ನೊವಾಕ್ ಜೊಕೊವಿಕ್‌ಗೆ ಬೌಟಿಸ್ಟಾ ಅಗುಟ್ ಶಾಕ್

Update: 2019-01-05 18:37 GMT

ಖತರ್, ಜ.5: ಸರ್ಬಿಯದ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಖತರ್ ಓಪನ್ ಟೆನಿಸ್ ಟೂರ್ನಿಯ ಸೆಮಿ ಫೈನಲ್‌ನಲ್ಲಿ ರಾಬರ್ಟೊ ಬೌಟಿಸ್ಟಾ ಅಗುಟ್ ವಿರುದ್ಧ ಆಘಾತಕಾರಿ ಸೋಲುಂಡಿದ್ದಾರೆ.

ಇಲ್ಲಿ ಶುಕ್ರವಾರ ಎರಡೂವರೆ ಗಂಟೆ ಕಾಲ ನಡೆದ ಪುರುಷರ ಸಿಂಗಲ್ಸ್‌ನ ಅಂತಿಮ-4ರ ಸುತ್ತಿನ ಪಂದ್ಯದಲ್ಲಿ ಜೊಕೊವಿಕ್ ವಿಶ್ವದ ನಂ.24ನೇ ಆಟಗಾರ ಅಗುಟ್ ವಿರುದ್ಧ 3-6, 7-6(8/6), 6-4 ಸೆಟ್‌ಗಳ ಅಂತರದಿಂದ ಸೋತಿದ್ದಾರೆ. 2 ಬಾರಿ ಖತರ್ ಓಪನ್ ಜಯಿಸಿರುವ ಜೊಕೊವಿಕ್‌ಗೆ ಈ ಋತುವಿನ ಮೊದಲ ಸೋಲು ಇದಾಗಿದೆ. ಸ್ಪೇನ್‌ನ ಅಗುಟ್ ಫೈನಲ್ ಪಂದ್ಯದಲ್ಲಿ ಝೆಕ್ ಗಣರಾಜ್ಯದ ಥಾಮಸ್ ಬೆರ್ಡಿಕ್‌ರನ್ನು ಎದುರಿಸಲಿದ್ದಾರೆ. ಅಗುಟ್ ವೃತ್ತಿಜೀವನದಲ್ಲಿ ಎರಡನೇ ಬಾರಿ ಜೊಕೊವಿಕ್‌ರನ್ನು ಸೋಲಿಸಿದ್ದಾರೆ. ಎರಡೂ ಬಾರಿ ಸೆಮಿ ಫೈನಲ್ ಪಂದ್ಯದಲ್ಲೇ ಜಯ ದಾಖಲಿಸಿದ್ದಾರೆ.

2016ರ ಅಕ್ಟೋಬರ್‌ನಲ್ಲಿ ಶಾಂಘೈನಲ್ಲಿ ಜೊಕೊವಿಕ್‌ಗೆ ಅಗುಟ್ ಮೊದಲ ಬಾರಿ ಸೋಲುಣಿಸಿದ್ದರು. ಆಗ ಜೊಕೊವಿಕ್ ವಿಶ್ವದ ನಂ.1 ಆಟಗಾರನಾಗಿದ್ದರು.

ಬೆರ್ಡಿಕ್ ಫೈನಲ್‌ಗೆ: ಮತ್ತೊಂದು ಸೆಮಿ ಫೈನಲ್‌ನಲ್ಲಿ ಇಟಲಿಯ ಮಾರ್ಕೊ ಸೆಚಿನಾಟೊ ವಿರುದ್ಧ 7-6(8/6), 6-3 ಅಂತರದಿಂದ ಜಯ ಸಾಧಿಸಿರುವ ಥಾಮಸ್ ಬೆರ್ಡಿಕ್ ಎರಡನೇ ಬಾರಿ ದೋಹಾದಲ್ಲಿ ಫೈನಲ್ ತಲುಪಿದ್ದಾರೆ.

ಈಗ ವಿಶ್ವದ ನಂ.73ನೇ ರ್ಯಾಂಕಿನಲ್ಲಿರುವ ಬೆರ್ಡಿಕ್ 2015ರಲ್ಲಿ ಕೊನೆಯ ಬಾರಿ ಖತರ್ ಓಪನ್‌ನಲ್ಲಿ ಫೈನಲ್‌ಗೆ ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News