ಅಪರೂಪದ ವೆದ್ಯ ಸಾಹಿತಿ ಡಾ. ಲೀಲಾವತಿ ದೇವದಾಸ್

Update: 2019-01-05 18:55 GMT

ಎಷ್ಟೊಂದು ಪ್ರಶಸ್ತಿಗಳು ಲೀಲಾವತಿಯವರನ್ನು ಅರಸಿ ಬಂದರೂ ಅವರ ಸರಳ ಹಾಗೂ ಸಜ್ಜನಿಕೆಯ, ಆಪ್ತ ಮತ್ತು ಜೀವನೋತ್ಸಾಹದ ಮಾದರಿಗಳು ವಿಶಿಷ್ಟ. 87ರ ವಯಸ್ಸಿನಲ್ಲೂ ಕ್ರೈಸ್ತರ ಬಹುತೇಕ ಎಲ್ಲ ಕಾರ್ಯಕ್ರಮಗಳಲ್ಲಿ, ವೈದ್ಯಕೀಯಕ್ಕೆ ಸಂಬಂಧಿಸಿದ ವಿಚಾರ ಸಂಕಿರಣಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಡಿಸೆಂಬರ್ 17ರಂದು ತಮ್ಮ ಜೀವನೋತ್ಸಾಹದ ತುಂತುರುಗಳನ್ನು ತಮ್ಮ ಆಪ್ತವಲಯಕ್ಕೆ ಸಿಂಚನ ಮಾಡಿ ಹೊರಟು ಹೋದರು.

ಕರ್ನಾಟಕ ಕಂಡ ಅಪರೂಪದ ವೈದ್ಯ ಸಾಹಿತಿ ಡಾ. ಲೀಲಾವತಿ ದೇವದಾಸ್ ಕನ್ನಡ ಎಂ.ಎ, ಜರ್ಮನ್ ಭಾಷೆ ಮತ್ತು ವೈದ್ಯಶಾಸ್ತ್ರದ ಅಪರೂಪ ಸಂಗಮದ ವ್ಯಕ್ತಿತ್ವ. ವೈದ್ಯ ವಿಜ್ಞಾನ, ಕನ್ನಡ ಸಾಹಿತ್ಯ ಮತ್ತು ವೈದ್ಯಶಾಸ್ತ್ರ - ಈ ಮೂರು ವಿಚಾರಗಳ ಅಪೂರ್ವ ಸಂಗಮದ ಪರಿಣಾಮವಾಗಿ ಡಾ. ಲೀಲಾವತಿ ದೇವದಾಸ್ ಅವರ ಸಾಧನೆ ಅಪರೂಪದ್ದೇ ಆಗಿದೆ. ಮುಂಬೈ ಮತ್ತು ಮೈಸೂರು ಜಿಲ್ಲೆಗಳಲ್ಲಿ ಕುಷ್ಠರೋಗ ನಿವಾರಣೆಯ ಅಭಿಯಾನದೊಂದಿಗೆ ಇವರ ವೈದ್ಯ ಸೇವೆ ಪ್ರಾರಂಭವಾಗುತ್ತದೆ. ಕರ್ನಾಟಕ ಸರಕಾರದಲ್ಲಿ ಅಸಿಸ್ಟೆಂಟ್ ಸರ್ಜನ್, ಸರ್ಜನ್ ವಿಭಾಗೀಯ ಜಂಟಿ ನಿರ್ದೇಶಕರು ಮತ್ತು ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಗ್ರಾಮಾಂತರ ಪ್ರದೇಶಗಳಲ್ಲಿ ನೂರಾರು ಆರೋಗ್ಯ ಶಿಬಿರಗಳು, ಹತ್ತಾರು ರೇಡಿಯೋ ಮತ್ತು ದೂರದರ್ಶನ ಕಾರ್ಯಕ್ರಮಗಳು, ಹಲವು ಲೇಖನ, ಪುಸ್ತಕ, ಕಿರುಹೊತ್ತಿಗೆಗಳ ಮೂಲಕ ನಿರ್ಲಕ್ಷಿತ ಹೈದರಾಬಾದ್ ಕರ್ನಾಟಕ ಭಾಗದ ಗ್ರಾಮಾಂತರ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಹಲವು ಸೃಜನಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು.

