಇಸ್ಲಾಮಿಕ್ ಜಗತ್ತನ್ನು ಶಾಶ್ವತವಾಗಿ ನಾಶಮಾಡುವ ಕಾಲ ಆಗಿನ್ನೂ ತುಂಬ ದೂರದಲ್ಲಿತ್ತು. ಅಲ್ ಬರೂನಿ ಗಜನಿಯ ಮಹಮ್ಮದ್‌ನ (ಅಫ್ಘಾನಿಸ್ತಾನ) ಆಸ್ಥಾನದಲ್ಲಿದ್ದ. ಅವನಿಗೆ ಆ ದೊರೆಯ ಬಗ್ಗೆ ಭಿನ್ನಾಭಿಪ್ರಾಯಗಳಿದ್ದವು. ಅಲ್ಲಿ ಇದ್ದುಕೊಂಡು ಬರೂನಿ ಭಾರತದ ಬಗ್ಗೆ ಬರೆದ. ಅಲ್ ಬರೂನಿ ಎಂಬ (ಹೊರಗಿನವ ಅಥವಾ ವಿದೇಶೀಯ) ಹೆಸರೇ ಸ್ಥಳೀಯೇತರವಾದ ಒಂದು ಹಿನ್ನೆಲೆಯನ್ನು ಸೂಚಿಸುತ್ತದೆ. ಇದು ಪ್ರಾಯಶಃ ತನ್ನ ಹಾಗೂ ಇತರ ಸಮಾಜಗಳ ಕುರಿತಾದ ಅವನ ಗ್ರಹಿಕೆಯನ್ನು ಇನ್ನಷ್ಟು ಮೊನಚಾಗಿಸಿತು.
ಅಲ್ ಬರೂನಿಯ ಬಹುಮುಖಿ ಪ್ರತಿಭೆ ಸೀಮಾತೀತವಾಗಿತ್ತು.

ಆತ ಓರ್ವ ವಿಜ್ಞಾನಿ, ಗಣಿತಶಾಸ್ತ್ರಜ್ಞ, ಖಗೋಲಶಾಸ್ತ್ರಜ್ಞ ಹಾಗೂ ಇತಿಹಾಸಕಾರನಾಗಿದ್ದ. ಅವನನ್ನು ಮೊತ್ತಮೊದಲ ಮಾನವಶಾಸ್ತ್ರಜ್ಞನೆಂದು ಪರಿಗಣಿಸುವುದು ಹೇಗೆ ಸಾಧ್ಯವೋ, ಹಾಗೆಯೇ ಅವನನ್ನು ‘ಜಿಯೋಡೆಸಿ’( ಭೊಮಿಯನ್ನು ಅಳೆಯುವ ವಿಜ್ಞಾನ)ಯ ಪಿತೃ ಎಂದು ಕೂಡ ಪರಿಗಣಿಸಬಹುದಾಗಿದೆ.

ಬರೂನಿ ಭಾರತದ ಬಗ್ಗೆ ಬರೆದ ಪ್ರಸಿದ್ಧ ಪುಸ್ತಕ ‘ಕಿತಾಬ್ ಅಲ್- ಹಿಂದ್’ ಎಂದು ಅಥವಾ ಭಾರತದ ಪುಸ್ತಕವೆಂದು ವಿಶ್ವ ಪ್ರಸಿದ್ಧವಾಗಿದೆ. ಆ ಪುಸ್ತಕದ ಮೂಲ ಶೀರ್ಷಿಕೆ ‘ತಹ್‌ಕೀಕ್ ಮ ಅಲ್ ಹಿಂದ್’ನಲ್ಲಿರುವ ವಿಚಾರಣೆ ಎಂಬ ಶಬ್ದ, (ಭಾರತದ ವಿಚಾರಣೆ) ಬರೂನಿಯ ವೈಜ್ಞಾನಿಕ ಮನೋಧರ್ಮವನ್ನು ಸೂಚಿಸುತ್ತದೆ. 1017ಮತ್ತು 1031ರ ನಡುವೆ ಸುಮಾರು 13 ವರ್ಷಗಳ ಸಂಶೋಧನೆಯ ಬಳಿಕ ಬರೂನಿ ಆ ಪುಸ್ತಕವನ್ನು ಬರೆದಿದ್ದ. ಅದು 1887ರಲ್ಲಿ ಡಾ.ಬಿ.ಸಚೌ ಎಂಬವರಿಂದ ಜರ್ಮನ್ ಭಾಷೆಗೆ ಅನುವಾದಿಸಲ್ಪಟ್ಟಿತು. ಮುಂದಿನ ವರ್ಷ ‘ಅಲ್ ಬರೂನೀಸ್ ಇಂಡಿಯಾ’ ಎಂಬ ಶೀರ್ಷಿಕೆಯಲ್ಲಿ ಇಂಗ್ಲಿಷ್‌ಗೆ ಅನುವಾದಗೊಂಡಿತು.

