ಅಕ್ರಮಗಳ ತಾಣವಾಗಿ ಪರಿವರ್ತನೆಗೊಂಡ ಅಕ್ಕಯ್ಯಮ್ಮನ ಬೆಟ್ಟ

Update: 2019-01-06 13:12 GMT

ಬೆಂಗಳೂರು, ಜ.6: ನಗರದ ಕೆಂಪೇಗೌಡ ಏರ್ಪೋರ್ಟ್‌ಗೆ ಹೋಗುವ ಹೆದ್ದಾರಿ ಪಕ್ಕದ ಅಕ್ಕಯ್ಯಮ್ಮನ ಬೆಟ್ಟ ಇದೀಗ ಪುಂಡರ ತಾಣವಾಗಿ ಬದಲಾಗಿರುವುದು ಸಾರ್ವಜನಿಕರು ಹಾಗೂ ಬೆಟ್ಟಕ್ಕೆ ಬರುವ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರ ಉತ್ತರ ತಾಲೂಕಿನ ಚಿಕ್ಕಜಾಲ ಗ್ರಾಮಕ್ಕೆ ಹೊಂದಿಕೊಂಡಿರುವ ಈ ಬೆಟ್ಟ ಪುರಾತನ ಕಾಲದಿಂದಲೂ ಉತ್ತನಹಳ್ಳಿ ಅಕ್ಕಯ್ಯಮ್ಮನ ಬೆಟ್ಟ ಎಂದೇ ಪ್ರಸಿದ್ಧಿ. ಆದರೆ ಇತ್ತೀಚಿಗೆ ಕೆಲ ವರ್ಷಗಳಿಂದ ಈ ಬೆಟ್ಟ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಬೆಟ್ಟದಲ್ಲಿ ಹಗಲು ಹೊತ್ತಲ್ಲಿ ಕಾಲೇಜು ಯುವಕ ಯುವತಿಯರು ಸಲ್ಲಾಪಕ್ಕಿಳಿದರೆ, ರಾತ್ರಿ ಹೊತ್ತು ಕುಡುಕರ, ಪುಂಡರ ಅಡ್ಡೆಯಾಗುತ್ತಿದೆ.

ಕೆಂಪೇಗೌಡ ಏರ್ಪೋರ್ಟ್ ಆರಂಭವಾದ ನಂತರ ಬೆಂಗಳೂರು ಉತ್ತರ ತಾಲೂಕು ಸಂಪೂರ್ಣ ಬದಲಾಗಿದೆ. ಅದರಲ್ಲೂ ಏರ್ಪೋರ್ಟ್ ಗೆ ಸಂಪರ್ಕ ಕಲ್ಪಿಸುವ ಬೆಂಗಳೂರು ಬಳ್ಳಾರಿ ಹೆದ್ದಾರಿ ಪಕ್ಕದ ಪ್ರದೇಶಗಳು ಅತ್ಯಂತ ವೇಗದಲ್ಲಿ ಬೆಳೆಯುತ್ತಿವೆ, ಹೀಗಾಗಿಯೇ ಈ ಪ್ರದೇಶಗಳಲ್ಲಿ ಎಂಜಿನಿಯರಿಂಗ್ ಕಾಲೇಜುಗಳು ಕಿ.ಮೀ ಗೆ ಒಂದರಂತೆ ತಲೆ ಎತ್ತಿವೆ. ಆದರೆ ಇಲ್ಲಿಗೆ ಕಲಿಯಲು ಬರುವ ಒಂದಿಷ್ಟು ವಿದ್ಯಾರ್ಥಿಗಳು ಕಾಲೇಜಿಗಿಂತ ಬೆಟ್ಟಕ್ಕೆ ಹೋಗುವದಕ್ಕೇ ಹೆಚ್ಚು ಇಷ್ಟಪಡುತ್ತಿದ್ದಾರೆ.

ಕಾಲೇಜುಗಳು ಆರಂಭವಾಗುವ ಮುನ್ನ ಬೆಟ್ಟಕ್ಕೆ ಸಾಮಾನ್ಯವಾಗಿ ಭಕ್ತರನ್ನು ಹೊರತುಪಡಿಸಿ ಬೇರಾರೂ ಬರುತ್ತಿರಲಿಲ್ಲ. ಆದರೆ ಕಾಲೇಜುಗಳು ಆರಂಭವಾದ ನಂತರ ಇಲ್ಲಿಗೆ ಪುಂಡ ವಿದ್ಯಾರ್ಥಿಗಳ ದಂಡೇ ಆಗಮಿಸುತ್ತಿದ್ದು, ಬೆಟ್ಟದ ಮೇಲಿರುವ ಬಂಡೆಗಳ ಮರೆಯಲ್ಲಿ ಕುಳಿತು ಸರಸ ಸಲ್ಲಾಪಕ್ಕೆ ಇಳಿಯುತ್ತಿದ್ದಾರೆ. ಮತ್ತೆ ಕೆಲವು ಪುಂಡರು ಡ್ರಗ್ಸ್ ಸೇವಿಸಿ ಬೆಟ್ಟಕ್ಕೆ ಬರುವ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುವ ಘಟನೆಗಳೂ ಹೆಚ್ಚುತ್ತಿವೆ. ಈ ಅನುಚಿತ ಹಾಗೂ ಅನೈತಿಕ ನಡವಳಿಕೆ ಬೆಟ್ಟಕ್ಕೆ ಬರುವ ಭಕ್ತರನ್ನು ಸಂಕಷ್ಟಕ್ಕೀಡು ಮಾಡಿದೆ.