ಆರು ವೈದ್ಯಕೀಯ ಕಾಲೇಜುಗಳಲ್ಲಿ ಪ್ರೊಫೆಸರ್ ಮತ್ತು ವಿಭಾಗ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ ಡಾ. ಲೀಲಾವತಿ ದೇವದಾಸ್ ತಮ್ಮ ದಕ್ಷತೆ ಮತ್ತು ಪ್ರಾಮಾಣಿಕತೆಯ ಕಾರಣಕ್ಕಾಗಿ ದೂರದ ಜಿಲ್ಲೆಗಳಲ್ಲೇ ಹೆಚ್ಚು ಸೇವೆ ಸಲ್ಲಿಸಿದವರು. ಕ್ರೈಸ್ತ ಧಾರ್ಮಿಕ ತತ್ವಗಳನ್ನು ಅಕ್ಷರಶಃ ಪಾಲಿಸುತ್ತಿದ್ದ ಡಾ. ಲೀಲಾವತಿ ಪ್ರಾಮಾಣಿಕತೆಯೊಂದಿಗೆ ಎಂದೂ ರಾಜಿ ಮಾಡಿಕೊಂಡವರಲ್ಲ. ತಾಯ್ತನದ ಹೃದಯ, ಬಡಜನರ ಕಾಳಜಿ, ಹೆಣ್ಣು ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಆಸಕ್ತಿಯಿಂದ ಅವಿರತವಾಗಿ ದುಡಿದಿದ್ದಾರೆ. ಆರೋಗ್ಯ ಶಿಬಿರಗಳು, ಅಭಿಯಾನಗಳನ್ನು ಆಕರ್ಷವಾಗಿ ರೂಪಿಸಿ ಗ್ರಾಮಾಂತರ ಪ್ರದೇಶಗಳ ಸಮೂಹ ಆರೋಗ್ಯ ಸೇವೆಗಳನ್ನು ನಿರ್ವಂಚನೆಯಿಂದ ಮಾಡುವ ಮಾದರಿಗಳನ್ನು ವೈದ್ಯರಿಗೆ ನೀಡಿದ ಧೀಮಂತ ಮಹಿಳೆ ಡಾ. ಲೀಲಾವತಿ ದೇವದಾಸ್.

ವೈದ್ಯರಾಗಿ ಆರು ಮೆಡಿಕಲ್ ಕಾಲೇಜುಗಳಲ್ಲಿ ಪ್ರೊಫೆಸರ್ ಮತ್ತು ಇಲಾಖೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ವೈದ್ಯ ಜ್ಞಾನವನ್ನು ಸೃಜನಶೀಲವಾಗಿ ಅಕ್ಷರ ರೂಪದ ಮೂಲಕ ಜನರಿಗೆ ತಲುಪಿಸಬೇಕೆಂಬ ಮಹತ್ವಾಕಾಂಕ್ಷೆಯಿಂದಲೇ ಅವರು ಕನ್ನಡ ಎಂ.ಎ. ಪದವಿಯನ್ನು ಪಡೆದರು. ಸ್ತ್ರೀಯರ ಆರೋಗ್ಯ, ಮಕ್ಕಳ ಆರೋಗ್ಯ, ಮನೆ ಮದ್ದು, ವೃದ್ಧಾಪ್ಯವನ್ನು ನಿಭಾಯಿಸುವ ವಿಧಾನಗಳನ್ನು ಕುರಿತು ಹಲವಾರು ಕೈಪಿಡಿಗಳನ್ನು ರಚಿಸಿದ್ದಾರೆ. ಎಲ್ಲ ಜನರಿಗೂ ಆರೋಗ್ಯದ ಜಾಗೃತಿ ತಲುಪಬೇಕೆಂದು ಹಂಬಲಿಸಿದ ಡಾ. ಲೀಲಾವತಿ ರೇಡಿಯೋ, ದೂರದರ್ಶನಗಳಲ್ಲಿ ನಾಟಕ, ಸಂವಾದಗಳ ಮೂಲಕ ವಿಶೇಷವಾಗಿ ಗ್ರಾಮಾಂತರ ಮತ್ತು ಅನಕ್ಷರಸ್ಥ ಜನಸಮುದಾಯಗಳನ್ನು ತಲುಪಲು ದುಡಿದರು.