ಒಂದು ಸಾವಿರ ವರ್ಷಗಳ ಹಿಂದಿನ ಹಿಂದೂ ಸಮಾಜದ ಕುರಿತಾದ ನಮ್ಮ ಜ್ಞಾನಕ್ಕೆ ಅದು ಇಂದಿಗೂ ಒಂದು ಪ್ರಮುಖ ಆಕರಗ್ರಂಥವಾಗಿ ಉಳಿದಿದೆ.
‘ಕಿತಾಬ್ ಅಲ್-ಹಿಂದ್’ನ ಅಧ್ಯಾಯನಗಳ ಶೀರ್ಷಿಕೆಗಳು ಆಧುನಿಕ ಮಾನವಶಾಸ್ತ್ರೀಯ ಆಸಕ್ತಿಗಳನ್ನು, ಕಾಳಜಿಗಳನ್ನು ಸೂಚಿಸುತ್ತವೆ: ‘‘ವರ್ಣಗಳು ಎಂದು ಕರೆಯಲಾಗುವ ಜಾತಿಗಳು ಮತ್ತು ಅವುಗಳಿಗಿಂತ ಕೆಳಗಿನ ವರ್ಗಗಳು’’(9)ಮತ್ತು ‘‘ಬ್ರಾಹ್ಮಣರಲ್ಲದೆ, ಇತರ ಜಾತಿಗಳು ತಮ್ಮ ಜೀವಮಾನದಲ್ಲಿ ಆಚರಿಸುವ ವಿಧಿಗಳು ಮತ್ತು ಸಂಪ್ರದಾಯಗಳು’’ (LXIV). ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳನ್ನು ಕೂಡ ‘ಕಿತಾಬ್ ಅಲ್-ಹಿಂದ್’ನಲ್ಲಿ ಚರ್ಚಿಸಲಾಗಿದೆ. ಉದಾಹರಣೆಗೆ, ‘‘ವಿವಾಹ, ಋತುಮತಿಯರಿಗೆ ಸಂಬಂಧಿಸಿದ ವಿಷಯಗಳು, ಭ್ರೂಣಗಳು ಮತ್ತು ಶಿಶುಹಾಸಿಗೆ’’ (LXIX)

