ನಟ-ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ ಪ್ರಕರಣ: 109 ಕೋಟಿ ರೂ.ಅಘೋಷಿತ ಆದಾಯ ಪತ್ತೆ

Update: 2019-01-06 13:32 GMT

ಬೆಂಗಳೂರು, ಜ.6: ಕನ್ನಡ ಚಿತ್ರರಂಗದ ನಟ-ನಿರ್ಮಾಪಕರ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಪ್ರಕರಣ ಸಂಬಂಧ ಬರೋಬ್ಬರಿ 109 ಕೋಟಿ ರೂ. ಗಳಿಗೂ ಅಧಿಕ ಮೌಲ್ಯದ ಅಘೋಷಿತ ಆದಾಯವನ್ನು ಪತ್ತೆ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕೃತ ಮೂಲಗಳು ತಿಳಿಸಿವೆ.

ಜ.3ರಿಂದ ಸತತ ಎರಡು ದಿನಗಳ ಕಾಲ ಚಿತ್ರನಟರಾದ ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ಸುದೀಪ್, ಯಶ್ ಮತ್ತವರ ಪತ್ನಿ ರಾಧಿಕಾ ಪಂಡಿತ್, ನಿರ್ಮಾಪರಾದ ರಾಕ್‌ಲೈನ್ ವೆಂಕಟೇಶ್, ವಿಜಯ್ ಕಿರಗಂದೂರು ಅವರ ನಿವಾಸದಲ್ಲಿ ಐಟಿ ತನಿಖಾಧಿಕಾರಿಗಳು ಶೋಧ ನಡೆಸಿದ್ದರು.

ಈ ಸಂಬಂಧ ರವಿವಾರ ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿರುವ ಕರ್ನಾಟಕ ಹಾಗೂ ಗೋವಾ ವಲಯದ ಆದಾಯ ತೆರಿಗೆ ಇಲಾಖೆ, ದಾಳಿಯಲ್ಲಿ ಒಟ್ಟಾರೆ 25.3 ಕೆಜಿ ಚಿನ್ನಾಭರಣ, 2.85 ಕೋಟಿ ರೂ.ನಗದು ಹಾಗೂ ಅಘೋಷಿತ(ದಾಖಲೆ ಇಲ್ಲದ) 11 ಕೋಟಿ ರೂ.ನಗದು ಸೇರಿದಂತೆ 109 ಕೋಟಿ ರೂ. ಮೊತ್ತದ ದಾಖಲೆ ರಹಿತ ಆದಾಯ ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ಕರ್ನಾಟಕ ಹಾಗೂ ಗೋವಾದ ಸುಮಾರು 180 ಅಧಿಕಾರಿಗಳಿಂದ 21 ಸ್ಥಳಗಳಲ್ಲಿ ಐಟಿ ದಾಳಿ ನಡೆದಿದ್ದು, ಇದಕ್ಕೂ ಮುನ್ನಾ 3 ತಿಂಗಳ ಕಾಲ ಇಲಾಖೆಯೂ ಪ್ರಾಥಮಿಕ ತನಿಖೆ ನಡೆಸಿ ಮಾಹಿತಿ ಸಂಗ್ರಹ ಮಾಡಿತ್ತು. ಇನ್ನೂ, ಸಿನಿಮಾ ನಿರ್ಮಾಣ ಕಂಪೆನಿಗಳು, ನಿರ್ಮಾಪಕರು, ನಟರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಯಿತು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ದಾಳಿ ಸಂದರ್ಭದಲ್ಲಿ ಸಿನಿಮಾ ನಿರ್ಮಾಣ ಹಾಗೂ ವಿತರಣೆಯಲ್ಲಿ ದಾಖಲೆ ಇಲ್ಲದೆ, ಖರ್ಚು ವೆಚ್ಚಗಳ ಬಗ್ಗೆ ಸಾಕ್ಷ ದೊರೆತಿದೆ. ಅದರಲ್ಲೂ ದಾಖಲೆಯಿಲ್ಲದ ಚಿತ್ರಮಂದಿರಗಳಲ್ಲಿ ಹಣ ಪಡೆಯುವುದು, ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಐಟಿ ತಿಳಿಸಿದೆ.

