14 ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕ: ಮುಖ್ಯಮಂತ್ರಿ ಆದೇಶ
ಬೆಂಗಳೂರು, ಜ.6: ರಾಜ್ಯದ 14 ಪ್ರಮುಖ ನಿಗಮ, ಮಂಡಳಿ, ಪ್ರಾಧಿಕಾರ, ಸಂಸ್ಥೆ, ಸಮಿತಿ, ಆಯೋಗಗಳಿಗೆ 14 ಶಾಸಕರನ್ನು ಅಧ್ಯಕ್ಷರನ್ನಾಗಿ, ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಈ ಕೂಡಲೆ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರವಿವಾರ ಆದೇಶ ಹೊರಡಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ 19 ಮಂದಿ ಶಾಸಕರಿಗೆ ನಿಗಮ, ಮಂಡಳಿಯ ಅಧ್ಯಕ್ಷ ಸ್ಥಾನ, 5 ಮಂದಿ ಶಾಸಕರು ಹಾಗೂ 4 ವಿಧಾನಪರಿಷತ್ ಸದಸ್ಯರಿಗೆ ಸಂಸದೀಯ ಕಾರ್ಯದರ್ಶಿಗಳ ಸ್ಥಾನಮಾನ ನೀಡುವಂತೆ ಡಿ.21ರಂದು ಮುಖ್ಯಮಂತ್ರಿಗೆ ಶಿಫಾರಸ್ಸು ಮಾಡಿತ್ತು.
ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ(ಭೂ ಸೇನಾ) ನಿಗಮ (ಕೆಆರ್‌ಐಡಿಎಲ್)ದ ಅಧ್ಯಕ್ಷ-ಬಿ.ಕೆ.ಸಂಗಮೇಶ್(ಭದ್ರಾವತಿ ಶಾಸಕ), ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ-ಆರ್.ನರೇಂದ್ರ( ಹನೂರು ಶಾಸಕ), ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ-ಬಿ.ನಾರಾಯಣ ರಾವ್(ಬಸವಕಲ್ಯಾಣ ಶಾಸಕ).
ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ-ಡಾ.ಉಮೇಶ್ ಜಿ.ಜಾಧವ್(ಚಿಂಚೋಳಿ ಶಾಸಕ), ಹಟ್ಟಿ ಚಿನ್ನದ ಗಣಿ ಕಂಪೆನಿ ನಿಯಮಿತದ ಅಧ್ಯಕ್ಷ-ಟಿ.ರಘುಮೂರ್ತಿ(ಚಳ್ಳಕೆರೆ ಶಾಸಕ), ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ-ಯಶವಂತರಾಯಗೌಡ ಬಿ.ಪಾಟೀಲ್(ಇಂಡಿ ಶಾಸಕ).
ರಾಜ್ಯ ಸಾಬೂನು ಮತ್ತು ಮಾರ್ಜಕ ನಿಯಮಿತದ ಅಧ್ಯಕ್ಷ- ಬಿ.ಎ.ಬಸವರಾಜ (ಕೆ.ಆರ್.ಪುರ ಶಾಸಕ), ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್)ದ ಅಧ್ಯಕ್ಷ-ಬಿ.ಶಿವಣ್ಣ (ಆನೇಕಲ್ ಶಾಸಕ), ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ-ಎಸ್.ಎನ್.ನಾರಾಯಣಸ್ವಾಮಿ (ಬಂಗಾರಪೇಟೆ ಶಾಸಕ).
ರಾಜ್ಯ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ-ಮುನಿರತ್ನ (ರಾಜರಾಜೇಶ್ವರಿ ನಗರ ಶಾಸಕ), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(NW-KSRTC) ಅಧ್ಯಕ್ಷ-ಅರಬೈಲ್ ಶಿವರಾಂ ಹೆಬ್ಬಾರ್(ಯಲ್ಲಾಪುರ ಶಾಸಕ), ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ-ಬಿ.ಎಸ್.ಸುರೇಶ್(ಹೆಬ್ಬಾಳ ಶಾಸಕ), ರಾಜ್ಯ ಖನಿಜ ನಿಗಮ(ಮೈಸೂರು ಮಿನರಲ್ಸ್)ದ ಅಧ್ಯಕ್ಷೆ-ಲಕ್ಷ್ಮೀಹೆಬ್ಬಾಳ್ಕರ್(ಬೆಳಗಾವಿ ಗ್ರಾಮೀಣ) ಹಾಗೂ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ- ಟಿ.ಡಿ.ರಾಜೇಗೌಡ(ಶೃಂಗೇರಿ ಶಾಸಕ)ರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಕೈ ತಪ್ಪಿದ ಅಧಿಕಾರ ? : ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಟಿ.ವೆಂಕಟರಮಣಯ್ಯ, ರಾಜ್ಯ ರೇಷ್ಮೆ ಕೈಗಾರಿಕಾ ನಿಗಮದ ಅಧ್ಯಕ್ಷರನ್ನಾಗಿ ಎಸ್.ಎನ್.ಸುಬ್ಬಾರೆಡ್ಡಿ, ಬಿಎಂಆರ್‌ಟಿಸಿ ಅಧ್ಯಕ್ಷರನ್ನಾಗಿ ಎನ್.ಎ.ಹಾರೀಸ್, ಬಿಡಿಎ ಅಧ್ಯಕ್ಷರಾಗಿ ಎಸ್.ಟಿ.ಸೋಮಶೇಖರ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ಡಾ.ಕೆ.ಸುಧಾಕರ್, ಸಂಸದೀಯ ಕಾರ್ಯದರ್ಶಿಯಾಗಿ ವಿಧಾನಪರಿಷತ್ ಸದಸ್ಯ ಎಂ.ಎ.ಗೋಪಾಲ ಸ್ವಾಮಿ.
ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಶಾಸಕ ಶರಣಬಸಪ್ಪ ದರ್ಶನಾಪುರ್, ಹೊಸದಿಲ್ಲಿಯ ವಿಶೇಷ ಪ್ರತಿನಿಧಿಯಾಗಿ ಶಾಸಕ ಡಾ.ಅಜಯ್‌ಸಿಂಗ್ ಹಾಗೂ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಯನ್ನಾಗಿ ಶಾಸಕ ವಿ.ಮುನಿಯಪ್ಪರನ್ನು ನೇಮಕ ಮಾಡುವಂತೆ ಕಾಂಗ್ರೆಸ್ ಹೈಕಮಾಂಡ್ ಶಿಫಾರಸ್ಸು ಮಾಡಿತ್ತು. ಆದರೆ, ಇವರ ನೇಮಕಾತಿ ಸಂಬಂಧ ಮುಖ್ಯಮಂತ್ರಿ ಯಾವುದೇ ನಿರ್ಧಾರ ಕೈಗೊಂಡಿಲ್ಲ.