ಅಲ್ ಬರೂನಿಯ ಅಧ್ಯಯನ ವಿಧಾನ ಕಟ್ಟುನಿಟ್ಟಿನದು ಹಾಗೂ ಕಠಿಣವಾದದ್ದು. ಮುನ್ನುಡಿಯಲ್ಲಿ ಸಚೌ ಬರೆಯುವಂತೆ ‘‘ನಮ್ಮ ಲೇಖಕ ತಾನೇ ಮಾತಾಡುವುದಿಲ್ಲ, ಬದಲಾಗಿ ಹಿಂದೂಗಳಿಗೆ ಮಾತಾಡಲು ಬಿಡುತ್ತಾನೆ, ಅವರೇ ಮಾತಾಡುವಂತೆ ಮಾಡುವುದು ಅವನ ವಿಧಾನ. ಸ್ವತಃ ಹಿಂದೂಗಳೇ ಚಿತ್ರಿಸಿರುವ ಭಾರತೀಯ ನಾಗರಿಕತೆಯ ಒಂದು ಚಿತ್ರಣವನ್ನು ಅವನು ನೀಡುತ್ತಾನೆ.’’ ಅಲ್ ಬರೂನಿ ಮೂಲ ಹಿಂದೂ ಆಕರ ಗ್ರಂಥಗಳನ್ನು, ಪ್ರಾಥಮಿಕ ಮೂಲಗಳನ್ನು ಬಹಳಷ್ಟು ಅವಲಂಬಿಸಿ ಅಧ್ಯಯನ ಮಾಡುತ್ತಾನೆ. ಮೂಲ ಪಠ್ಯಗಳನ್ನು ಅಧ್ಯಯನ ಮಾಡುವ ಉದ್ದೇಶದಿಂದ ಸಂಸ್ಕೃತ ಭಾಷೆಯನ್ನು ಕಲಿಯುತ್ತಾನೆ. ‘‘ಎಲ್ಲಿ ಸಂಸ್ಕೃತ ಪುಸ್ತಕಗಳು ದೊರಕುವ ಸಾಧ್ಯತೆಗಳು ಇವೆ, ಅಲ್ಲಿಂದ ಆ ಪುಸ್ತಕಗಳನ್ನು ಸಂಗ್ರಹಿಸಲು ಎಷ್ಟೇ ತೊಂದರೆಯಾಗಲಿ ಅಥವಾ ಎಷ್ಟೇ ಹಣ ಖರ್ಚಾಗಲಿ, ಆ ಕುರಿತು ನಾನು ಚಿಂತಿಸುವುದಿಲ್ಲ’’ ಎಂದು ಆತ ಬರೆದಿದ್ದಾನೆ.

ಹಿಂದೂಗಳ ಅಭಿಚಾತ ಪಠ್ಯಗಳಾದ ಪುರಾಣಗಳನ್ನು ಅಧ್ಯಯನ ಮಾಡಿದ ಪ್ರಾಯಶಃ ಮೊದಲ ಮುಸ್ಲಿಂ ಅಲ್ ಬರೂನಿ. ಇಷ್ಟೇ ಅಲ್ಲದೆ ಆತ ಉಪ-ಮೂಲಗಳನ್ನು (ಅರಬ್ ಮತ್ತು ಪರ್ಷಿಯನ್ ವಿದ್ವಾಂಸರು ಮಾಡಿದ ಅನುವಾದಗಳನ್ನು) ಕೂಡ ಅಧ್ಯಯನ ಮಾಡಿದ್ದ. ಭಾರತದಾದ್ಯಂತ ವ್ಯಾಪಕ ಪ್ರವಾಸ ಮಾಡಿದ ಬರೂನಿ, ಹಿಂದೂಗಳ ಜತೆ, ವಿಶೇಷವಾಗಿ ಬ್ರಾಹ್ಮಣರ ಮತ್ತು ಯೋಗಿಗಳ ಜತೆ ಸಂಪರ್ಕ ಏರ್ಪಡಿಸಿಕೊಳ್ಳುತ್ತಾನೆ. ‘‘ಕಿವಿಯಲ್ಲಿ ಕೇಳಿದ್ದು, ವದಂತಿ ಮಾತು ಪ್ರತ್ಯಕ್ಷದರ್ಶಿಗೆ ಸಮಾನವಲ್ಲ’’ ಎಂದು ಆತ ಒತ್ತಿ ಹೇಳುತ್ತಾನೆ. ಟೀಕಿಸದೆ ಸುಮ್ಮನೆ ಜೋಡಿಸುವುದು, ಪರಸ್ಪರ ಕೊಂಡಿ ಬೆಸೆಯುವುದು ಮಾನವ ಶಾಸ್ತ್ರಜ್ಞನ ಕೆಲಸ. ಅಲ್ ಬರೂನಿ ಇತರ ಸಮುದಾಯಗಳ ಜನರ ಪದ್ಧತಿಗಳು ಹಾಗೂ ಸಂಸ್ಕೃತಿಗಳ ಕುರಿತು ತೀರ್ಪುಕೊಡುವ ಕೆಲಸ ಮಾಡುವುದಿಲ್ಲ.