ಇಲಾಖೆಯ ದಾಳಿಯಿಂದ ನಟರು ಹಾಗೂ ನಿರ್ಮಾಪಕರು ದಾಖಲೆ ರಹಿತ ಆದಾಯ ದಿಂದ ಆಸ್ತಿ ಹಾಗೂ ಆಭರಣಗಳಿಗೆ ಹಣ ಹೂಡಿರುವುದು ಪತ್ತೆಯಾಗಿದೆ. ಧ್ವನಿ ಸುರುಳಿ, ಡಿಜಿಟಲ್ ಸೇರಿದಂತೆ ಅನೇಕ ಮಾರಾಟದಲ್ಲೂ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಮಾಧ್ಯಮ ಪ್ರಕಟನೆಯಲ್ಲಿ ಉಲ್ಲೇಖ ಮಾಡಲಾಗಿದೆ.

ವಿಚಾರಣೆ?: ದಾಳಿಯ ವೇಳೆ ಪತ್ತೆಯಾದ ಆಸ್ತಿ, ಹಣ, ಆದಾಯದ ಒಟ್ಟು ಮಾಹಿತಿಯನ್ನು ಮಾತ್ರ ಐಟಿ ಅಧಿಕಾರಿಗಳು ನೀಡಿದ್ದಾರೆ. ಆದರೆ, ವೈಯಕ್ತಿಕವಾಗಿ ಯಾವುದೇ ನಟ, ನಿರ್ಮಾಪಕರ ಮನೆಯಲ್ಲಿ ಎಷ್ಟು ಹಣ ಲಭಿಸಿದೆ ಎಂಬ ಬಗ್ಗೆ ಮಾಹಿತಿ ದೊರೆತಿಲ್ಲ.

ಸದ್ಯ ಐಟಿ ಇಲಾಖೆ ವಶಕ್ಕೆ ಪಡೆದಿರುವ ಆದಾಯ ಹಾಗೂ ಹಣದ ಬಗ್ಗೆ ಇಂದಿನಿಂದ(ಸೋಮವಾರ) ವಿಚಾರಣೆ ನಡೆಸುವ ಸಾಧ್ಯತೆ ಇದೆ. ನಟ ಹಾಗೂ ನಿರ್ಮಾಪಕರು ಐಟಿ ಇಲಾಖೆಗೆ ಆಗಮಿಸಿ ಸೂಕ್ತ ದಾಖಲೆ ಹಾಗೂ ಸ್ಪಷ್ಟನೆ ನೀಡಲು ಅವಕಾಶವೂ ಇದೆ ಎಂದು ಐಟಿ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು ತಿಳಿಸಿದರು.

ಇಡಿಗೆ ಪತ್ರ, ಮೊಕದ್ದಮೆ..?

ಐಟಿ ಅಧಿಕಾರಿಗಳು ಸಂಗ್ರಹಿಸಿರುವ ಮಾಹಿತಿಯನ್ನು ಇಡಿ ಇಲಾಖೆಗೆ ಪತ್ರ ಬರೆದಿದ್ದಾರೆ ಎನ್ನಲಾಗಿದ್ದು, ಒಂದೊಮ್ಮೆ ಇಡಿ ಅಧಿಕಾರಿಗಳು ಪ್ರಕರಣಕ್ಕೆ ಪ್ರವೇಶ ಪಡೆದರೆ ಎಲ್ಲರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ತೆರಿಗೆ ವಂಚನೆ ಮಾಡಲು ಹಣ ವರ್ಗಾವಣೆ ಮಾಡಿರುವುದು ಸಾಬೀತಾದರೆ ಇಡಿ ಪ್ರಕರಣ ದಾಖಲಿಸುವ ಸಾಧ್ಯತೆಯೂ ಇದೆ. ಸದ್ಯ ಲಭ್ಯವಾಗಿರುವ ಮಾಹಿತಿ ಅನ್ವಯ ಐಟಿ ಕಾಯ್ದೆ 278 (ಡಿ) ಅಡಿ ಪ್ರಕರಣ ದಾಖಲಿಸಲು ಐಟಿ ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮೊತ್ತ ಹೆಚ್ಚಾಗುವ ಸಾಧ್ಯತೆ..!

ಸಿನಿಮಾದಿಂದ ಪಡೆದ ಆದಾಯದೊಂದಿಗೆ ಬೇರೆ ಬೇರೆ ವ್ಯವಹಾರಗಳಲ್ಲಿ ಹೂಡಿಕೆ ಮಾಡಿರುವ ಬಗ್ಗೆ ಸ್ಪಷ್ಟವಾಗಿದ್ದು, ಈ ಮೂಲಗಳಿಂದ ಬಂದ ಆದಾಯದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆದ್ದರಿಂದ ಒಟ್ಟು ಮೊತ್ತದಲ್ಲಿ ಹೆಚ್ಚಾಗುವ ಸಾಧ್ಯತೆಯ ಬಗ್ಗೆಯೂ ಐಟಿ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News