×
Ad

ಸಂಸ್ಕೃತ ಭಾಷೆ ಕಲಿಕೆಗೆ ಆದ್ಯತೆ ನೀಡಿ: ಸೌಮ್ಯನಾಥ ಸ್ವಾಮೀಜಿ

Update: 2019-01-06 19:37 IST

ಬೆಂಗಳೂರು, ಜ.6: ಕೇಂದ್ರ ಮತ್ತು ರಾಜ್ಯ ಸರಕಾರಗಳು ಪ್ರಾಥಮಿಕ ಶಾಲೆಯಿಂದ ಪದವಿವರೆಗೂ ಸಂಸ್ಕೃತ ಭಾಷೆ ಕಲಿಕೆಗೆ ಆದ್ಯತೆ ನೀಡಬೇಕು ಎಂದು ವಿಜಯನಗರದ ಆದಿಚುಂಚನಗಿರಿ ಶಾಖಾಮಠದ ಸೌಮ್ಯನಾಥ ಸ್ವಾಮೀಜಿ ತಿಳಿಸಿದ್ದಾರೆ.

ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಭಾನುವಾರ ಸಮ್ಯಕ್ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾದ ಸಂಸ್ಕೃತಕ್ಕಾಗಿ ಓಟ ಹಾಗೂ ಸಭಾ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸಂಸ್ಕೃತ ಭಾಷೆ ಕಲಿಯಲು ಇಚ್ಛಿಸುವವರಿಗೆ ಪ್ರೋತ್ಸಾಹ ನೀಡಬೇಕು. ಪ್ರತಿಯೊಬ್ಬರು ಸರಳ ರೀತಿಯಲ್ಲಿ ಸಂಸ್ಕೃತ ಭಾಷೆ ಕಲಿಯುವಂತಾಗಬೇಕು. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಂದನೇ ತರಗತಿಯಿಂದಲೇ ಸಂಸ್ಕೃತ ಬೋಧನೆಗೆ ಒತ್ತು ನೀಡಬೇಕು. ಪ್ರಾಥಮಿಕ ಶಾಲೆಯಿಂದ ಪದವಿವರೆಗೂ ಸಂಸ್ಕೃತ ಕಲಿಯಲು ಇಚ್ಛಿಸುವವರಿಗೆ ಅಗತ್ಯ ಪರಿಕರಗಳನ್ನು ಒದಗಿಸಬೇಕು. ಸಂಸ್ಕೃತ ಭಾಷೆ ಬೆಳವಣಿಗೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಸಂಸ್ಕೃತಕ್ಕಾಗಿ ಓಟ ಮ್ಯಾರಥಾನ್‌ನಲ್ಲಿ 1,200 ವಿದ್ಯಾರ್ಥಿಗಳು ಸೇರಿದಂತೆ ಸಂಸ್ಕೃತ ಭಾಷೆಯ ಪ್ರೇಮಿಗಳು ಭಾಗವಹಿಸಿದ್ದರು. ಸಂಸ್ಕೃತಕ್ಕಾಗಿ ಓಟ ಮ್ಯಾರಥಾನ್ ನ್ಯಾಷನಲ್ ಕಾಲೇಜು ಮೈದಾನದಿಂದ ರಾಮಕೃಷ್ಣ ಮಠ, ಉಮಾ ಚಿತ್ರಮಂದಿರ, ಮಕ್ಕಳಕೂಟ ಮಾರ್ಗವಾಗಿ ಶ್ರೀಸತ್ಯಪ್ರಮೋದ ಕಲ್ಯಾಣ ಮಂಟಪ್ಪ ಬಂದು ತಲುಪಿತು. ಇದೇ ವೇಳೆ ಸ್ವಾಮಿ ವಿವೇಕಾನಂದರ ಚಿತ್ರ ರಚಿಸಿದ 500 ಮಕ್ಕಳಿಗೆ ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಬೆಲ್ಜಿಯಂನ ವಾಣಿಜ್ಯ ಆಯುಕ್ತ ಜಯಂತ್ ನಾಡ್ಗೀರ, ಸಹೋದರಿ ನಿವೇದಿತಾ ಪ್ರತಿಷ್ಠಾನದ ಕಾರ್ಯದರ್ಶಿ ಉಷಾ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News