ಬರೂನಿ ಒಣ ಜಂಭ, ಅತಿಹೆಮ್ಮೆಯಂತಹ ಹಿಂದೂಗಳ ಕೆಲವು ಗುಣಗಳನ್ನು ಟೀಕಿಸುವಷ್ಟೆ ಖಾರವಾಗಿ ಅರಬರನ್ನು ಕೂಡ (ಅವರ ಪೂರ್ವ ಇಸ್ಲಾಮಿಕ್ ಪದ್ಧತಿಗಳನ್ನು) ಟೀಕಿಸುತ್ತಾನೆ. ಹಿಂದೂಗಳನ್ನು ಒಣ ಜಂಭಕೋರರು ಎಂದು ಕರೆಯುವುದು ಅವರ ಬಗ್ಗೆ ಒಂದು ತೀರ್ಪು ನೀಡಿದಂತಲ್ಲವೆ ಎಂದು ಅನಿಸಬಹುದು. ಆದರೆ ಹಿಂದೂಗಳು ತಮ್ಮ ಭೂಮಿ, ತಮ್ಮ ಪದ್ಧತಿಗಳು, ತಮ್ಮ ಆಹಾರ ಇತ್ಯಾದಿಗಳು ವಿಶ್ವದಲ್ಲೇ ಅತಿ ಶ್ರೇಷ್ಠವೆನ್ನುತ್ತಾರೆ ಎಂಬುದನ್ನು ಬರೂನಿ ಗಮನಿಸುತ್ತಾನೆ. ತಾವು ಶ್ರೇಷ್ಠರೆಂಬ ಹಿಂದೂಗಳ ಹೆಮ್ಮೆ, ಪರಸಂಸ್ಕೃತಿ ತಿರಸ್ಕಾರ ಮುಹಮ್ಮದ್ ಗಜನಿಯ ಆಡಳಿತದ ಕಾಲದಲ್ಲಿ ನಡೆದ ಮುಸ್ಲಿಮರ ದಾಳಿಗಳ ವಿರುದ್ಧ ಅವರ ಸಾಂಸ್ಕೃತಿಕ ರಕ್ಷಣಾ ವ್ಯವಸ್ಥೆಯ ಒಂದು ಮುಖ್ಯ ಭಾಗವಾಯಿತು.

ಅಲ್ ಬರೂನಿ ತುಲನಾತ್ಮಕ ಉದ್ದೇಶಗಳಿಗಾಗಿ ಯೆಹೂದಿಗಳು, ಕ್ರಿಶ್ಚಿಯನ್ನರು, ಪಾರ್ಸಿಗಳು ಮತ್ತು ಪ್ರಾಚೀನ ಗ್ರೀಕರನ್ನು ತನ್ನ ಅಧ್ಯಯನದ ವ್ಯಾಪ್ತಿಯೊಳಕ್ಕೆ ಸೇರಿಸಿಕೊಳ್ಳುತ್ತಾನೆ. ಗ್ರೀಕರನ್ನು ಆತ ತುಂಬ ಮೆಚ್ಚುತ್ತಾನೆ, ಪ್ರಶಂಸಿಸುತ್ತಾನೆ. ಸೂಫಿ, ಹಿಂದೂ ಮತ್ತು ಕ್ರಿಶ್ಚಿಯನ್ ಅನುಭಾವಿಗಳ ನಡುವೆ ಆತ ಮಾಡುವ ಹೋಲಿಕೆಯಲ್ಲಿ ವಿಶ್ವಾತ್ಮಕ, ಸಾರ್ವಕಾಲಿಕ ಅನುಭಾವದ ಕುರಿತಾದ ಅವನ ಅನುಕಂಪ ವ್ಯಕ್ತವಾಗುತ್ತದೆ.

