ಭಾರತದ ಆರ್ಥಿಕತೆ ಮತ್ತು ವಿಶೇಷ ವಲಯಗಳು

Update: 2019-01-05 19:02 GMT

ಈಪುಸ್ತಕವು ಜಾಗತೀಕರಣವೆಂಬ ಕಾಣದ ಕೈಗಳ ಮೂಲ ಹುಡುಕುವ ಪ್ರಯತ್ನವಾಗಿದೆ. ಜಾಗತೀಕರಣ, ಉದಾರೀಕರಣ ಖಾಸಗೀಕರಣ ಮತ್ತು ಹೊಸ ಆರ್ಥಿಕ ನೀತಿಗಳು ಎಂಬ ಆಕರ್ಷಕ ಹೆಸರುಗಳ ಆಳದಲ್ಲಿ ಅಡಗಿರುವ ಕಠೋರ ಸತ್ಯಗಳನ್ನು ಪುಸ್ತಕದ ಲೇಖಕ ಡಾ.ಆರ್.ವಿ. ಚಂದ್ರಶೇಖರ್‌ರವರು ಅನಾವರಣ ಮಾಡುವ ಪ್ರಯತ್ನವನ್ನು ನಡೆಸಿದ್ದಾರೆ. ಭಾರತದಲ್ಲಿ ಇತ್ತೀಚೆಗೆ ಅಭಿವೃದ್ಧಿಯನ್ನು ವಿವಿಧ ದೃಷ್ಟಿಕೋನಗಳಿಂದ ಚರ್ಚಿಸಲಾಗುತ್ತಿದೆ. ಸಮಾಜ ಶಾಸ್ತ್ರೀಯ ದೃಷ್ಟಿಯಿಂದಲೂ ವಿಶ್ಲೇಷಿಸಲಾಗುತ್ತದೆ. ಗ್ರಾಮೀಣ ಅಭಿವೃದ್ಧಿ, ಬುಡಕಟ್ಟು ಅಭಿವೃದ್ಧಿ, ಮಹಿಳಾ ಅಭಿವೃದ್ಧಿ ಇವುಗಳು ಇಂದು ಚರ್ಚಿತವಾಗುತ್ತಿರುವ ವಿಷಯಗಳು. ಆರ್ಥಿಕ ಅಭಿವೃದ್ಧಿಯನ್ನು ಕೃಷಿಯಿಂದ ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಸರಕಾರಗಳು ಕೈಗಾರಿಕೆಗಳಿಂದ ಇದು ಸಾಧ್ಯವೆಂದು ಇತ್ತೀಚೆಗೆ ಕೆಲವು ನೀತಿಗಳನ್ನು ರೂಪಿಸಿದೆ. ಈ ರೀತಿಯ ಸರಕಾರದ ನೀತಿಗಳಲ್ಲಿ ವಿಶೇಷ ಆರ್ಥಿಕ ವಲಯಗಳಿಗೆ ಸಂಬಂಧಿಸಿದ ನೀತಿಯು ಒಂದು ಪ್ರಮುಖವಾದುದಾಗಿದೆ. ವಿಶೇಷ ಆರ್ಥಿಕ ವಲಯಗಳಿಂದ ಕೈಗಾರಿಕೆಗಳು ಸ್ಥಾಪನೆಯಾಗಿ ಸ್ಥಳೀಯರಿಗೆ ಉದ್ಯೋಗದ ಅವಕಾಶವನ್ನು ಒದಗಿಸುತ್ತವೆ ಎಂಬ ನಂಬಿಕೆಯಿಂದ ಸದರಿ ಯೋಜನೆಯನ್ನು ರೂಪಿಸಲಾಗುತ್ತಿದೆ. ಆದರೆ ತಲೆತಲಾಂತರದಿಂದ ಭಾರತೀಯ ಕೃಷಿಕನು ಕೃಷಿಯನ್ನೇ ನಂಬಿಕೊಂಡು ತನ್ನ ಸುಸ್ಥಿತ ಅಭಿವೃದ್ಧಿಯನ್ನು ದೇಶೀಯ ಮಾದರಿಯಲ್ಲಿ ನಡೆಸಿಕೊಂಡು ಬರುತ್ತಿರುವುದನ್ನು ನೋಡಬಹುದಾಗಿದೆ. ಇದರ ಪರಿಣಾಮವಾಗಿ ಭಾರತೀಯ ಕೃಷಿಕನು ಸ್ವಾವಲಂಬಿಯಾಗಿ ಮಿತವಾದ ಆರ್ಥಿಕ ಜೀವನ ನಡೆಸುತ್ತಿದ್ದನು. ಆದರೆ ಇಂದು ವಿಶೇಷ ಆರ್ಥಿಕ ವಲಯಗಳಿಂದಾಗಿ ರೈತ ಸಮುದಾಯ ಬಿಕ್ಕಟ್ಟಿಗೆ ಸಿಲುಕಿ ಹಲವಾರು ಸಮಸ್ಯೆಗಳಿಂದ ಬಳಲುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಅಧ್ಯಯನವು ಸಮಾಜಶಾಸ್ತ್ರೀಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.

