ಮೆಸ್ಸಿ ದಾಖಲೆ ಹಿಂದಿಕ್ಕಿದ ಚೆಟ್ರಿ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

Update: 2019-01-07 05:23 GMT

 ಅಬುಧಾಬಿ, ಜ.7: ‘‘ದಾಖಲೆಗಳು, ಯಾರು ಗೋಲು ಬಾರಿಸಿದರು ಎನ್ನುವುದು ವಿಷಯವಲ್ಲ. ಯಾರೇ ಗೋಲು ಬಾರಿಸಿದರೂ ಸಂಭ್ರಮ ಒಂದೇಯಾಗಿರುತ್ತದೆ. ಎಎಫ್‌ಸಿ ಏಶ್ಯಕಪ್‌ನಲ್ಲಿ ನನ್ನ ತಂಡಕ್ಕೆ ಮೂರು ಅಂಕ ಗಳಿಸಿಕೊಟ್ಟಿದ್ದಕ್ಕೆ ಸಂತೋಷವಿದೆ’’ ಎಂದು ಭಾರತದ ಹಿರಿಯ ಆಟಗಾರ ಸುನೀಲ್ ಚೆಟ್ರಿ ಹೇಳಿದ್ದಾರೆ.

ರವಿವಾರ ನಡೆದ ಥಾಯ್ಲೆಂಡ್ ವಿರುದ್ಧ 4-1 ಅಂತರದಿಂದ ಜಯ ಸಾಧಿಸಿದ್ದ ಭಾರತದ ಪರ ಅವಳಿ ಗೋಲು ಗಳಿಸಿದ್ದ ಚೆಟ್ರಿ 1964ರ ಬಳಿಕ ಏಶ್ಯಕಪ್‌ನಲ್ಲಿ ಭಾರತಕ್ಕೆ ಮೊದಲ ಜಯ ತಂದಿದ್ದರು. ಮಾತ್ರವಲ್ಲ ವೃತ್ತಿಜೀವನದ 67ನೇ ಗೋಲು ಗಳಿಸಿ ಸಕ್ರಿಯ ಅಂತರ್‌ರಾಷ್ಟ್ರೀಯ ಫುಟ್ಬಾಲ್ ಆಟಗಾರರ ಪೈಕಿ 2ನೇ ಗರಿಷ್ಠ ಗೋಲ್‌ಸ್ಕೋರರ್ ಎನಿಸಿಕೊಂಡು ಅರ್ಜೆಂಟೀನದ ಸೂಪರ್‌ಸ್ಟಾರ್ ಲಿಯೊನೆಲ್ ಮೆಸ್ಸಿ ದಾಖಲೆಯನ್ನು ಹಿಂದಿಕ್ಕಿದರು.

     ಮೆಸ್ಸಿ ಹಾಗೂ ರೊನಾಲ್ಡೊರ ನಡುವಿನ ಅಂಕಿ-ಅಂಶ ಹಾಗೂ ಗೋಲು ಗಳಿಕೆಯೊಂದಿಗೆ ತನ್ನ ಸಾಧನೆಯನ್ನು ಹೋಲಿಕೆ ಮಾಡುವ ಕುರಿತು ಕಳೆದ ವರ್ಷ ಪ್ರತಿಕ್ರಿಯಿಸಿದ್ದ ಚೆಟ್ರಿ,‘‘ಇದು ನ್ಯಾಯೋಚಿತವಲ್ಲ. ಮೆಸ್ಸಿ, ರೊನಾಲ್ಡೊ ಇಬ್ಬರೂ ವಿಶ್ವ ದರ್ಜೆಯ ಸ್ಟಾರ್‌ಗಳು. ನಾನು ಮೆಸ್ಸಿ ಹಾಗೂ ರೊನಾಲ್ಡೊರ ದೊಡ್ಡ ಅಭಿಮಾನಿ. ಅವರಿಬ್ಬರಿಗೆ ಹಾಗೂ ನನಗೆ ತುಂಬಾ ವ್ಯತ್ಯಾಸವಿದೆ. ಅವರಿಬ್ಬರೊಂದಿಗೆ ಹೋಲಿಕೆ ಸರಿಯಲ್ಲ’’ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News