ಸಮಾಜ ವಿಜ್ಞಾನಗಳಲ್ಲಿ ಅತ್ಯಂತ ಉನ್ನತವಾದ ಸಮಕಾಲೀನ ವೈಜ್ಞಾನಿಕ ಮಟ್ಟಗಳಿಗೆ ಸರಿದೂಗುವಂತಹ ನಿರ್ಲಿಪ್ತವಾದ ವಿವರಣೆಗಳನ್ನು ವ್ಯಾಖ್ಯಾನಗಳನ್ನು ನಾವು ಬರೂನಿಯಲ್ಲಿ ಕಾಣಬಹುದು. ಅಲ್ ಬರೂನಿ ಕುರಿತು ಆಸ್ಟ್ರೇಲಿಯನ್ ವಿದ್ವಾಂಸ ಆರ್ಥರ್ ಜೆಫ್ರಿ ಹೀಗೆ ಬರೆದಿದ್ದಾರೆ: ‘‘ಇತರ ಧರ್ಮಗಳ ದೃಷ್ಟಿಕೋನದ ಬಗ್ಗೆ ಅಷ್ಟೊಂದು ಸರಿಯಾದ, ನ್ಯಾಯ ಸಮ್ಮತವಾದ ಹಾಗೂ ಪೂರ್ವಾಗ್ರಹರಹಿತವಾದ ಅಭಿಪ್ರಾಯವು ಆಧುನಿಕ ಕಾಲದ ವರೆಗೆ ತೀರ ಅಪರೂಪ. ಅತ್ಯಂತ ಉತ್ತಮವಾದ ಆಕರಗಳನ್ನು ಹುಡುಕಿ ಅವುಗಳಲ್ಲಿ ಇತರ ಧರ್ಮಗಳ ಅಧ್ಯಯನ ಮಾಡುವ ಪ್ರಾಮಾಣಿಕವಾದ ಪ್ರಯತ್ನ ಆತನ ಬರಹಗಳಲ್ಲಿ ಕಾಣಿಸುತ್ತದೆ ಮತ್ತು ಮಾನವ ಶಾಸ್ತ್ರದಂತಹ ಜ್ಞಾನಶಾಖೆಯ ಅಧ್ಯಯನಕ್ಕೆ ಕಠಿಣವಾದ ಹಾಗೂ ನ್ಯಾಯಯುತವಾದ ಒಂದು ವಿಧಾನವನ್ನು ಕಂಡುಕೊಳ್ಳಲು ಅಷ್ಟೊಂದು ಜಾಗರೂಕತೆ, ಶ್ರಮ, ಕಾಳಜಿ ತುಂಬ ಅಪರೂಪ. ಇವೆಲ್ಲಕ್ಕಿಂತ ಮಿಗಿಲಾಗಿ, ಪಾಕಿಸ್ತಾನಿ ವಿದ್ವಾಂಸ ಹಕೀಮ್ ಮುಹಮ್ಮದ್ ಸಯೀದ್ ‘ಅಲ್‌ಬರೂನಿ: ಸ್ಮರಣ ಸಂಪುಟ’ದಲ್ಲಿ ಬರೂನಿ ಬಗ್ಗೆ ಬರೆದಿರುವ ಈ ಮಾತುಗಳನ್ನು ಗಮನಿಸಿ: ‘‘ಆತನಿಗೆ ಸತ್ಯದ ಕಾರಂಜಿಯಿಂದ ಬಹಳಷ್ಟನ್ನು ಕುಡಿಯುವ ಆಸೆ ಇತ್ತು; ಮತ್ತು ಮುಕ್ತವಾದ, ಸಾರ್ವಕಾಲಿಕವಾದ ಒಂದು ಮನಸ್ಸು ಇತ್ತು; ಸತ್ಯದ ಮೂಲ ಏನೇ ಇದ್ದಿರಲಿ ಅದನ್ನು ಶೋಧಿಸುವ ಮನೋಧರ್ಮವಿತ್ತು.’’