ಇಲ್ಲಿರುವ ಎಂಜಿನಿಯರಿಂಗ್ ಹಾಗೂ ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಶೇಕಡಾ 70 ರಷ್ಟು ಹೊರಗಿನವರೇ ಆಗಿದ್ದಾರೆ. ಹೊರ ರಾಜ್ಯ ಹಾಗೂ ವಿದೇಶಗಳ ವಿದ್ಯಾರ್ಥಿಗಳ ಸಂಖ್ಯೆಯೂ ಗಣನೀಯವಾಗಿದೆ. ಪೋಷಕರಿಂದ ದೂರವಿರುವ ಇವರ ಮೇಲೆ ಯಾರ ನಿಯಂತ್ರಣವೂ ಇಲ್ಲವಾಗಿದೆ. ಪರಿಣಾಮ ಕಾಲೇಜಿನಲ್ಲಿ ಓದಿ ಬದುಕು ಕಟ್ಟಿಕೊಳ್ಳಬೇಕಿರುವ ವಿದ್ಯಾರ್ಥಿಗಳು ಬಂಡೆ ಮರೆಯಲ್ಲಿ ಪ್ರೇಮಿಯೊಂದಿಗೆ ಕಾಲ ತಳ್ಳುತ್ತಿದ್ದಾರೆ.

ಹಗಲಲ್ಲಿ ಪ್ರೇಮಿಗಳ ಸಲ್ಲಾಪದಿಂದ ನಲುಗುವ ಬೆಟ್ಟ ಸಂಜೆಯಾಗುತ್ತಲೇ ಬೆಟ್ಟ ಕುಡುಕರ ಅಡ್ಡೆಯಾಗಿ ಮಾರ್ಪಾಡಾಗುತ್ತದೆ. ಸುತ್ತಮುತ್ತಲ ಪುಂಡರು ಮದ್ಯದ ಬಾಟಲಿಗಳು ಹಾಗೂ ಆಹಾರದ ಪೊಟ್ಟಣಗಳೊಂದಿಗೆ ಬಂದು ಪಾರ್ಟಿ ಮುಗಿಸಿ ಬೆಟ್ಟವನ್ನು ಗಬ್ಬೆಬ್ಬಿಸಿ ಹೋಗುತ್ತಿದ್ದಾರೆ. ಇಲ್ಲಿಗೆ ಚಿಕ್ಕಜಾಲ ಬೀಟ್ ಪೊಲೀಸರು ಯಾವಾಗಲಾದರೂ ಒಮ್ಮೆ ಬರುತ್ತಾರಾದರೂ ಇದುವರೆಗೂ ಯಾರ ಮೇಲೂ ಕ್ರಮ ಕೈಗೊಂಡ ಉದಾಹರಣೆಯೇ ಇಲ್ಲ ಎನ್ನುತ್ತಾರೆ ಸ್ಥಳೀಯರು.

ಪ್ರವಾಸಿ ತಾಣವಾಗಬಹುದಾದ ಬೆಟ್ಟ

ಬೆಂಗಳೂರು ಉತ್ತರ ತಾಲೂಕಿನ ಮಾರನಾಯಕನಹಳ್ಳಿ ಹಾಗೂ ಚಿಕ್ಕಜಾಲ ಸರ್ವೆ ನಂಬರ್ ಗಳಲ್ಲಿ ಹಂಚಿಕೊಂಡಿರುವ ಅಕ್ಕಯ್ಯಮ್ಮನ ಬೆಟ್ಟ ಒಟ್ಟು 120 ಎಕರೆ ವಿಸ್ತೀರ್ಣದಲ್ಲಿ ವ್ಯಾಪಿಸಿದೆ. ನೆತ್ತಿಯಲ್ಲಿ ತಂಪು ಹವಾಗುಣ ಹೊಂದಿರುವ ಬೆಟ್ಟವನ್ನು ನಗರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿ ಅಭಿವದ್ಧಿಪಡಿಸಲು ಸಾಕಷ್ಟು ಅವಕಾಶಗಳಿವೆ. ಶ್ರೀಅಕ್ಕಯ್ಯಮ್ಮ ಮುನೇಶ್ವರ ಸ್ವಾಮಿ ಸೇವಾಭಿವದ್ಧಿ ಟ್ರಸ್ಟ್ ಹಿಂದೊಮ್ಮೆ ಬೆಟ್ಟಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ನೀರು, ವಿದ್ಯುತ್, ಸ್ವಲ್ಪಮಟ್ಟಿಗೆ ರಸ್ತೆ ನಿರ್ಮಾಣ ಮಾಡಿಕೊಟ್ಟಿದೆ. ಆದರೆ ಸ್ಥಳೀಯ ಮುಖಂಡರು ಮತ್ತು ಜಿಲ್ಲಾಡಳಿತದ ನಿರ್ಲಕ್ಷದಿಂದಾಗಿ ಯಾವುದೇ ಅಭಿವೃದ್ಧಿ ಕಾಣದ ಬೆಟ್ಟ ಇತ್ತೀಚೆಗೆ ಸುತ್ತಲೂ ಒತ್ತುವರಿಯಾಗುತ್ತಿದೆ. ಇವೆಲ್ಲವೂ ಸರಿಹೋಗಬೇಕು ಎಂಬುದು ಸ್ಥಳೀಯರ ಆಶಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News