ಲೇಖಕರು ವಿಶೇಷ ಆರ್ಥಿಕ ವಲಯ ಕಾಯ್ದೆಯು ರೂಪುಗೊಂಡಿರುವ ಇತಿಹಾಸ, ರಾಜಕೀಯ ವ್ಯವಸ್ಥೆ ಮತ್ತು ಸರಕಾರದ ರಚನೆ, ಅಭಿವೃದ್ಧಿಗಾಗಿ ಯೋಜನೆ ರೂಪಿಸುವುದು ಮುಂತಾದ ಅಂಶಗಳನ್ನು ಪೀಠಿಕೆ ರೂಪದಲ್ಲಿ ಚರ್ಚಿಸಿದ್ದಾರೆ. ಅಲ್ಲದೆ ಇದೇ ಭಾಗದಲ್ಲಿ ಅಧ್ಯಯನದ ಉದ್ದೇಶಗಳು, ಅಧ್ಯಯನದ ಕ್ಷೇತ್ರ, ಸಂಶೋಧನಾ ವಿಧಾನ ಅಧ್ಯಯನದ ಮಹತ್ವ, ಅಧ್ಯಯನದ ವರ್ಗೀಕರಣಗಳನ್ನು ಒಳಗೊಂಡಿರುವಂತೆ ಬರೆದಿದ್ದಾರೆ. ಈ ವಿಶೇಷ ಆರ್ಥಿಕ ವಲಯಗಳಿಗೆ ಸಂಬಂಧಪಟ್ಟ ಪುಸ್ತಕ ಮತ್ತು ಲೇಖನಗಳನ್ನ ಪರಾಮರ್ಶನ ಮಾಡಲಾಗಿದೆ. ಸದರಿ ಸಾಹಿತ್ಯ ಪರಾಮರ್ಶನವು ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಇಲ್ಲಿ ಪ್ರಸಿದ್ಧ ಸಮಾಜ ಶಾಸ್ತ್ರಜ್ಞರ, ಬುದ್ಧಿ ಜೀವಿಗಳ, ಪ್ರಗತಿಪರ ಮತ್ತು ಮೇಧಾ ಪಾಟ್ಕರ್‌ರಂತ ಹೋರಾಟಗಾರ್ತಿಯರ ಲೇಖನ ಮತ್ತು ಪುಸ್ತಕಗಳನ್ನು ಪರಾಮರ್ಶನ ಮಾಡಿರುವುದು, ಅಧ್ಯಯನವು ಚೆನ್ನಾಗಿ ಮೂಡಿಬರಲು ಕಾರಣವಾಗಿದೆ.

