×
Ad

ಅಪರೂಪದ ಕಲಾಮೇಳ ಶಾಶ್ವತವಾಗಿರಲಿ: ಬಿಬಿಎಂಪಿ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ

Update: 2019-01-06 22:40 IST

ಬೆಂಗಳೂರು, ಜ.6: ಚಿತ್ರಕಲೆಯನ್ನು ಉತ್ತೇಜಿಸುವ ಚಿತ್ರಸಂತೆಯೂ ಅಪರೂಪದ ಕಲಾಮೇಳವಾಗಿದ್ದು, ಇಂತಹ ಸಂತೆಗಳು ಶಾಶ್ವತವಾಗಿರಬೇಕು ಎಂದು ಬಿಬಿಎಂಪಿ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ ತಿಳಿಸಿದರು.

ರವಿವಾರ ನಗರದ ಚಿತ್ರಕಲಾ ಪರಿಷತ್ತು ಆಯೋಜಿಸಿದ್ದು, 16ನೇ ಚಿತ್ರ ಸಂತೆ ಉದ್ಘಾಟಿಸಿ ಮಾತನಾಡಿದ ಅವರು, ನಾನು ಇದೇ ಮೊದಲ ಬಾರಿ ಚಿತ್ರಸಂತೆಗೆ ಬರುತ್ತಿದ್ದೇನೆ. ಒಂದಕ್ಕಿಂತ ಒಂದು ಆಕರ್ಷಕವಾದ ಚಿತ್ರಕಲೆಗಳು ಇಲ್ಲಿವೆ. ಕಲಾಕೃತಿಗಳನ್ನು ನೋಡಿದರೆ ಸಂತೋಷವಾಗುತ್ತದೆ ಎಂದರು.

ಕಲಾವಿದರಿಗೆ ಉತ್ತೇಜನ ನೀಡುವ ಇಂತಹ ಚಿತ್ರಸಂತೆಗಳು ನಡೆಯಬೇಕು. ಇದಕ್ಕೆ ಎಲ್ಲ ರೀತಿಯ ಸಹಕಾರ ಬಿಬಿಎಂಪಿ ನೀಡಲಿದೆ ಎಂದ ಅವರು, ಚಿತ್ರ ಸಂಸ್ಕೃತಿ ಪ್ರತಿ ತಾಲ್ಲೂಕು ವ್ಯಾಪ್ತಿಯಲ್ಲೂ ನಡೆಯಬೇಕು ಎಂದು ಹೇಳಿದರು.

ಸಂಸದ ಪಿ.ಸಿ.ಮೋಹನ್ ಮಾತನಾಡಿ, ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಈ ಚಿತ್ರಸಂತೆ ಇಡೀ ದೇಶದಲ್ಲೇ ಮನೆ ಮಾತಾಗಿದೆ. ಎಲ್ಲೆಡೆ ಚಿತ್ರಸಂತೆಯ ಬಗ್ಗೆ ಮಾತನಾಡುತ್ತಾರೆ ಎಂದು ನುಡಿದರು.

ಕಲಾವಿದ ಎಂ.ಎಚ್.ಕೃಷ್ಣಯ್ಯ ಮಾತನಾಡಿ, ಪ್ರತಿವರ್ಷ ಚಿತ್ರಸಂತೆ ಒಂದು ವಿಷಯದ ಮೇಲೆ ನಡೆಯಲಿದೆ. ಈ ವರ್ಷ ಗಾಂಧೀಜಿ ವಿಚಾರಧಾರೆ ಮೇಲೆ ಈ ಚಿತ್ರಸಂತೆ ನಡೆದಿರುವುದು ಸಂತಸ ತಂದಿದೆ ಎಂದು ಹೇಳಿದರು.

ಕಿರಿಯರ ಸೃಜನಶೀಲಾ ಮನಸ್ಸುಗಳು ಚಿತ್ರಸಂತೆಯ ಮೂಲಕ ಜಗತ್ತಿಗೆ ಪರಿಚಯವಾಗುತ್ತಿದೆ. ಕಿರಿಯರು ತಾವು ನೋಡಿದ, ಅನುಭವಿಸಿ, ಕೇಳಿದ್ದನ್ನು ತಮ್ಮ ಸೃಜನಶೀಲತೆಯ ಮೂಲಕ ಅನಾವರಣಗೊಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರಕಲಾ ಪರಿಷತ್ತು ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ಗಾಂಧೀಜಿ ಅವರ 150ನೇ ಜಯಂತಿ ಅಂಗವಾಗಿ ಈ ಚಿತ್ರಸಂತೆಯನ್ನು ಮಹಾತ್ಮಗಾಂಧಿ ಅವರಿಗೆ ಸಮರ್ಪಿಸಲಾಗಿದೆ. ಗಾಂಧೀಜಿ ಅವರು ಈ ಹಿಂದೆ ಬೆಂಗಳೂರಿಗೆ ಬಂದಾಗ 9 ದಿನಗಳ ಕಾಲ ಕುಮಾರಕೃಪಾ ಅತಿಥಿ ಗೃಹದಲ್ಲಿ ತಂಗಿದ್ದರು. ಆಗ ಅವರು ಇಲ್ಲೇ ವಾಯುವಿಹಾರ ನಡೆಸಿ ಚಿತ್ರಕಲಾ ಪರಿಷತ್ತು ಆವರಣದಲ್ಲಿರುವ ಬಂಡೆ ಮೇಲೆ ಧ್ಯಾನ ಮಾಡಿದ್ದರು ಎಂಬ ಮಾಹಿತಿ ಇದೆ. ಅದರಂತೆ ಅಲ್ಲಿ ಗಾಂಧೀಜಿ ಅವರ ಪ್ರತಿಕೃತಿಯನ್ನು ರೂಪಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಕಿರಣ್‌ಕುಮಾರ್, ಸಚಿವ ಜಿ.ಟಿ.ದೇವೇಗೌಡ, ಮಾಜಿ ಸಚಿವೆ ರಾಣಿ ಸತ್ತೀಶ್ ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಪ್ರೊ.ಎಂ.ಜಿ. ಕಮಲಾಕ್ಷಿ, ಉಪಾಧ್ಯಕ್ಷರಾದ ಹರೀಶ್ ಜೆ. ಪದ್ಮನಾಭ, ಟಿ. ಪ್ರಭಾಕರ್ ಸೇರಿದಂತೆ ಪ್ರಮುಖರಿದ್ದರು.

‘ಸಂತಸ ತಂದಿದೆ ’

ಕಲಾವಿದರ ಕಲಾಕೃತಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸುವ ಪೂರಕವಾಗಿ ಚಿತ್ರಸಂತೆ ಕಾರ್ಯ ನಿರ್ವಹಿಸುತ್ತಿದೆ. ಈ ಮೂಲಕ ಕಲಾವಿದರ ಕಲೆಗೆ ವ್ಯಾಪಕ ಪ್ರಚಾರ ಹಾಗೂ ಮಾರುಕಟ್ಟೆ ಒದಗಿಸುತ್ತಿರುವುದು ಸಂತಸದ ವಿಚಾರ

-ಜಿ.ಟಿ.ದೇವೇಗೌಡ, ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News