ಜ್ಞಾನವನ್ನು ಅಥವಾ ಇಲ್ಮ್‌ಅನ್ನು ಅರಸಲು ಪವಿತ್ರ ಕುರ್‌ಆನ್ ನೀಡುವ ಆದೇಶದ ಸಾಕಾರಮೂರ್ತಿ, ಅಲ್ ಬರೂನಿ. ಚೀನಾದಷ್ಟು ದೂರಕ್ಕೆ ಹೋಗಬೇಕಾಗಿ ಬಂದರೂ ಪರವಾಗಿಲ್ಲ, ಜ್ಞಾನವನ್ನು ಸಂಪಾದಿಸು ಎಂದು ಪ್ರವಾದಿಯವರು ಮುಸ್ಲಿಮರಿಗೆ ಉಪದೇಶಿಸಿದ್ದರು. ತನ್ನ ಹೇಳಿಕೆಗಳನ್ನು ಸಮರ್ಥಿಸಲು ಕುರ್‌ಆನ್‌ನ ಮಾತುಗಳನ್ನು ಉಲ್ಲೇಖಿಸುವಾಗ, ಬರೂನಿ ಮಾನವನ ಏಕತೆಯ ಬಗ್ಗೆ, ಒಗ್ಗಟ್ಟಿನ ಬಗ್ಗೆ ಧ್ಯಾನಿಸುತ್ತಾನೆ. ಅವನಿಗೆ ತಾನು ಮುಸ್ಲಿಮನಾಗಿ ಜನಿಸಿದ್ದರ ಬಗ್ಗೆ ಎಷ್ಟು ನೆಮ್ಮದಿ ಇತೋ ಅಷ್ಟೇ ತೀವ್ರವಾದ, ದೃಢವಾದ ನಂಬಿಕೆ ಆತನಿಗೆ ಇಸ್ಲಾಂನಲ್ಲಿದೆ. ಅಲ್ ಬರೂನಿಯ ದೇವರು ಎಲ್ಲ ವಸ್ತುಗಳ ಮತ್ತು ಎಲ್ಲ ಮನುಷ್ಯರ ಸೃಷ್ಟಿಕರ್ತ, ಆತನ ವಿದ್ವತ್ತಿಗಾಗಲಿ, ಅಧ್ಯಯನಕ್ಕಾಗಲಿ ಇಸ್ಲಾಂ ಧರ್ಮ ಅಡ್ಡಿಯಾಗಲಿಲ್ಲ ಮತ್ತು ಆತ ತನ್ನ ಮುಸ್ಲಿಮ್‌ತನದೊಂದಿಗೆ ರಾಜಿಮಾಡಿಕೊಳ್ಳಲೂ ಇಲ್ಲ. ಅಲ್ ಬರೂನಿ ಬರೆದ ಕಾಲದಲ್ಲಿ ವಿಶ್ವ ವ್ಯವಹಾರಗಳಲ್ಲಿ ಇಸ್ಲಾಂ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಆದರೂ ಆತನ ಬರವಣೆಗೆಗಳಲ್ಲಿ ತಾನು, ತನ್ನ ಧರ್ಮ ಮೇಲು ಎಂಬ ಹಿರಿಮೆಯಾಗಲಿ, ಇತರರ ಬಗ್ಗೆ, ಇತರ ಧರ್ಮಗಳ ಬಗ್ಗೆ ತಿರಸ್ಕಾರವಾಗಲಿ ಕಾಣಿಸುವುದಿಲ್ಲ.