ಪ್ರವಾಸ, ವೈದ್ಯಸಾಹಿತ್ಯ ಮತ್ತು ಆತ್ಮಕಥನವನ್ನು ಒಳಗೊಂಡಂತೆ ಒಟ್ಟು 60 ಕೃತಿಗಳನ್ನು ರಚಿಸಿದ್ದಾರೆ. ದೇಶ ವಿದೇಶಗಳನ್ನು ಸುತ್ತಿ ಜ್ಞಾನದ ಕೊಡುಕೊಳ್ಳುವಿಕೆಯ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಕರ್ನಾಟಕದ ಮೊದಲ ವೈದ್ಯ ಸಾಹಿತಿ ಎಂದೇ ಖ್ಯಾತರಾದ ಡಾ. ಲೀಲಾವತಿ ದೇವದಾಸ್ ಅವರಿಗೆ 3 ಬಾರಿ ಕರ್ನಾಟಕ ರಾಜ್ಯ ಸರಕಾರದ ಆರೋಗ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಕನ್ನಡ ಪ್ರಾಧಿಕಾರದ ಎರಡು ಪ್ರಶಸ್ತಿಗಳು, ಗೊರೂರು ಸಾಹಿತ್ಯ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಕನ್ನಡ ವೈದ್ಯ ಸಾಹಿತ್ಯ ರತ್ನ ಪ್ರಶಸ್ತಿಗಳು ಸಂದಿವೆ. 2017ರ ಫಾದರ್ ಚಸರಾ ಸಂಸ್ಕೃತಿ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ನೀಡಿದೆ, 2017ರ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಡಾ. ಲೀಲಾವತಿ ದೇವದಾಸ್ ವೈದ್ಯ ವೃತ್ತಿ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಅಪಾರವಾದ ಸೇವೆಗೆ ಈ ಪ್ರಶಸ್ತಿಗಳು ಕಡಿಮೆಯೇ. ಎಷ್ಟೊಂದು ಪ್ರಶಸ್ತಿಗಳು ಲೀಲಾವತಿಯವರನ್ನು ಅರಸಿ ಬಂದರೂ ಅವರ ಸರಳ ಹಾಗೂ ಸಜ್ಜನಿಕೆಯ, ಆಪ್ತ ಮತ್ತು ಜೀವನೋತ್ಸಾಹದ ಮಾದರಿಗಳು ವಿಶಿಷ್ಟ. 87ರ ವಯಸ್ಸಿನಲ್ಲೂ ಕ್ರೈಸ್ತರ ಬಹುತೇಕ ಎಲ್ಲ ಕಾರ್ಯಕ್ರಮಗಳಲ್ಲಿ, ವೈದ್ಯಕೀಯಕ್ಕೆ ಸಂಬಂಧಿಸಿದ ವಿಚಾರ ಸಂಕಿರಣಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಡಿಸೆಂಬರ್ 17ರಂದು ತಮ್ಮ ಜೀವನೋತ್ಸಾಹದ ತುಂತುರುಗಳನ್ನು ತಮ್ಮ ಆಪ್ತವಲಯಕ್ಕೆ ಸಿಂಚನ ಮಾಡಿ ಹೊರಟು ಹೋದರು. ಆದರೆ ವೈದ್ಯರಾಗಿ ನಿರ್ಲಕ್ಷಿತ ಸಮುದಾಯಗಳಿಗೆ ಆರೋಗ್ಯ ಭಾಗ್ಯ ಸಿಗಬೇಕೆಂದು ನಡೆಸಿದ ಅವರ ಜೀವನ ಹೋರಾಟದ ಹೆಜ್ಜೆಗಳು ಅಚ್ಚಳಿಯದೆ ಉಳಿಯಲಿದೆ.

Writer - ಡಾ. ರೀಟಾ ರೀನಿ

contributor

Editor - ಡಾ. ರೀಟಾ ರೀನಿ

contributor

Similar News