 ಲೇಖಕರು ಭೂಮಿ ಮತ್ತು ವಸಾಹತುಶಾಹಿಯ ಚರಿತ್ರೆಯ ಬಗ್ಗೆ ವಿವರಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ವಸಾಹತುಶಾಹಿ ಮೂಡಿಬಂದ ರೀತಿ ಮತ್ತು ಅದರ ಆರ್ಥಿಕ ಪರಿಣಾಮಗಳನ್ನು ಇಲ್ಲಿ ಚರ್ಚಿಸಲಾಗಿದೆ. ಅಲ್ಲದೆ, ವಸಾಹತುಶಾಹಿಯ ಪೈಪೋಟಿ, 20ನೇ ಶತಮಾನದಲ್ಲಿ ಪೂರ್ವ ಏಷ್ಯದಲ್ಲಿ ವಸಾಹತುಶಾಹಿ, ಭಾರತ ಮತ್ತು ವಸಾಹತುಶಾಹಿ ಒಡೆತನದ ಚರಿತ್ರೆ ಹಾಗೂ ನವವಸಾಹತೀಕರಣದಿಂದ ನವವಸಾಹತು ವ್ಯವಸ್ಥೆಯಡೆಗೆ ಎಂಬ ಶೀರ್ಷಿಕೆಯಡಿಯಲ್ಲಿ ವಸಾಹತುಶಾಹಿಯ ಉಗಮ, ಬೆಳವಣಿಗೆ, ಉದ್ದೇಶ ಮತ್ತು ಸ್ವಾತಂತ್ರಾ ನಂತರದಲ್ಲಿ ವಸಾಹತುಶಾಹಿಯ ಪ್ರಕ್ರಿಯೆಗಳನ್ನು ಚರ್ಚಿಸಲಾಗಿದೆ. ಜೊತೆಗೆ ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣಗಳು ತೀವ್ರಗೊಂಡಿರುವ ಸಂದರ್ಭದಲ್ಲಿ ವಿಶೇಷ ಆರ್ಥಿಕವಲಯಗಳ ಹಿನ್ನೆಲೆಯಲ್ಲಿ ವಸಾಹತುಶಾಹಿ ಮರು ಸ್ಥಾಪನೆಯಾಗುತ್ತಿರುವ ಪ್ರಕ್ರಿಯೆಯನ್ನು ಪುಸ್ತಕದಲ್ಲಿ ವಿವರಿಸಲಾಗಿದೆ.