ಇಸ್ಲಾಂನ ಪ್ರಥಮ ಮುಖ್ಯ ಮಾನವಶಾಸ್ತ್ರಜ್ಞನೆಂದು ಆತನಿಗೆ ನಾವು ಮನ್ನಣೆ ನೀಡಿದಲ್ಲಿ, ಅದು ಮುಸ್ಲಿಮ್ ಸಮಾಜಶಾಸ್ತ್ರಜ್ಞರಿಗೆ ಸೈದ್ಧಾಂತಿಕ ಹಾಗೂ ವಿಧಾನಾತ್ಮಕವಾದ ಬಾಗಿಲುಗಳನ್ನು ತೆರೆಯುತ್ತದೆ. ಲೂಯಿಡುಮೋಂಟ್ ಮತ್ತು ಆ್ಯಡ್ರಿಯನ್ ಮೇಯರ್‌ರಂತಹ ಯುರೋಪಿನ ಭಾರತೀಯ ವಿದ್ವಾಂಸರು ಜನಿಸುವ ಸುಮಾರು ಒಂದು ಸಾವಿರ ವರ್ಷಗಳ ಮೊದಲೇ, ಅಲ್ ಬರೂನಿ ಭಾರತದಲ್ಲಿರುವ ಜಾತಿ ಮತ್ತು ರಕ್ತಸಂಬಂಧಗಳ ಕುರಿತಾದ ಅಧ್ಯಯನ ನಡೆಸಿ, ಅದಕ್ಕೆ ಬೇಕಾದ ಒಂದು ವಿಧಾನವನ್ನು (ಮೆಥಡಾಲಜಿ) ಕೂಡ ಸೂಚಿಸಿದ್ದ.

ನನ್ನ ಅಧ್ಯಯನ ಮತ್ತು ಬರವಣಿಗೆಯಲ್ಲಿ, ನಾನು ಅಲ್ ಬರೂನಿಯ ವಿಧಾನವನ್ನು ಅನುಸರಿಸಿದ್ದೇನೆ. ವ್ಯಾಪಕವಾಗಿ ಪ್ರವಾಸಮಾಡಿ, ಟಿಪ್ಪಣಿಗಳು ಮಾಡಿಕೊಂಡು, ಜನರಿಂದ ಕಲಿಯುವುದಕ್ಕಾಗಿ ಅವರನ್ನು ಸಂದರ್ಶಿಸಿದ್ದೇನೆ. ನನ್ನ ಅಧ್ಯಯನದ ನಾಲ್ಕು ಸಂಪುಟಗಳು, ಅದರ ಇತ್ತೀಚಿನ ಸಂಪುಟವಾಗಿರುವ ‘ಜರ್ನಿ ಇನ್‌ಟು ಯುರೋಪ್: ಇಸ್ಲಾಂ, ಇಮಿಗ್ರೇಶನ್, ಆ್ಯಂಡ್ ಐಡೆಂಟಿಟಿ’ಯು ಇದೇ ಜಾಡಿನಲ್ಲಿದೆ. ಮುಸ್ಲಿಂ ಜಗತ್ತಿನಲ್ಲಿ ಬಿಕ್ಕಟ್ಟು, ಬಿಗಿತ, ಅಜ್ಞಾನ, ತಪ್ಪುತಿಳುವಳಿಕೆ ಇರುವ ಈ ಕಾಲದಲ್ಲಿ ನಾವು ಅಲ್ ಬರೂನಿಯಿಂದ ಕಲಿಯುವುದು ಸಾಕಷ್ಟು ಇದೆ.


ಕೃಪೆ: caravandaily.com

Writer - ಡಾ. ಅಕ್ಬರ್ ಎಸ್. ಅಹಮದ್

contributor

Editor - ಡಾ. ಅಕ್ಬರ್ ಎಸ್. ಅಹಮದ್

contributor

Similar News