ಭಾರತದಲ್ಲಿ ಮತ್ತು ಕರ್ನಾಟಕದಲ್ಲಿ ವಿಶೇಷ ಆರ್ಥಿಕ ವಲಯಗಳ ಉಗಮ ಮತ್ತು ಬೆಳವಣಿಗೆಯನ್ನು ವಿವರಿಸಲಾಗಿದೆ. ಅಲ್ಲದೆ ತುಲನಾತ್ಮಕವಾಗಿಯೂ ಸಹ ನೋಡಲಾಗಿದೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ಒಟ್ಟು 76 ಆರ್ಥಿಕ ವಲಯಗಳನ್ನು ಸರಕಾರಕ್ಕೆ ಬದಲಾಗಿ ಬಂಡವಾಳಶಾಹಿಗಳು ಗುರುತಿಸಿದ್ದಾರೆ ಎನ್ನುವ ಮಾಹಿತಿ ತುಂಬಾ ಮಹತ್ವವಾದದ್ದು. ಇದೇ ಬಂಡವಾಳಶಾಹಿಗಳು ಸರಕಾರದ ಮೇಲೆ ಒತ್ತಡ ತಂದು ಕೆಐಎಡಿಬಿ ಮೂಲಕ ಭೂಮಿಯನ್ನು ಪಡೆದು ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಬಳಸುವ ವ್ಯವಸ್ಥಿತ ಹುನ್ನಾರವನ್ನು ಲೇಖಕರು ಚೆನ್ನಾಗಿ ವಿವರಿಸಿರುವುದು ಸಮಾಜಶಾಸ್ತ್ರೀಯ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ. ಭಾರತದ ವಿಶೇಷ ಆರ್ಥಿಕ ವಲಯಗಳ ಕಾನೂನುಗಳು ಮತ್ತು ನೀತಿಗಳನ್ನ ಒಳಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ವಿಶೇಷ ಆರ್ಥಿಕವಲಯ ಕಾಯ್ದೆ 2005 ಮತ್ತು ವಿಶೇಷ ಆರ್ಥಿಕ ವಲಯ ನೀತಿ 2006 ಮತ್ತು ಇತರ ಭೂಸ್ವಾಧೀನ ಕಾಯ್ದೆಗಳನ್ನು ವಿಶ್ಲೇಷಿಸಿ ವಿವರಿಸಲಾಗಿದೆ. ಕರ್ನಾಟಕದಲ್ಲಿ ವಿಶೇಷ ಆರ್ಥಿಕ ವಲಯ ನೀತಿ 2009 ಅಸ್ತಿತ್ವಕ್ಕೆ ಬಂದ ವಿಧಾನವನ್ನು ವಿವರಿಸಲಾಗಿದೆ. ಅಲ್ಲದೆ ಇದೇ ಭಾಗದಲ್ಲಿ ವಿಶೇಷ ಆರ್ಥಿಕ ವಲಯಗಳ ಹಂಚಿಕೆ ಮತ್ತು ಕ್ಷೇತ್ರಗಳ ಬಗ್ಗೆ ವಿವರಣಾತ್ಮಕವಾಗಿ ಪುಸ್ತಕದಲ್ಲಿ ಚರ್ಚಿಸಲಾಗಿದೆ.

ನಮ್ಮ ಭಾಷೆಯಲ್ಲಿ ಈ ಬಗೆಯ ಮಾಹಿತಿ ಒದಗಿಸುತ್ತಾ ಜಾಗತೀಕರಣವು ಹೇಗೆ ತನ್ನ ಅಂತರಾಳದಲ್ಲಿ ಸಾಮ್ರಾಜ್ಯಶಾಹಿ ಗುಣ ಹೊಂದಿದೆ ಎಂಬುದರ ಬಗ್ಗೆ ಮುಂದುವರಿಯುತ್ತಿರುವ ದೇಶಗಳ ನಡುವಿನ ಅಪವಿತ್ರ ಮೈತ್ರಿಯ ಕರಾಳ ಸ್ವರೂಪವನ್ನು ಜನರ ಮುಂದಿಟ್ಟಿರುವ ಚಂದ್ರಶೇಖರ್‌ರವರ ಪ್ರಯತ್ನ ಶ್ಲಾಘನೀಯ. ತಮಗೂ ಇಲ್ಲಿನ ಜನಗಳ ಬದುಕಿಗೂ ಸಂಬಂಧವಿಲ್ಲವೆಂದು ಭ್ರಮೆಗಳಲ್ಲಿ ತೇಲಾಡುತ್ತಿರುವ ಜನರಿಗೆ ಎಚ್ಚರಿಸುವಂತಹ ಇಂತಹ ಪ್ರಯತ್ನಗಳು ಹೆಚ್ಚಾಗಬೇಕು. ಸಮಕಾಲೀನ ಬೆಳವಣಿಗೆಗಳಿಂದಾಗುವ ಪರಿಣಾಮಗಳ ಬಗ್ಗೆ, ಜ್ಞಾನ ಸೃಷ್ಟಿ ಕ್ರಿಯೆಯಲ್ಲಿ ಚಂದ್ರಶೇಖರ್‌ರವರು ಪಾಲುದಾರರಾಗಲಿ ಎಂದು ಆಶಿಸುತ್ತೇನೆ.

Writer - ಪ್ರೊ. ಎಂ. ಗುರುಲಿಂಗಯ್ಯ

contributor

Editor - ಪ್ರೊ. ಎಂ. ಗುರುಲಿಂಗಯ್ಯ

contributor

Similar News